ವಿಧಾನ ಪರಿಷತ್ ಸದಸ್ಯೆಯಾಗಿ Gayathri Shanthegowda ಇಂದು ಪ್ರಮಾಣವಚನ

ಚಿಕ್ಕಮಗಳೂರು ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಕಾಂಗ್ರೆಸ್ ನಾಯಕಿ ಗಾಯತ್ರಿ ಶಾಂತೇಗೌಡ ಅವರು ವಿಧಾನ ಪರಿಷತ್ (ಎಂಎಲ್ಸಿ) ಸದಸ್ಯೆಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರ ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಅವರಿಗೆ ಪ್ರತಿಜ್ಞಾವಿಧಿ ಬೋಧಿಸಲಾಯಿತು.
ನೂತನ ಸದಸ್ಯೆಗೆ ಶುಭ ಹಾರೈಸಿದರು
ಈ ವೇಳೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ ಪಕ್ಷದ ಪ್ರಮುಖ ನಾಯಕರು, ಜನಪ್ರತಿನಿಧಿಗಳು ಹಾಗೂ ಬೆಂಬಲಿಗರು ಉಪಸ್ಥಿತರಿದ್ದು, ನೂತನ ಸದಸ್ಯೆಗೆ ಶುಭ ಹಾರೈಸಿದರು.
ಇದನ್ನು ಓದಿ : ಇಂದೇ ರಾಜ್ಯದ ನೂತನ ಸಚಿವರಿಗೆ ಖಾತೆ ಹಂಚಿಕೆ ಸಾಧ್ಯತೆ
ನಾಲ್ಕೂವರೆ ವರ್ಷಗಳ ಕಾನೂನು ಹೋರಾಟದ ಬಳಿಕ ಜಯ
2021ರ ಡಿಸೆಂಬರ್ನಲ್ಲಿ ನಡೆದ ಚಿಕ್ಕಮಗಳೂರು ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಎಂ.ಕೆ. ಪ್ರಾಣೇಶ್ ಅವರು 6 ಮತಗಳ ಅಂತರದಿಂದ ಗೆದ್ದಿದ್ದಾರೆ ಎಂದು ಘೋಷಿಸಲಾಗಿತ್ತು.
ಆದರೆ, ನಾಮನಿರ್ದೇಶಿತ ಸದಸ್ಯರ ಮತ ಎಣಿಕೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ Gayathri Shanthegowda ಅವರು ನ್ಯಾಯಾಲಯದ ಮೊರೆ ಹೋಗಿದ್ದರು.

ಗಾಯತ್ರಿ ಶಾಂತೇಗೌಡ ಅವರನ್ನೇ ವಿಜೇತ ಅಭ್ಯರ್ಥಿ ಎಂದು ಘೋಷಿಸಿತ್ತು
ಹೈಕೋರ್ಟ್ ಆದೇಶದ ಮೇರೆಗೆ ನಡೆದ ಮರುಎಣಿಕೆ ಹಾಗೂ ನಂತರದ ಕಾನೂನು ಹೋರಾಟದ ಬಳಿಕ, ಹೈಕೋರ್ಟ್ ಗಾಯತ್ರಿ ಶಾಂತೇಗೌಡ ಅವರನ್ನೇ ವಿಜೇತ ಅಭ್ಯರ್ಥಿ ಎಂದು ಘೋಷಿಸಿತು.
ಆರು ವರ್ಷಗಳ ವಿಧಾನ ಪರಿಷತ್ ಅವಧಿಯಲ್ಲಿ ಈಗಾಗಲೇ ಸುಮಾರು ನಾಲ್ಕೂವರೆ ವರ್ಷಗಳು ಕಳೆದಿದ್ದು, ಉಳಿದ ಅವಧಿಗೆ ಅವರು ಸದಸ್ಯೆಯಾಗಿ ಕಾರ್ಯನಿರ್ವಹಿಸಲಿದ್ದಾರೆ.
ಸಚಿವ ಸ್ಥಾನಕ್ಕೆ ಮತ್ತೆ ಹೆಚ್ಚಿದ ಸಾಧ್ಯತೆ
ಇತ್ತೀಚೆಗೆ ನಡೆದ ರಾಜ್ಯ ಸಚಿವ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಗಾಯತ್ರಿ ಶಾಂತೇಗೌಡ ಅವರ ಹೆಸರು ಸಚಿವ ಸ್ಥಾನದ ಸಂಭಾವ್ಯ ಪಟ್ಟಿಯಲ್ಲಿ ಕಾಣಿಸಿಕೊಂಡಿತ್ತು. ಆದರೆ, ಅವರು ಆ ಸಮಯದಲ್ಲಿ ಅಧಿಕೃತವಾಗಿ ವಿಧಾನ ಪರಿಷತ್ ಸದಸ್ಯೆಯಾಗಿ ಪ್ರಮಾಣವಚನ ಸ್ವೀಕರಿಸಿರದ ಕಾರಣ ಹಾಗೂ ಕೊನೆಯ ಹಂತದ ರಾಜಕೀಯ ಬೆಳವಣಿಗೆಗಳಿಂದಾಗಿ ಸಚಿವ ಸ್ಥಾನ ದೊರೆಯಲಿಲ್ಲ ಎನ್ನಲಾಗಿತ್ತು.
ಇದೀಗ ವಿಧಾನ ಪರಿಷತ್ ಸದಸ್ಯೆಯಾಗಿ ಪ್ರಮಾಣವಚನ ಸ್ವೀಕರಿಸಿರುವ ಹಿನ್ನೆಲೆಯಲ್ಲಿ, ಅವರನ್ನು ರಾಜ್ಯ ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳುವ ಸಾಧ್ಯತೆಗಳು ಮತ್ತೆ ಜೀವ ಪಡೆದುಕೊಂಡಿವೆ. ಪ್ರಮಾಣವಚನ ಸ್ವೀಕಾರದ ನಂತರ ಅವರು ಕಾಂಗ್ರೆಸ್ ವರಿಷ್ಠರು ಹಾಗೂ ಮುಖ್ಯಮಂತ್ರಿಗಳನ್ನು ಭೇಟಿಯಾಗಲಿದ್ದು, ಮುಂದಿನ ಒಂದೆರಡು ದಿನಗಳಲ್ಲಿ ಸಚಿವ ಸ್ಥಾನದ ಕುರಿತು ಸ್ಪಷ್ಟ ಚಿತ್ರಣ ಸಿಗುವ ನಿರೀಕ್ಷೆಯಿದೆ.

ಇದನ್ನು ನೋಡಿ : ರೈತರ ಬೆನ್ನಿಗೆ ಸರ್ಕಾರ ಸದಾ ಇರುತ್ತೆ – ಬಳ್ಳಾರಿಯಲ್ಲಿ ಸಚಿವ B.NAGENDRA ಹೇಳಿಕೆ




