ಮುಂದಿನ ದಿನದಲ್ಲಿ EL Nino ಬಲಗೊಳ್ಳುವ ಸಾಧ್ಯತೆ ಎಂದ ಭಾರತೀಯ ಹವಾಮಾನ ಇಲಾಖೆ – IMD ಕೊಟ್ಟಿದೆ ಬಿಗ್ ಅಲರ್ಟ್

ದೇಶದ ಹಲವು ಭಾಗಗಳಲ್ಲಿ ಮಳೆ ಕೊರತೆ ಎದುರಾಗಿರುವ ಬೆನ್ನಲ್ಲೇ ದಕ್ಷಿಣ ಭಾರತದ ರಾಜ್ಯಗಳಲ್ಲಿ ಮುಂದಿನ ದಿನಗಳಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಎಲ್ ನಿನೋ (EL Nino) ಪರಿಣಾಮದಿಂದ ಕರ್ನಾಟಕ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಶೇ.40ಕ್ಕೂ ಹೆಚ್ಚಿನ ಮಳೆ ಕೊರತೆ ದಾಖಲಾಗಿರುವ ಸಮಯದಲ್ಲೇ ಈ ಬೆಳವಣಿಗೆ ನಡೆದಿದೆ.
ತಾಪಮಾನ ಏರಿಕೆ, ಮಳೆ ಕೊರತೆ
ವಿಶ್ವ ಹವಾಮಾನ ಸಂಸ್ಥೆ (WMO) ಬಿಡುಗಡೆ ಮಾಡಿರುವ ಮಾಸಿಕ ವರದಿ ಪ್ರಕಾರ, ಈಗಾಗಲೇ ಪರಿಣಾಮ ಬೀರುತ್ತಿರುವ ಎಲ್ ನಿನೋ ಪರಿಸ್ಥಿತಿ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ಮತ್ತಷ್ಟು ಬಲಗೊಳ್ಳುವ ಸಾಧ್ಯತೆಯಿದೆ.
ಇದರಿಂದ ಜಾಗತಿಕ ತಾಪಮಾನ ಏರಿಕೆ, ಮಳೆ ಕೊರತೆ ಹಾಗೂ ಕೃಷಿ ಕ್ಷೇತ್ರದ ಮೇಲೆ ಪರಿಣಾಮ ಬೀರುವ ಅಪಾಯ ಹೆಚ್ಚಾಗಬಹುದು ಎಂದು ವರದಿ ಎಚ್ಚರಿಸಿದೆ.

ಸಾಮಾನ್ಯಕ್ಕಿಂತ ಹೆಚ್ಚು ತಾಪಮಾನ
ಭೂಮಧ್ಯರೇಖೆಯ ಪೆಸಿಫಿಕ್ ಸಾಗರದಲ್ಲಿ ಮಧ್ಯಮ ಮಟ್ಟದ ಎಲ್ ನಿನೋ ಪರಿಸ್ಥಿತಿಗಳು ಮುಂದುವರಿದಿವೆ. ಮಧ್ಯ ಮತ್ತು ಪೂರ್ವ ಪೆಸಿಫಿಕ್ ಭಾಗಗಳಲ್ಲಿ ಸಮುದ್ರದ ಮೇಲ್ಮೈ ತಾಪಮಾನ ಸಾಮಾನ್ಯಕ್ಕಿಂತ ಹೆಚ್ಚಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ತಿಳಿಸಿದೆ.
ನೈಋತ್ಯ ಮುಂಗಾರು ಅವಧಿಯ ಉಳಿದ ಭಾಗದಲ್ಲಿ ಎಲ್ ನಿನೋ ಪ್ರಭಾವ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.
ಇದನ್ನು ಓದಿ : ರಾಜ್ಯದಲ್ಲಿ ಕೈಕೊಟ್ಟ ಮಳೆರಾಯ – ಶೇ.21ರಷ್ಟು ಮಳೆ ಕೊರತೆ
ಆದರೆ, 2026ರ ಮುಂಗಾರು ಮಳೆಯ ಪ್ರಮಾಣವನ್ನು ಕೇವಲ ಎಲ್ ನಿನೋ ಮಾತ್ರ ನಿರ್ಧರಿಸುವುದಿಲ್ಲ ಎಂದು ಪರಿಸರ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಸಾಗರ ಮತ್ತು ವಾತಾವರಣಕ್ಕೆ ಸಂಬಂಧಿಸಿದ ಹಲವು ಅಂಶಗಳು ಹಾಗೂ ಪ್ರಾದೇಶಿಕ ಹವಾಮಾನ ವ್ಯವಸ್ಥೆಗಳು ಮಳೆಯ ಹಂಚಿಕೆ ಮತ್ತು ತೀವ್ರತೆಯ ಮೇಲೆ ಪ್ರಭಾವ ಬೀರುತ್ತವೆ ಎಂದು ತಿಳಿಸಿದ್ದಾರೆ.

ದಕ್ಷಿಣ ಭಾರತದಲ್ಲಿ ಮಳೆ ನಿರೀಕ್ಷೆ
ಮುಂದಿನ ಕೆಲವು ದಿನಗಳಲ್ಲಿ ವಾಯುವ್ಯ, ಪಶ್ಚಿಮ ಮತ್ತು ದಕ್ಷಿಣ ಭಾರತದ ಕೆಲವು ಭಾಗಗಳಲ್ಲಿ ಮಳೆ ಮುಂದುವರಿಯುವ ಸಾಧ್ಯತೆ ಇದೆ. ಭಾರಿ ಮಳೆ, ಪ್ರವಾಹ ಹಾಗೂ ಭೂಕುಸಿತದ ಅಪಾಯ ಇರುವ ಪ್ರದೇಶಗಳ ಜನರು ಎಚ್ಚರಿಕೆಯಿಂದ ಇರಬೇಕು ಎಂದು ಹವಾಮಾನ ಇಲಾಖೆ ಸೂಚಿಸಿದೆ.
ಸ್ಥಳೀಯ ಹವಾಮಾನ ಮುನ್ಸೂಚನೆಗಳನ್ನು ಗಮನಿಸುತ್ತಿರಬೇಕು ಹಾಗೂ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅಧಿಕಾರಿಗಳು ಸಲಹೆ ನೀಡಿದ್ದಾರೆ.
ಕೇರಳದಲ್ಲಿ ಭಾರಿ ಮಳೆ – 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್
ಕೇರಳದಲ್ಲಿ ಭಾರಿ ಮಳೆ ಮುಂದುವರಿದಿದ್ದು, ಮಳೆ ಸಂಬಂಧಿತ ಅನಾಹುತಗಳಲ್ಲಿ ಹಲವರು ಮೃತಪಟ್ಟಿದ್ದಾರೆ. ಕೆಲವರು ನಾಪತ್ತೆಯಾಗಿದ್ದಾರೆ. ರಾಜ್ಯದಾದ್ಯಂತ 273 ಪರಿಹಾರ ಶಿಬಿರಗಳಿಗೆ 7,600ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ.
ಭಾರಿ ಮಳೆಯ ಮುನ್ಸೂಚನೆ ಹಿನ್ನೆಲೆಯಲ್ಲಿ ಭಾರತೀಯ ಹವಾಮಾನ ಇಲಾಖೆ ಕೇರಳದ ಎಲ್ಲ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದೆ.

ಏನಿದು EL Nino ?
ಎಲ್ ನಿನೋ ಎಂದರೆ ಪೆಸಿಫಿಕ್ ಸಾಗರದ ಮಧ್ಯ ಮತ್ತು ಪೂರ್ವ ಭಾಗಗಳಲ್ಲಿ ಸಮುದ್ರದ ಮೇಲ್ಮೈ ತಾಪಮಾನ ಸಾಮಾನ್ಯಕ್ಕಿಂತ ಹೆಚ್ಚಾಗುವ ಹವಾಮಾನ ವಿದ್ಯಮಾನ. ಇದು ವಾತಾವರಣದ ಗಾಳಿಯ ಚಲನೆಯನ್ನು ಬದಲಾಯಿಸಿ ಭಾರತ ಸೇರಿದಂತೆ ಹಲವು ದೇಶಗಳ ಮುಂಗಾರು ಮಳೆಯ ಮೇಲೆ ಪರಿಣಾಮ ಬೀರುತ್ತದೆ.
ಈ ಬಾರಿ ಎಲ್ ನಿನೋ ಪ್ರಭಾವ ಆರಂಭಿಕ ಹಂತದಲ್ಲಿ ದುರ್ಬಲವಾಗಿದ್ದ ಕಾರಣ ನೈಋತ್ಯ ಮುಂಗಾರು ನಿರೀಕ್ಷೆಗಿಂತ ಉತ್ತಮವಾಗಿ ಕಾರ್ಯನಿರ್ವಹಿಸಿದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.

ಇದನ್ನು ನೋಡಿ : ಪಕ್ಷ ವಿರೋಧಿ ಚಟುವಟಿಕೆ ಮಾಡಿದವರನ್ನ ಚಾಮುಂಡಿ ತಾಯಿ ನೋಡಿಕೊಳ್ತಾಳೆ




