ಮುಂದಿನ 6 ತಿಂಗಳಲ್ಲಿ ಸಂಪೂರ್ಣ ಕಾಗದ ರಹಿತವಾಗಲಿದೆ ಕರ್ನಾಟಕ ವಿಧಾನಮಂಡಲ: ಶಾಸಕರಿಗೆ ಸಿಗಲಿದೆ ಐಪ್ಯಾಡ್.

ಕರ್ನಾಟಕ ವಿಧಾನಮಂಡಲವನ್ನು ಮುಂದಿನ 6 ತಿಂಗಳೊಳಗೆ ಸಂಪೂರ್ಣ ಕಾಗದರಹಿತ ಹಾಗೂ ಡಿಜಿಟಲ್ ವ್ಯವಸ್ಥೆಯಾಗಿ ಪರಿವರ್ತಿಸಲಾಗುತ್ತಿದೆ ಎಂದು ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ತಿಳಿಸಿದ್ದಾರೆ. ಹೊಸ ವ್ಯವಸ್ಥೆಯಡಿ ವಿಧಾನಸಭೆ ಹಾಗೂ ವಿಧಾನಪರಿಷತ್ ಸದಸ್ಯರು ಇನ್ನು ಮುಂದೆ ಕಾಗದದ ಕಡತಗಳ ಬದಲಿಗೆ ಐಪ್ಯಾಡ್ಗಳ ಮೂಲಕವೇ ಕಲಾಪದ ಮಾಹಿತಿಯನ್ನು ಪಡೆಯಲಿದ್ದಾರೆ.
ರಾಜ್ಯ ಉಸ್ತುವಾರಿ ಸಮಿತಿ ಮೇಲ್ವಿಚಾರಣೆ
ಈ ಮಹತ್ವಾಕಾಂಕ್ಷಿ ಯೋಜನೆಗಾಗಿ ಕರ್ನಾಟಕ ವಿಧಾನಸಭೆ ಮತ್ತು ವಿಧಾನಪರಿಷತ್ ‘ರಾಷ್ಟ್ರೀಯ ಇ-ವಿಧಾನ ಅಪ್ಲಿಕೇಶನ್ (NeVA)’ ಯೋಜನೆಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿವೆ. ಯೋಜನೆಯ ಅನುಷ್ಠಾನವನ್ನು ನೆವಾ ಹಾಗೂ ರಾಜ್ಯ ಉಸ್ತುವಾರಿ ಸಮಿತಿ ಮೇಲ್ವಿಚಾರಣೆ ಮಾಡಲಿದೆ.

ಯೋಜನೆಗೆ ಕೇಂದ್ರ ಸರ್ಕಾರ ಶೇ.60ರಷ್ಟು ಅನುದಾನ
ಬೆಂಗಳೂರು ವಿಧಾನಸೌಧ ಹಾಗೂ ಬೆಳಗಾವಿಯ ಸುವರ್ಣಸೌಧದಲ್ಲಿ ವಿಧಾನಸಭೆಯ ಡಿಜಿಟಲೀಕರಣಕ್ಕೆ 78 ಕೋಟಿ ರೂ. ಮತ್ತು ವಿಧಾನಪರಿಷತ್ ಡಿಜಿಟಲೀಕರಣಕ್ಕೆ 52 ಕೋಟಿ ರೂ. ಸೇರಿದಂತೆ ಒಟ್ಟು 130 ಕೋಟಿ ರೂ. ವೆಚ್ಚವಾಗಲಿದೆ. ಈ ಯೋಜನೆಗೆ ಕೇಂದ್ರ ಸರ್ಕಾರ ಶೇ.60ರಷ್ಟು ಅನುದಾನ ನೀಡಲಿದೆ ಎಂದು ಮಾಹಿತಿ ನೀಡಲಾಗಿದೆ.
ಇದನ್ನು ಓದಿ : ಸರ್ಕಾರ ಕೊಟ್ಟ ಭಾಷಣ ಓದದೇ ಹೊರಟ ರಾಜ್ಯಪಾಲ – ಸದನದಲ್ಲಿ ಆಕ್ರೋಶ..!!!
ಎಲ್ಲಾ ದಾಖಲೆಗಳು ಡಿಜಿಟಲ್ ರೂಪದಲ್ಲಿ ಶಾಸಕರಿಗೆ ಲಭ್ಯ
ಹೊಸ ವ್ಯವಸ್ಥೆಯಡಿ ಅಧಿವೇಶನದ ಕಾರ್ಯಸೂಚಿ, ಪ್ರಶ್ನೋತ್ತರ ಪಟ್ಟಿ, ವಿಧೇಯಕಗಳು ಸೇರಿದಂತೆ ಎಲ್ಲಾ ದಾಖಲೆಗಳು ಡಿಜಿಟಲ್ ರೂಪದಲ್ಲಿ ಶಾಸಕರಿಗೆ ಲಭ್ಯವಾಗಲಿವೆ. ಅಧಿವೇಶನದ ವೇಳೆ ಸದಸ್ಯರ ಮೇಜುಗಳ ಮೇಲೆ ಐಪ್ಯಾಡ್ಗಳನ್ನು ಅಳವಡಿಸಲಾಗುತ್ತಿದ್ದು, ಕಲಾಪ ಮುಗಿದ ಬಳಿಕ ಅವುಗಳನ್ನು ಸುರಕ್ಷಿತವಾಗಿ ಸಂಗ್ರಹಿಸಲಾಗುತ್ತದೆ.

ಎಲ್ಲಾ ಶಾಸಕರಿಗೂ ವಿಶೇಷ ತರಬೇತಿ
ಹೊಸ ವ್ಯವಸ್ಥೆಯ ಬಳಕೆಗೆ ಎಲ್ಲಾ ಶಾಸಕರಿಗೂ ವಿಶೇಷ ತರಬೇತಿ ನೀಡಲಾಗುತ್ತದೆ. ಈ ಯೋಜನೆಯಿಂದ ಮುದ್ರಣ ಮತ್ತು ಸಾಗಣೆ ವೆಚ್ಚದಲ್ಲಿ ಕೋಟ್ಯಂತರ ರೂಪಾಯಿ ಉಳಿತಾಯವಾಗುವುದರ ಜೊತೆಗೆ ಕಾಗದದ ಬಳಕೆಯೂ ಗಣನೀಯವಾಗಿ ಕಡಿಮೆಯಾಗಲಿದೆ ಎಂದು ಖಾದರ್ ತಿಳಿಸಿದ್ದಾರೆ.
ಇದನ್ನು ನೋಡಿ : ಸರ್ಕಾರಿ ಮುಖ್ಯಶಿಕ್ಷಕನಿಂದ ವಸೂಲಿ ದಂಧೆ – ಬಡ ಮಕ್ಕಳು ಓದೋದಕ್ಕೂ ಕೊಡಬೇಕು ದುಡ್ಡು




