ಮಾಜಿ MLC ಯನ್ನೇ ಅಪಹರಿಸಿ 3 ಕೋಟಿ ಹಣಕ್ಕೆ ಡಿಮ್ಯಾಂಡ್: ದುಷ್ಟರಿಂದ ದಯಾನಂದರೆಡ್ಡಿ ಬಚಾವ್ ಆಗಿದ್ದೇ ರೋಚಕ!

ಮಾಜಿ ವಿಧಾನ ಪರಿಷತ್ ಸದಸ್ಯ ಹಾಗೂ ಬಿಜೆಪಿ ನಾಯಕ ದಯಾನಂದ ರೆಡ್ಡಿ ಅವರನ್ನು ಅಪಹರಿಸಿ ಕೋಟ್ಯಂತರ ರೂಪಾಯಿಗೆ ಬೇಡಿಕೆ ಇಟ್ಟಿರುವ ಆರೋಪ ಕೇಳಿಬಂದಿದೆ.
ಆನೇಕಲ್ ತಾಲ್ಲೂಕಿನ ಹಿಲಲಿಗೆಯಲ್ಲಿರುವ ಗೋಲ್ಡ್ ಕಾಯಿನ್ ಕ್ಲಬ್ನಿಂದ ಮನೆಗೆ ಹೊರಟಿದ್ದ ವೇಳೆ ದಯಾನಂದ ರೆಡ್ಡಿ ಅವರನ್ನು ಕಿಡ್ನಾಪ್ ಮಾಡಲಾಗಿದೆ ಎಂದು ಆರೋಪಿಸಲಾಗಿದ್ದು, ಈ ಸಂಬಂಧ ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗನ್ ತೋರಿಸಿ ಮೂರು ಕೋಟಿ ರೂಪಾಯಿಗೆ ಬೇಡಿಕೆ
ತಡರಾತ್ರಿ 12 ಗಂಟೆ ಸುಮಾರಿಗೆ ವೆಲ್ ಫೇರ್ ಕಾರಿನಲ್ಲಿ ಮನೆಗೆ ತೆರಳುತ್ತಿದ್ದ ದಯಾನಂದ ರೆಡ್ಡಿ ಅವರ ಕಾರನ್ನ, ಬೈಕ್ನಲ್ಲಿ ಬಂದಿದ್ದ ಇಬ್ಬರು ವ್ಯಕ್ತಿಗಳು ಅಡ್ಡಗಟ್ಟಿದ್ದಾರೆ.
ನಿಮಗೆ ಗಿಫ್ಟ್ ಬಂದಿದೆ ಎಂದು ಹೇಳಿ ಕಾಟನ್ ಬಾಕ್ಸ್ ತೋರಿಸಿದ್ದಾರೆ. ಈ ವೇಳೆ ಕಾರಿನ ಡೋರ್ ಲಾಕ್ ಓಪನ್ ಮಾಡುತ್ತಿದ್ದಂತೆ ಓರ್ವ ವ್ಯಕ್ತಿ ಕಾರಿನೊಳಗೆ ನುಗ್ಗಿ ಗನ್ ತೋರಿಸಿ ತಾನು ಹೇಳಿದ ಕಡೆಗೆ ಕಾರು ಚಲಾಯಿಸುವಂತೆ ಸೂಚಿಸಿದ್ದಾನೆ ಎನ್ನಲಾಗಿದೆ.
ಇದನ್ನು ಓದಿ : ಮುಂದಿನ 6 ತಿಂಗಳಲ್ಲಿ ವಿಧಾನಮಂಡಲದಲ್ಲಿ ಕಾಗದಕ್ಕೆ ಗುಡ್ಬೈ

ಮಾಜಿ MLC ಕಿಡ್ನಾಪ್ ಮಾಡಿ 3 ಕೋಟಿಗೆ ಡಿಮ್ಯಾಂಡ್.!
ಇನ್ನೂ ಇದೇ ವೇಳೆ ಕೆಂಪು ಬಣ್ಣದ ಕಾರಿನಲ್ಲಿ ಮತ್ತಿಬ್ಬರು ಆರೋಪಿಗಳು ಹಿಂಬಾಲಿಸಿದ್ದು, ಬಳಿಕ ಮಾಜಿ MLC ದಯಾನಂದ ರೆಡ್ಡಿ ಅವರನ್ನು ಅತ್ತಿಬೆಲೆಯ ಕೆಎಚ್ಬಿ ಬಡಾವಣೆ ಸಮೀಪ ಕರೆದೊಯ್ದು ಜೀವ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.
ನಿನ್ನನ್ನು ಕೊಲ್ಲಲು 10 ಕೋಟಿ ರೂಪಾಯಿ ಸುಪಾರಿ ಕೊಟ್ಟಿದ್ದಾರೆ ಎಂದು ಕುತ್ತಿಗೆಗೆ ಗನ್ ಇಟ್ಟು ಬೆದರಿಕೆ ಹಾಕಿದ್ದಾರೆ. ಬಳಿಕ ದಯಾನಂದ ರೆಡ್ಡಿ ಆರೋಪಿಗಳ ಬಳಿ ಮನವಿ ಮಾಡಿಕೊಂಡಿದ್ದು, ಹಣವನ್ನು ತಾನೇ ನೀಡುವುದಾಗಿ ಹೇಳಿದ್ದಾರೆ.
ಆರಂಭದಲ್ಲಿ 3 ಕೋಟಿ ರೂಪಾಯಿ ಬೇಡಿಕೆ ಇಟ್ಟಿದ್ದ ಕಿಡ್ನಾಪರ್ಸ್ ಬಳಿಕ 2 ಕೋಟಿ ರೂಪಾಯಿಗೆ ಒಪ್ಪಿಕೊಂಡಿದ್ದಾರೆ ಎಂದು ಹೇಳಲಾಗಿದೆ.
ದಯಾನಂದ ರೆಡ್ಡಿ ದೂರಿನ ಮೇರೆಗೆ ಎಫ್ಐಆರ್ ದಾಖಲು
ಸದ್ಯ ಹಣ ಇಲ್ಲ, ಬೆಳಗ್ಗೆ ಬ್ಯಾಂಕ್ ತೆರೆದ ಬಳಿಕ ಹಣ ನೀಡೋದಾಗಿ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಹಣ ಡ್ರಾ ಮಾಡಿದ ನಂತರ ಪೋನ್ ಮಾಡುವಂತೆ ತಿಳಿಸಿ ತಮ್ಮ ಮೊಬೈಲ್ ನಂಬರ್ ನೀಡಿ, ಮುಂಜಾನೆ ವೇಳೆಗೆ ಆರೋಪಿಗಳು ಅವರನ್ನು ಬಿಟ್ಟು ಕಳುಹಿಸಿದ್ದಾರೆ.
ಘಟನೆ ಬಳಿಕ ದಯಾನಂದ ರೆಡ್ಡಿ ಅತ್ತಿಬೆಲೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

ಇದನ್ನು ನೋಡಿ : ಸಿದ್ದು ಸಿಎಂ ಸ್ಥಾನ ಕಳೆದುಕೊಂಡಿದ್ದು ಹೇಗೆ?- ಅಲ್ಲಿಗೆ ಕಾಲಿಟ್ಟಿದ್ದಕ್ಕೆ ಸಿದ್ದು ಪದತ್ಯಾಗ ಆಯ್ತಾ?




