
Tumakuru | ನವೆಂಬರ್ನಲ್ಲಿ ತುಮಕೂರಿಗೆ ಎತ್ತಿನಹೊಳೆ ನೀರು – ಕಾಮಗಾರಿಗೆ ಚುರುಕು ಮುಟ್ಟಿಸಿದ ಚಲುವರಾಯಸ್ವಾಮಿ
ರಾಜ್ಯದ ಮಹತ್ವಾಕಾಂಕ್ಷಿ ನೀರಾವರಿ ಯೋಜನೆಗಳಿಗೆ ಜಲಸಂಪನ್ಮೂಲ ಸಚಿವ ಎನ್. ಚಲುವರಾಯಸ್ವಾಮಿ ವೇಗ ನೀಡಿದ್ದಾರೆ. ಹೌದು.. ನವೆಂಬರ್ ಅಂತ್ಯದೊಳಗೆ ಎತ್ತಿನಹೊಳೆ ಯೋಜನೆಯ ಮೂಲಕ ತುಮಕೂರಿಗೆ ನೀರು ಹರಿಸಲು ಪಣತೊಟ್ಟಿರುವ ಸಚಿವರು, ಇದರ ಭಾಗವಾಗಿ ಗುಬ್ಬಿ ತಾಲೂಕಿನ ಕಂಚಿಗಾನಹಳ್ಳಿಯಲ್ಲಿ ನಡೆಯುತ್ತಿರುವ ಎತ್ತಿನಹೊಳೆ ಯೋಜನೆಯ ‘ಪ್ಯಾಕೇಜ್ 11’ರ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ, ಸಮಗ್ರ ಪರಿಶೀಲನೆ ನಡೆಸಿದ್ರು.
ಕಂಚಿಗಾನಹಳ್ಳಿಯ ಅರಣ್ಯ ಇಲಾಖೆಗೆ ಸೇರಿದ 1.9 ಕಿ.ಮೀ ಜಾಗ ಪರಿಶೀಲನೆ
ಇನ್ನು ಕಂಚಿಗಾನಹಳ್ಳಿಯ ಅರಣ್ಯ ಇಲಾಖೆಗೆ ಸೇರಿದ 1.9 ಕಿ.ಮೀ ಜಾಗವನ್ನು ಪರಿಶೀಲಿಸಿದ ಅವರು, ಯೋಜನೆಗೆ ಅಗತ್ಯವಿರುವ ಅರಣ್ಯ ಇಲಾಖೆಯ 2ನೇ ಹಂತದ (ಸ್ಟೇಜ್ 2) ಅನುಮತಿಗೆ ಸಂಬಂಧಿಸಿದ ಕಡತಗಳು ಈಗಾಗಲೇ ನವದೆಹಲಿಗೆ ತಲುಪಿವೆ ಎಂದು ಹೇಳಿದ್ರು. ಈಗಾಗಲೇ ಅರಣ್ಯ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳು (ACS) ದೆಹಲಿಗೆ ಅರ್ಜಿ ಸಲ್ಲಿಸಿದ್ದು, ಸತತ ಪ್ರಯತ್ನದ ಫಲವಾಗಿ ಇನ್ನೊಂದು ವಾರದಲ್ಲಿ ಕೇಂದ್ರದಿಂದ ಅಂತಿಮ ಒಪ್ಪಿಗೆ ದೊರೆಯುವ ವಿಶ್ವಾಸವನ್ನು ಸಚಿವರು ವ್ಯಕ್ತಪಡಿಸಿದ್ರು.
READ THIS : ದಾಖಲೆಯ ಬಜೆಟ್ನಲ್ಲಿ ತುಮಕೂರಿಗೆ ಸಿಕ್ಕಿದ್ದೇನು..?

28 ಮೀಟರ್ ಆಳದವರೆಗೆ ಭೂಮಿ ಅಗೆಯಬೇಕಿದೆ
ಇನ್ನು ಗುರುತ್ವಾಕರ್ಷಣಾ ಕಾಲುವೆ ನಿರ್ಮಾಣದ ಗುಣಮಟ್ಟದ ಬಗ್ಗೆಯೂ ಸಚಿವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಕಾಮಗಾರಿ ಸ್ಥಳದಲ್ಲಿ ಸುಮಾರು 28 ಮೀಟರ್ ಆಳದವರೆಗೆ ಭೂಮಿ ಅಗೆಯಬೇಕಾಗಿದ್ದು, ಮಣ್ಣು ಕುಸಿಯದಂತೆ ಅತ್ಯಂತ ಎಚ್ಚರಿಕೆಯಿಂದ ಕಟ್ ಅಂಡ್ ಕವರ್ ತಂತ್ರಜ್ಞಾನದ ಮೂಲಕ ಕಾಮಗಾರಿ ನಡೆಸುವಂತೆ ನಿರ್ದೇಶಿಸಿದ್ದಾರೆ.
ಹೊರತೆಗೆದ ಮಣ್ಣನ್ನು ಹೆಚ್ಚುವರಿಯಾಗಿ ನೀಡಿರುವ 10 ಎಕರೆ ಜಾಗದಲ್ಲೇ ತಾತ್ಕಾಲಿಕವಾಗಿ ಸಂಗ್ರಹಿಸಿ, ಬಳಿಕ ಅದೇ ಮಣ್ಣನ್ನು ಮರಳಿ ತುಂಬುವ ಪ್ರಕ್ರಿಯೆಯನ್ನೂ ಸಮರ್ಪಕವಾಗಿ ನಿರ್ವಹಿಸುವಂತೆ ಸೂಚಿಸಿದ್ರು.

ನವೆಂಬರ್ನಲ್ಲಿ ತುಮಕೂರಿಗೆ ಎತ್ತಿನಹೊಳೆ ನೀರು
ಎರಡು ಕಡೆ ಕಾಲುವೆ ಕಾಮಗಾರಿ ಭರದಿಂದ ನಡೆಯುತ್ತಿದ್ದು, ಅಕ್ಟೋಬರ್ 15ರೊಳಗೆ ತುಮಕೂರು ಭಾಗದ ಕಾಮಗಾರಿ ಪೂರ್ಣಗೊಳ್ಳಲಿದೆ.ಬಳಿಕ ನವೆಂಬರ್ ಅಂತ್ಯದೊಳಗೆ ಎತ್ತಿನಹೊಳೆ ನೀರನ್ನು ತುಮಕೂರು ಭಾಗಕ್ಕೆ ಪೂರೈಸಲಾಗುವುದು ಎಂದು ಸಚಿವ ಚಲುವರಾಯಸ್ವಾಮಿ ಭರವಸೆ ನೀಡಿದ್ರು.

ಸಚಿವರು ಹೇಳಿದ್ದೇನು?
ಇನ್ನು ಪರಿಶೀಲನೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಎತ್ತಿನಹೊಳೆ ಯೋಜನೆಯು ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲೇ ಪ್ರಾರಂಭಗೊಂಡ ‘ಕನಸಿನ ಯೋಜನೆ’. ಆರಂಭದಲ್ಲಿ 8 ಸಾವಿರ ಕೋಟಿ ರೂಪಾಯಿಗಳಷ್ಟಿದ್ದ ಯೋಜನಾ ವೆಚ್ಚವು ಪ್ರಸ್ತುತ 23 ಸಾವಿರ ಕೋಟಿ ರೂ.ಗಳಿಗೆ ಏರಿಕೆಯಾಗಿದೆ. ಆದಾಗ್ಯೂ, ರೈತರ ಹಿತದೃಷ್ಟಿಯಿಂದ ಯೋಜನೆಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಸರ್ಕಾರ ಬದ್ಧವಾಗಿದೆ. ಇದರ ಜೊತೆಗೆ ಅನಿವಾರ್ಯ ಕಾರಣಗಳಿಂದ ವಿಳಂಬವಾಗಿದ್ದ ‘ಬಿಕ್ಕೆಗುಡ್ಡ ಯೋಜನೆ’ಯನ್ನೂ ಸಹ ಮುಂದಿನ ಎರಡು ತಿಂಗಳೊಳಗೆ ಪೂರ್ಣಗೊಳಿಸಿ ಲೋಕಾರ್ಪಣೆ ಮಾಡಲಾಗುವುದು ಎಂದ್ರು.

MUST WATCH : ಧರ್ಮಗಳ ನಡುವೆ ದ್ವೇಷ ಬಿತ್ತಬೇಡಿ – PRATHAP SIMHAಗೆ IMRAN PASHA ಠಕ್ಕರ್




