
Bengaluru : ‘ಗೌರವ’ ಕೊಡೋಕೆ ನಾವ್ ರೆಡಿ, ಮೊದಲು ರಸ್ತೆ ಸರಿ ಮಾಡಿಸಿ ಸಾರ್! ಶಿವಲಿಂಗೇಗೌಡರ ಹೇಳಿಕೆಗೆ ವಾಹನ ಸವಾರರ ಸವಾಲ್!
‘ಕೆಲಸ ಮಾಡಿಕೊಟ್ಟ ಅಧಿಕಾರಿಗಳಿಗೆ ಗೌರವಯುತವಾಗಿ ಕೊಡೋದು ನಿಮ್ಮ ಧರ್ಮ’ ಎಂಬ ಸಚಿವ ಕೆ.ಎಂ. ಶಿವಲಿಂಗೇಗೌಡರ ಹೇಳಿಕೆ ವಿವಾದದ ಬೆನ್ನಲ್ಲೇ, ಸೋಶಿಯಲ್ ಮಿಡಿಯಾಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಇದೀಗ ಇದೇ ‘ಗೌರವಯುತ’ ಪದವನ್ನು ಬಳಸಿಕೊಂಡು ಬೆಂಗಳೂರಿನ ರಸ್ತೆ ಗುಂಡಿಗಳ ಸಮಸ್ಯೆ ವಿರುದ್ಧವೂ ವಾಹನ ಸವಾರರು ವ್ಯಂಗ್ಯಾತ್ಮಕವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಿವಲಿಂಗೇಗೌಡರು ನೀಡಿದ್ದ ಹೇಳಿಕೆ ವೈರಲ್
ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ನಡೆದ ಪ್ರಜಾಸೇವಾ ಆಂದೋಲನದ ವೇಳೆ ಸಚಿವ ಶಿವಲಿಂಗೇಗೌಡರು ನೀಡಿದ್ದ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ಹೇಳಿಕೆಗೆ ಸಾರ್ವಜನಿಕರು ಹಾಗೂ ಪ್ರತಿಪಕ್ಷಗಳಿಂದ ಆಕ್ಷೇಪ ವ್ಯಕ್ತವಾಗಿದ್ದು, ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಕೂಡ ಸಚಿವರನ್ನು ಟೀಕಿಸಿದ್ದರು.

ತಮ್ಮ ಮಾತನ್ನು ತಪ್ಪಾಗಿ ಅರ್ಥೈಸಲಾಗಿದೆ
ವಿವಾದ ತೀವ್ರಗೊಂಡ ಬಳಿಕ ಸ್ಪಷ್ಟನೆ ನೀಡಿದ್ದ ಶಿವಲಿಂಗೇಗೌಡರು, ತಾವು ಯಾವುದೇ ಅಧಿಕಾರಿಗೆ ಹಣ ಅಥವಾ ಲಂಚ ನೀಡುವಂತೆ ಹೇಳಿಲ್ಲ ಎಂದು ತಿಳಿಸಿದ್ದಾರೆ. ಅಧಿಕಾರಿಗಳೊಂದಿಗೆ ಗೌರವಯುತವಾಗಿ ನಡೆದುಕೊಳ್ಳಬೇಕು ಹಾಗೂ ಕೆಲಸವಾದ ಬಳಿಕ ಕೃತಜ್ಞತೆ ಸಲ್ಲಿಸಬೇಕು ಎಂಬ ಅರ್ಥದಲ್ಲಿ ಮಾತನಾಡಿದ್ದಾಗಿ ಅವರು ಸಮರ್ಥಿಸಿಕೊಂಡಿದ್ದಾರೆ. ವೈರಲ್ ಆಗಿರುವ ವಿಡಿಯೋದಲ್ಲಿ ತಮ್ಮ ಮಾತನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂಬುದು ಸಚಿವರ ವಾದವಾಗಿದೆ.
‘ಗೌರವಯುತವಾಗಿ ರಸ್ತೆ ಸರಿ ಮಾಡಿಸಿ ಸಾರ್’
ಇದರ ಬೆನ್ನಲ್ಲೇ ಬೆಂಗಳೂರಿನ ಪೀಣ್ಯ ಮುಖ್ಯರಸ್ತೆಯ ಗುಂಡಿಗಳ ಸಮಸ್ಯೆ ಇದೀಗ ಸಚಿವರ ಹೇಳಿಕೆಗೆ ವ್ಯಂಗ್ಯದ ರೂಪ ನೀಡಿದೆ. ರಸ್ತೆ ಗುಂಡಿಗಳಿಂದ ಬೇಸತ್ತ ವಾಹನ ಸವಾರರು, ‘ಗೌರವಯುತವಾಗಿ ಏನು ಕೊಡಬೇಕೋ ಕೊಡುತ್ತೇವೆ, ಗೌರವಯುತವಾಗಿ ರಸ್ತೆ ಸರಿ ಮಾಡಿಸಿ ಸಾರ್’ ಎಂಬ ಅರ್ಥದ ಫಲಕಗಳನ್ನು ಪ್ರದರ್ಶಿಸಿ ರಸ್ತೆ ದುರಸ್ತಿಗೆ ಒತ್ತಾಯಿಸಿದ್ದಾರೆ.

READ THIS : ಖರ್ಗೆ ನಂತರ ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕರೇ ಆಗಬಹುದು – ಶಿವಲಿಂಗೇಗೌಡ
ಪೀಣ್ಯ ರಸ್ತೆಯ ಫುಟ್ಪಾತ್ಗಳಲ್ಲಿ ‘ಗೌರವಯುತ’ ಎಂಬ ಪದವನ್ನು ಪ್ರಮುಖವಾಗಿ ಬಳಸಿಕೊಂಡು ಫಲಕಗಳನ್ನು ಅಳವಡಿಸಲಾಗಿದ್ದು, ‘ಇಂತಿ ನೊಂದ ಸವಾರರು’ ಎಂದು ಉಲ್ಲೇಖಿಸಲಾಗಿದೆ. ಈ ಮೂಲಕ ಸಚಿವರ ಹೇಳಿಕೆಯನ್ನು ವ್ಯಂಗ್ಯವಾಗಿ ಬಳಸಿಕೊಂಡು ರಸ್ತೆ ಗುಂಡಿಗಳ ಸಮಸ್ಯೆಯತ್ತ ಅಧಿಕಾರಿಗಳ ಗಮನ ಸೆಳೆಯುವ ಪ್ರಯತ್ನ ನಡೆದಿದೆ.
ಸೋಷಿಯಲ್ ಮೀಡಿಯಾದಲ್ಲೂ ಟ್ರೋಲ್
ಶಿವಲಿಂಗೇಗೌಡರ ಹೇಳಿಕೆಯ ವಿಡಿಯೋ ವೈರಲ್ ಆಗುತ್ತಿದ್ದಂತೆ ಸೋಶಿಯಲ್ ಮಿಡಿಯಾದಲ್ಲೂ ವ್ಯಾಪಕ ಚರ್ಚೆ ನಡೆದಿದೆ. ಕೆಲವರು ಸಚಿವರ ಹೇಳಿಕೆಯನ್ನು ವ್ಯಂಗ್ಯವಾಗಿ ಟೀಕಿಸಿದ್ದರೆ, ಮತ್ತೆ ಕೆಲವರು ‘ಗೌರವಯುತ’ ಪದವನ್ನೇ ಬಳಸಿಕೊಂಡು ಸಾರ್ವಜನಿಕ ಸಮಸ್ಯೆಗಳನ್ನು ಪರಿಹರಿಸುವಂತೆ ಆಗ್ರಹಿಸಿದ್ದಾರೆ.

ಮತ್ತೊಂದೆಡೆ, ತಮ್ಮ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಶಿವಲಿಂಗೇಗೌಡರು ಪುನರುಚ್ಚರಿಸಿದ್ದಾರೆ. ಯಾವುದೇ ಅಧಿಕಾರಿಗೆ ಹಣ ನೀಡುವಂತೆ ತಾವು ಹೇಳಿಲ್ಲ. ಅಧಿಕಾರಿಗಳೊಂದಿಗೆ ಸೌಹಾರ್ದಯುತವಾಗಿ ನಡೆದುಕೊಂಡು ಕೆಲಸಕ್ಕೆ ಧನ್ಯವಾದ ಸಲ್ಲಿಸಬೇಕು ಎಂಬುದಷ್ಟೇ ತಮ್ಮ ಮಾತಿನ ಉದ್ದೇಶವಾಗಿತ್ತು ಎಂದು ಅವರು ಹೇಳಿದ್ದಾರೆ.

MUST WATCH : ಹಾಲಿನ ದರ ಏರಿಕೆಗೆ ಗ್ರೀನ್ ಸಿಗ್ನಲ್ – ಮತ್ತಷ್ಟು ದುಬಾರಿಯಾಗುತ್ತಾ ನಂದಿನಿ ಹಾಲು




