
NEPAL FLOODS : ನೇಪಾಳದಲ್ಲಿ ಮತ್ತೆ ಪ್ರವಾಹ, ಭೂಕುಸಿತ – 8 ಸೆಕೆಂಡಲ್ಲಿ ಕುಸಿದ ಪರ್ವತ; ವಿವಿಧೆಡೆ 21 ಮಂದಿ ಸಾವು
ನೇಪಾಳದಲ್ಲಿ ಧಾರಾಕಾರ ಮಳೆಯಿಂದ ಪ್ರವಾಹ ಮತ್ತು ಭೂಕುಸಿತದಂತಹ ಮಳೆ ಸಂಬಂಧಿತ ಅವಘಡಗಳು ಮುಂದುವರಿದಿದ್ದು, ಕಳೆದ ನಾಲ್ಕು ದಿನಗಳಲ್ಲಿ ಕನಿಷ್ಠ 21 ಮಂದಿ ಸಾವನ್ನಪ್ಪಿದ್ದಾರೆ. ಹಲವು ಪ್ರದೇಶಗಳಲ್ಲಿ ಮನೆಗಳು ಹಾನಿಗೊಳಗಾಗಿದ್ದು, ರಸ್ತೆ ಸಂಚಾರಕ್ಕೂ ತೀವ್ರ ಅಡಚಣೆ ಉಂಟಾಗಿದೆ.
8 ಸೆಕೆಂಡುಗಳಲ್ಲಿ ಕುಸಿದ ಪರ್ವತ
ಇದರ ನಡುವೆ ನೇಪಾಳದಲ್ಲಿ ಸಂಭವಿಸಿದ ಭೂಕುಸಿತದ ವಿಡಿಯೋವೊಂದು ಸೋಶಿಯಲ್ ಮಿಡಿಯಾಗಳಲ್ಲಿ ಹರಿದಾಡುತ್ತಿದೆ. ಪರ್ವತದ ಇಳಿಜಾರಿನ ಒಂದು ಭಾಗವು ಕೆಲವೇ 8 ಸೆಕೆಂಡುಗಳಲ್ಲಿ ಕುಸಿದು ಕೆಳಕ್ಕೆ ಜಾರಿದ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ. ಭೂಕುಸಿತ ಆರಂಭವಾಗುತ್ತಿದ್ದಂತೆ ಸ್ಥಳದಲ್ಲಿದ್ದ ಜನರು ಆತಂಕದಿಂದ ಓಡಿಹೋಗುತ್ತಿರುವುದು ಕಂಡುಬಂದಿದೆ.

ಭೂಕುಸಿತಕ್ಕೆ ಐವರು ಬಲಿ
ಶನಿವಾರ ರಾತ್ರಿ ಪಾಲ್ಪಾ ಜಿಲ್ಲೆಯ ಮಠಗಢಿ ಗ್ರಾಮೀಣ ಪುರಸಭೆ ವ್ಯಾಪ್ತಿಯಲ್ಲಿ ಭೂಕುಸಿತ ಸಂಭವಿಸಿದ್ದು, ಐವರು ಮೃತಪಟ್ಟಿದ್ದಾರೆ. ಭಾನುವಾರ ಬೆಳಗ್ಗೆ ಅವರ ಮೃತದೇಹಗಳನ್ನು ಹೊರತೆಗೆಯಲಾಗಿದೆ. ಇದರೊಂದಿಗೆ ಕಳೆದ ನಾಲ್ಕು ದಿನಗಳಲ್ಲಿ ಪ್ರವಾಹ, ಭೂಕುಸಿತ, ಸಿಡಿಲು ಸೇರಿದಂತೆ ವಿವಿಧ ಮಳೆ ಸಂಬಂಧಿತ ಘಟನೆಗಳಲ್ಲಿ ಮೃತಪಟ್ಟವರ ಸಂಖ್ಯೆ 21ಕ್ಕೆ ಏರಿಕೆಯಾಗಿದೆ.
READ THIS : ನೇಪಾಳ ಪ್ರವಾಹ – ಮೃತರ ಸಂಖ್ಯೆ 939ಕ್ಕೆ ಏರಿಕೆ!

1,284 ಮಂದಿ ರಕ್ಷಣೆ
ಕಳೆದ ಐದು ದಿನಗಳಲ್ಲಿ ನೇಪಾಳದಲ್ಲಿ 439 ಮಳೆ ಸಂಬಂಧಿತ ಘಟನೆಗಳು ವರದಿಯಾಗಿವೆ. ಪ್ರವಾಹ ಹಾಗೂ ಭೂಕುಸಿತದಿಂದ ವಿವಿಧೆಡೆ ಸಿಲುಕಿದ್ದ 1,284 ಮಂದಿಯನ್ನು ಭದ್ರತಾ ಸಿಬ್ಬಂದಿ ರಕ್ಷಿಸಿದ್ದಾರೆ.
ಲುಂಬಿನಿ ಪ್ರಾಂತ್ಯದ ರೂಪಂದೇಹಿ ಜಿಲ್ಲೆಯಲ್ಲಿ ಟಿನಾವು ನದಿ ಅಪಾಯದ ಮಟ್ಟ ಮೀರಿ ಹರಿದ ಪರಿಣಾಮ, ಶನಿವಾರ ರಾತ್ರಿ ಬುಟ್ವಾಲ್ನಲ್ಲಿ ಆರು ಮನೆಗಳು ಪ್ರವಾಹದ ನೀರಿನಲ್ಲಿ ಕೊಚ್ಚಿಹೋಗಿವೆ.
ನದಿಗಳು ಮತ್ತು ಹಳ್ಳಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿದ್ದರಿಂದ ಸುಮಾರು 200 ಮನೆಗಳಿಗೆ ಅಪಾಯ ಎದುರಾಗಿತ್ತು.

1,000 ಮಂದಿ ಸ್ಥಳಾಂತರ
ಮುನ್ನೆಚ್ಚರಿಕೆ ಕ್ರಮವಾಗಿ ಭದ್ರತಾ ಸಿಬ್ಬಂದಿ ರಾತ್ರೋರಾತ್ರಿ ಸುಮಾರು 1,000 ಮಂದಿಯನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದ್ದಾರೆ.
ನೇಪಾಳದ ಹಲವು ಭಾಗಗಳಲ್ಲಿ ಮಳೆ ಮುಂದುವರಿದಿರುವ ಹಿನ್ನೆಲೆಯಲ್ಲಿ ಪ್ರವಾಹ ಮತ್ತು ಭೂಕುಸಿತದ ಅಪಾಯ ಇನ್ನೂ ಮುಂದುವರಿದಿದೆ.
MUST WATCH : ನಾಡಿನ ಒಳಿತಿಗಾಗಿ ಇಷ್ಟಲಿಂಗ ಪೂಜೆ – ನೊಣವಿನಕೆರೆ ಶ್ರೀಗಳಿಂದ ಧರ್ಮಸಂದೇಶ




