
Hasanamba : ಅಕ್ಟೋಬರ್ 29ರಿಂದ ಹಾಸನಾಂಬಾ ಜಾತ್ರಾ ಮಹೋತ್ಸವ ಆರಂಭ: 12 ದಿನ ದೇವಿಯ ದರ್ಶನಕ್ಕೆ ಅವಕಾಶ
ಪ್ರಸಿದ್ಧ ಹಾಸನಾಂಬಾ ಜಾತ್ರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದೆ. ಈ ಬಾರಿ ಅಕ್ಟೋಬರ್ 29ರಿಂದ ನವೆಂಬರ್ 11ರವರೆಗೆ ಜಾತ್ರಾ ಮಹೋತ್ಸವ ನಡೆಯಲಿದ್ದು, ಭಕ್ತರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಜಿಲ್ಲಾಡಳಿತ ಸಕಲ ಸಿದ್ಧತೆಗಳನ್ನು ಕೈಗೊಂಡಿದೆ.
ಹಾಸನಾಂಬಾ ಜಾತ್ರಾ ಮಹೋತ್ಸವಕ್ಕೆ ದಿನಗಣನೆ ಆರಂಭ
ಜಾತ್ರಾ ಮಹೋತ್ಸವವನ್ನು ಶ್ರದ್ಧೆ, ಭಕ್ತಿ ಹಾಗೂ ಸಾಂಪ್ರದಾಯಿಕ ಸಂಭ್ರಮದೊಂದಿಗೆ ನಡೆಸಲು ನಿರ್ಧರಿಸಲಾಗಿದ್ದು, ಭದ್ರತೆ, ಮೂಲಸೌಕರ್ಯ ಸೇರಿದಂತೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹಾಸನ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ತಿಳಿಸಿದ್ದಾರೆ.

ಅ.29ರಂದು ಗರ್ಭಗುಡಿ ಬಾಗಿಲು ತೆರೆಯಲಿದೆ
ಆಶ್ವಯುಜ ಮಾಸದ ಪವಿತ್ರ ದಿನವಾದ ಅಕ್ಟೋಬರ್ 29ರಂದು ಮಧ್ಯಾಹ್ನ 12 ಗಂಟೆಗೆ ಶಾಸ್ತ್ರೋಕ್ತ ಧಾರ್ಮಿಕ ವಿಧಿವಿಧಾನಗಳೊಂದಿಗೆ ಹಾಸನಾಂಬ ದೇವಾಲಯದ ಗರ್ಭಗುಡಿ ಬಾಗಿಲು ತೆರೆಯಲಿದೆ.
ಮೊದಲ ದಿನ ಧಾರ್ಮಿಕ ಪೂಜಾ ವಿಧಿವಿಧಾನಗಳು ನಡೆಯಲಿರುವುದರಿಂದ ಸಾರ್ವಜನಿಕರಿಗೆ ದೇವಿಯ ದರ್ಶನಕ್ಕೆ ಅವಕಾಶ ಇರುವುದಿಲ್ಲ.
ಅಕ್ಟೋಬರ್ 30ರಿಂದ ನವೆಂಬರ್ 10ರವರೆಗೆ ಒಟ್ಟು 12 ದಿನಗಳ ಕಾಲ ಭಕ್ತರು ಹಾಸನಾಂಬ ದೇವಿಯ ದರ್ಶನ ಪಡೆಯಬಹುದಾಗಿದೆ. ನವೆಂಬರ್ 11ರಂದು ಧಾರ್ಮಿಕ ವಿಧಿವಿಧಾನಗಳೊಂದಿಗೆ ಗರ್ಭಗುಡಿ ಬಾಗಿಲನ್ನು ಮುಚ್ಚಲಾಗುತ್ತದೆ.
READ THIS : ಹಾಸನಾಂಬೆ ದರ್ಶನಕ್ಕೆ ಹರಿದು ಬಂದ ಭಕ್ತ ಸಾಗರ | ಒಂದೇ ದಿನಕ್ಕೆ 1 ಕೋಟಿ ಆದಾಯ

ಸೆ.26ರಂದು ಪೋಸ್ಟರ್, ವೆಬ್ಸೈಟ್ ಬಿಡುಗಡೆ
Hasanamba ಜಾತ್ರಾ ಮಹೋತ್ಸವದ ಕುರಿತು ಭಕ್ತರಿಗೆ ಸಮಗ್ರ ಮಾಹಿತಿ ಒದಗಿಸುವ ಉದ್ದೇಶದಿಂದ ಸೆಪ್ಟೆಂಬರ್ 26ರಂದು ಅಧಿಕೃತ ಪೋಸ್ಟರ್ ಬಿಡುಗಡೆ ಮಾಡಲಾಗುತ್ತದೆ.
ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ. ಶಿವಲಿಂಗೇಗೌಡ ಅವರು ಪೋಸ್ಟರ್ ಬಿಡುಗಡೆ ಮಾಡುವುದರ ಜೊತೆಗೆ ವಿಶೇಷ ವೆಬ್ಸೈಟ್ಗೂ ಚಾಲನೆ ನೀಡಲಿದ್ದಾರೆ.
ಪ್ರಸ್ತುತ ಹಾಸನ ಜಿಲ್ಲೆಯ ಏಳು ತಾಲೂಕುಗಳನ್ನು ಬರಪೀಡಿತ ಪ್ರದೇಶಗಳೆಂದು ಘೋಷಿಸಿರುವ ಹಿನ್ನೆಲೆಯಲ್ಲಿ, ಈ ಬಾರಿ ಅನಗತ್ಯ ಅದ್ದೂರಿತನಕ್ಕೆ ಕಡಿವಾಣ ಹಾಕಿ, ಶ್ರದ್ಧೆ ಹಾಗೂ ಸಾಂಪ್ರದಾಯಿಕ ಸಂಭ್ರಮಕ್ಕೆ ಆದ್ಯತೆ ನೀಡಿ ಜಾತ್ರೆ ನಡೆಸಲು ಜಿಲ್ಲಾಡಳಿತ ನಿರ್ಧರಿಸಿದೆ.
ಆಹಾರ ಮೇಳ, ಚಿತ್ರಸಂತೆ ಸೇರಿದಂತೆ ವಿವಿಧ ಕಾರ್ಯಕ್ರಮ
ಜಾತ್ರಾ ಮಹೋತ್ಸವದ ಯಶಸ್ವಿ ನಿರ್ವಹಣೆಗಾಗಿ ಈಗಾಗಲೇ ವಿವಿಧ ಕಾರ್ಯಕಾರಿ ಸಮಿತಿಗಳನ್ನು ರಚಿಸಲಾಗಿದೆ.
ಭಕ್ತರ ಅನುಕೂಲಕ್ಕಾಗಿ ಅಗತ್ಯ ವ್ಯವಸ್ಥೆಗಳನ್ನು ಕಲ್ಪಿಸುವುದರ ಜೊತೆಗೆ ಸ್ಥಳೀಯ ಕಲೆ, ಸಾಹಿತ್ಯ ಹಾಗೂ ಸಂಸ್ಕೃತಿಗೆ ಉತ್ತೇಜನ ನೀಡುವ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ.

ಜಾತ್ರೆಯ ಅಂಗವಾಗಿ ಆಹಾರ ಮೇಳ, ಚಿತ್ರಸಂತೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಸಾಹಿತ್ಯಿಕ ವೈಭವ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲು ಸಿದ್ಧತೆ ನಡೆಸಲಾಗಿದೆ.
MUST WATCH : ರಸ್ತೆ ಮಧ್ಯೆ ಹೊತ್ತಿ ಉರಿದ ಬಸ್ – 60 ಪ್ರಯಾಣಿಕರು ಜಸ್ಟ್ ಬಚಾವ್




