ಮಹಿಳಾ PSI ಗೆ ಕಪಾಳಮೋಕ್ಷ – ಶಾಸಕ ಸುರೇಶ್ಗೌಡ ಪುತ್ರಿ ಐಶ್ವರ್ಯ ವಿರುದ್ಧ FIR

ಕರ್ತವ್ಯನಿರತ ಮಹಿಳಾ ಪೊಲೀಸ್ ಸಬ್ಇನ್ಸ್ಪೆಕ್ಟರ್ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಕಪಾಳಮೋಕ್ಷ ಮಾಡಿದ ಆರೋಪದ ಮೇಲೆ ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕ ಬಿ. ಸುರೇಶ್ಗೌಡ ಅವರ ಪುತ್ರಿ ಐಶ್ವರ್ಯ ವಿರುದ್ಧ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕ್ಯಾತನಹಳ್ಳಿ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ. PSI ಸವಿತಾ ಅವರು ನೀಡಿದ ಅಧಿಕೃತ ದೂರಿನ ಆಧಾರದ ಮೇಲೆ ಪೊಲೀಸರು ಈ ಕಾನೂನು ಕ್ರಮ ಜರುಗಿಸಿದ್ದಾರೆ.
ವಿಐಪಿ ಪ್ರವೇಶಕ್ಕೆ ಸಂಬಂಧಿಸಿದಂತೆ ವಾಗ್ವಾದ
ಆಗಸ್ಟ್ 12ರಂದು ಭೀಮನ ಅಮಾವಾಸ್ಯೆ ಹಿನ್ನೆಲೆಯಲ್ಲಿ ಶ್ರೀರಂಗಪಟ್ಟಣ ತಾಲೂಕಿನ ಪ್ರಸಿದ್ಧ ಆರತಿ ಉಕ್ಕಡ ದೇವಸ್ಥಾನಕ್ಕೆ ಸಾವಿರಾರು ಭಕ್ತರು ಆಗಮಿಸಿದ್ದರು. ಈ ವೇಳೆ ಐಶ್ವರ್ಯ ಅವರು ದೇವಸ್ಥಾನಕ್ಕೆ ಆಗಮಿಸಿ VIP ಪ್ರವೇಶದ ಮೂಲಕ ಗರ್ಭಗುಡಿಯ ಸನ್ನಿಧಿಗೆ ತೆರಳಲು ಮುಂದಾಗಿದ್ದರು. ನೇರವಾಗಿ ಗರ್ಭಗುಡಿಯೊಳಗೆ ಪ್ರವೇಶಿಸಲು ಅವಕಾಶ ನೀಡುವಂತೆ ಅಲ್ಲಿ ಕರ್ತವ್ಯದಲ್ಲಿದ್ದ ಪಿಎಸ್ಐ ಸವಿತಾ ಅವರ ಬಳಿ ಪಟ್ಟು ಹಿಡಿದರು.

ಆ ಸಂದರ್ಭದಲ್ಲಿ ದೇವಸ್ಥಾನದಲ್ಲಿ ವಿಪರೀತ ಜನದಟ್ಟಣೆ ಇದ್ದುದರಿಂದ ಪಿಎಸ್ಐ ಸವಿತಾ ಅವರು ಐಶ್ವರ್ಯ ಅವರಿಗೆ ಪರಿಸ್ಥಿತಿಯನ್ನು ತಿಳಿಹೇಳಲು ಯತ್ನಿಸಿದರು. “ಇಂದು ಅಪಾರ ಸಂಖ್ಯೆಯ ಭಕ್ತರು ಸಾಲಿನಲ್ಲಿ ನಿಂತಿದ್ದಾರೆ. ಈ ಹಂತದಲ್ಲಿ ನಿಮ್ಮನ್ನು ನೇರವಾಗಿ ಒಳಗೆ ಬಿಟ್ಟರೆ ಸಾಲಿನಲ್ಲಿ ನಿಂತಿರುವ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿ ಗಲಾಟೆ ಮಾಡುವ ಸಾಧ್ಯತೆಯಿದೆ. ಆದ್ದರಿಂದ ದಯವಿಟ್ಟು ಸ್ವಲ್ಪ ಸಮಯ ಕಾಯಿರಿ” ಎಂದು ವಿನಂತಿಸಿಕೊಂಡರು.
ಇದನ್ನು ಓದಿ : ಗೃಹ ಸಚಿವರ ಮೇಲೆ FIR ದಾಖಲಿಸಲು ಖಡಕ್ ಸೂಚನೆ..!

ಮಹಿಳಾ ಪಿಎಸ್ಐಗೆ ಕಪಾಳಮೋಕ್ಷ
ಈ ಸಂದರ್ಭದಲ್ಲಿ ಮಫ್ತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸರ್ಕಲ್ ಇನ್ಸ್ಪೆಕ್ಟರ್ ಲಕ್ಷ್ಮಿ ಅವರು ಗರ್ಭಗುಡಿಯೊಳಗೆ ತೆರಳಿದ್ದನ್ನು ಗಮನಿಸಿದ ಐಶ್ವರ್ಯ, ಅವರನ್ನು ಒಳಗೆ ಏಕೆ ಬಿಡಲಾಗಿದೆ ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಪಿಎಸ್ಐ ಸವಿತಾ ಅವರು, “ಅವರು ನಮ್ಮ ಸರ್ಕಲ್ ಇನ್ಸ್ಪೆಕ್ಟರ್, ಕರ್ತವ್ಯದ ಮೇಲಿದ್ದಾರೆ” ಎಂದು ಸ್ಪಷ್ಟನೆ ನೀಡಿದ್ದಾರೆ.
ಇದಾದ ಬಳಿಕ ಇಬ್ಬರ ನಡುವೆ ವಾಗ್ವಾದ ನಡೆದಿದ್ದು, ಐಶ್ವರ್ಯ ಅವರು ಪಿಎಸ್ಐ ಸವಿತಾ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಕಪಾಳಮೋಕ್ಷ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ವಿವಿಧ ಕಾಯ್ದೆಗಳಡಿ ಪ್ರಕರಣ ದಾಖಲು
ಕರ್ತವ್ಯನಿರತ ಪೊಲೀಸ್ ಅಧಿಕಾರಿಯೊಂದಿಗೆ ವಾಗ್ವಾದ ನಡೆಸಿ ಹಲ್ಲೆ ಮಾಡಿದ ಹಾಗೂ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ. ಕ್ಯಾತನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ತನಿಖೆಯನ್ನು ಕೈಗೆತ್ತಿಕೊಂಡಿದ್ದಾರೆ.
ಇದನ್ನು ನೋಡಿ : ಕುಮಾರಣ್ಣಗೆ ಮಾತು ಕೊಟ್ಟ ಶಾಸಕ ಸುರೇಶ್ ಗೌಡ- ಸಾಯೋವರೆಗೂ ಜೊತೆಲಿ ಇರ್ತೀನಿ ಅಂದ್ರು





