ಸಾರ್ವಜನಿಕರನ್ನು ವಂಚಕರಿಂದ ರಕ್ಷಿಸಲು RBI ‘ಮನಿ ಮ್ಯೂಲ್’ ದಂಧೆಯ ಕುರಿತು ಮಹತ್ವದ ಜಾಗೃತಿ ಸಂದೇಶವನ್ನು ರವಾನಿಸಿದೆ.

ನಿಮ್ಮ ಬ್ಯಾಂಕ್ ಖಾತೆಯನ್ನು ಬಳಸಲು ಅನುಮತಿ ನೀಡಿದರೆ ಸುಲಭವಾಗಿ ಹಣ ಗಳಿಸಬಹುದು ಎಂದು ಯಾರಾದರೂ ನಿಮಗೆ ಆಫರ್ ನೀಡುತ್ತಿದ್ದಾರೆಯೇ? ಹಾಗಿದ್ದರೆ ಎಚ್ಚರ! ನೀವು ತಿಳಿಯದೆಯೇ ದೊಡ್ಡ ಅಪರಾಧ ಜಾಲದ ಭಾಗವಾಗಿ ಜೈಲು ಪಾಲಾಗುವ ಸಾಧ್ಯತೆಯಿದೆ. ಸಾರ್ವಜನಿಕರನ್ನು ವಂಚಕರಿಂದ ರಕ್ಷಿಸಲು RBI ‘ಮನಿ ಮ್ಯೂಲ್’ ದಂಧೆಯ ಕುರಿತು ಮಹತ್ವದ ಜಾಗೃತಿ ಸಂದೇಶವನ್ನು ರವಾನಿಸಿದೆ.
ಏನಿದು ‘ಮನಿ ಮ್ಯೂಲ್’ ದಂಧೆ?
ಇತರರ ಅಕ್ರಮ ಹಣವನ್ನು ತಮ್ಮ ಬ್ಯಾಂಕ್ ಖಾತೆಯ ಮೂಲಕ ವರ್ಗಾಯಿಸಲು ಅವಕಾಶ ನೀಡುವ ವ್ಯಕ್ತಿಗಳನ್ನು ‘ಮನಿ ಮ್ಯೂಲ್’ ಎಂದು ಕರೆಯಲಾಗುತ್ತದೆ. ಸೈಬರ್ ವಂಚಕರು ಅಥವಾ ಕಪ್ಪು ಹಣದ ಜಾಲಗಳು ಸಾರ್ವಜನಿಕರ ಬ್ಯಾಂಕ್ ಖಾತೆಗಳನ್ನು ದುರುಪಯೋಗಪಡಿಸಿಕೊಂಡು ಅಕ್ರಮ ಹಣವನ್ನು ಒಂದು ಖಾತೆಯಿಂದ ಮತ್ತೊಂದು ಖಾತೆಗೆ ವರ್ಗಾಯಿಸುತ್ತಾರೆ. ಈ ವೇಳೆ ಖಾತೆದಾರರು ಸಹ ಅಪರಾಧದ ಭಾಗವಾಗುವ ಅಪಾಯವಿದೆ.

ಜೈಲು ಶಿಕ್ಷೆಯ ಭೀತಿ
ನಿಮ್ಮ ಬ್ಯಾಂಕ್ ಖಾತೆ ನಿಮ್ಮ ವೈಯಕ್ತಿಕ ಹಣಕಾಸು ವ್ಯವಹಾರಗಳಿಗೆ ಮಾತ್ರ ಸೀಮಿತವಾಗಿರಬೇಕು. ಹಣ ವರ್ಗಾವಣೆಗಾಗಿ ನಿಮ್ಮ ಖಾತೆಯನ್ನು ಬಳಸಲು ಯಾರಿಗೂ ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು ಎಂದು ಆರ್ಬಿಐ ಸ್ಪಷ್ಟಪಡಿಸಿದೆ.
ಇತರರು ನಿಮ್ಮ ಖಾತೆಗೆ ಹಣ ಜಮಾ ಮಾಡುವುದು ಅಥವಾ ನಿಮ್ಮ ಮೂಲಕ ಬೇರೆ ಖಾತೆಗೆ ವರ್ಗಾಯಿಸುವ ವ್ಯವಸ್ಥೆ ಮಾಡಿದರೆ, ಕಠಿಣ ಕಾನೂನು ಕ್ರಮ ಎದುರಿಸಬೇಕಾಗಬಹುದು.
ಅಗತ್ಯವಿದ್ದರೆ ಜೈಲು ಶಿಕ್ಷೆಯನ್ನೂ ಅನುಭವಿಸಬೇಕಾಗಬಹುದು.
ಇದನ್ನು ಓದಿ : ಸಿಬಿಲ್ ಸ್ಕೋರ್ ಟೆನ್ಷನ್ ಬಿಡಿ – ಗ್ರಾಹಕರಿಗೆ RBI ಬಿಗ್ ರಿಲೀಫ್!

ರಹಸ್ಯ ಮಾಹಿತಿ ಹಂಚಿಕೊಳ್ಳಬೇಡಿ
ಇದರ ಜೊತೆಗೆ ಬ್ಯಾಂಕ್ ಖಾತೆ ಸಂಖ್ಯೆ, ಎಟಿಎಂ ಪಿನ್, ಇಂಟರ್ನೆಟ್ ಬ್ಯಾಂಕಿಂಗ್ ಪಾಸ್ವರ್ಡ್ ಹಾಗೂ ಮೊಬೈಲ್ಗೆ ಬರುವ ಒಟಿಪಿ ಸೇರಿದಂತೆ ಯಾವುದೇ ರಹಸ್ಯ ಮಾಹಿತಿಯನ್ನು ಯಾರೊಂದಿಗೂ ಹಂಚಿಕೊಳ್ಳಬಾರದು ಎಂದು ಆರ್ಬಿಐ ಸೂಚಿಸಿದೆ. ಸುಲಭವಾಗಿ ಹಣ ಗಳಿಸುವ ಆಸೆ ತೋರಿಸಿ ವಂಚಕರು ಜನರನ್ನು ಗುರಿಯಾಗಿಸುತ್ತಿದ್ದಾರೆ. ಆದ್ದರಿಂದ ಅಪರಿಚಿತರ ಆಮಿಷಗಳಿಗೆ ಬಲಿಯಾಗದೆ ಬ್ಯಾಂಕ್ ಖಾತೆಯ ಸುರಕ್ಷತೆಯನ್ನು ಕಾಪಾಡಿಕೊಳ್ಳುವುದು ಅತ್ಯಗತ್ಯವಾಗಿದೆ.
ಸುರಕ್ಷಿತವಾಗಿರಿ, ಜಾಗರೂಕರಾಗಿರಿ
ಒಟ್ಟಾರೆ ‘ಸುಲಭ ಹಣ’ ಎಂಬ ಆಮಿಷಕ್ಕೆ ಒಳಗಾಗಿ ನಿಮ್ಮ ಬ್ಯಾಂಕ್ ಖಾತೆಯನ್ನು ಇತರರಿಗೆ ಬಳಸಲು ಅವಕಾಶ ನೀಡುವುದು ದೊಡ್ಡ ಅಪಾಯಕ್ಕೆ ಕಾರಣವಾಗಬಹುದು.
ಹೀಗಾಗಿ ಜಾಗರೂಕರಾಗಿ, ನಿಮ್ಮ ಬ್ಯಾಂಕ್ ಖಾತೆಯನ್ನು ಸುರಕ್ಷಿತವಾಗಿರಿಸಿಕೊಳ್ಳಿ ಎಂದು ಆರ್ಬಿಐ ಮನವಿ ಮಾಡಿದೆ.

ಇದನ್ನು ನೋಡಿ : ರಾಜ್ಯದಲ್ಲಿ 5 ದಿನ ಮಳೆಯ ಅಬ್ಬರ – ಇಂದು ಭಾರೀ ಮಳೆ ಎಚ್ಚರಿಕೆ.!



