ರಾಮನಗರ ಶಾಸಕ ಇಕ್ಬಾಲ್ ಹುಸೇನ್ ಅನಾರೋಗ್ಯದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದು, ಸಿಎಂ DK Shivakumar ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ.

ರಾಮನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಇಕ್ಬಾಲ್ ಹುಸೇನ್ ಅವರು ಅನಾರೋಗ್ಯದ ಹಿನ್ನೆಲೆಯಲ್ಲಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಮುಖ್ಯಮಂತ್ರಿ DK Shivakumar ಅವರು ಆಸ್ಪತ್ರೆಗೆ ಭೇಟಿ ನೀಡಿ ಅವರ ಆರೋಗ್ಯ ವಿಚಾರಿಸಿದ್ದಾರೆ. ಈ ವೇಳೆ ಶಾಸಕನ ಆರೋಗ್ಯದ ಬಗ್ಗೆ ಯಾವುದೇ ಆತಂಕ ಬೇಡ ಎಂದು ಸಿಎಂ ಸ್ಪಷ್ಟಪಡಿಸಿದ್ದಾರೆ.

ಶಾಸಕ ಇಕ್ಬಾಲ್ ಹುಸೇನ್ ಅವರಿಗೆ ಭಾನುವಾರ ಎದೆನೋವು ಕಾಣಿಸಿಕೊಂಡ ಹಿನ್ನೆಲೆ ವೈದ್ಯಕೀಯ ತಪಾಸಣೆ ನಡೆಸಲಾಗಿತ್ತು. ಈ ವೇಳೆ ಮುನ್ನೆಚ್ಚರಿಕಾ ಕ್ರಮವಾಗಿ ಹೆಚ್ಚಿನ ಪರೀಕ್ಷೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಎಡಗೈಯಲ್ಲಿ ಸ್ವಲ್ಪ ಸೆಳೆತ ಕಾಣಿಸಿಕೊಂಡಿದ್ದರಿಂದ ವೈದ್ಯರ ಸಲಹೆಯಂತೆ ಚಿಕಿತ್ಸೆ ಪಡೆಯುತ್ತಿದ್ದಾರೆ.
MUST READ : ರಾಮನಗರ ಶಾಸಕ ಇಕ್ಬಾಲ್ ಹುಸೇನ್ಗೆ ಹೃದಯಾಘಾತ
ಈ ಕುರಿತು ಮಾತನಾಡಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, “ನನ್ನ ಸ್ನೇಹಿತ ಶಾಸಕ ಇಕ್ಬಾಲ್ ಹುಸೇನ್ ಅವರಿಗೆ ನಿನ್ನೆ ಎದೆನೋವು ಕಾಣಿಸಿಕೊಂಡಿತ್ತು. ವೈದ್ಯರು ತಪಾಸಣೆ ನಡೆಸಿದ್ದು, ಅವರ ಆರೋಗ್ಯ ಸ್ಥಿರವಾಗಿದೆ. ಯಾರೂ ಗಾಬರಿಯಾಗುವ ಅಗತ್ಯವಿಲ್ಲ. ಹೆಚ್ಚಿನ ಮುನ್ನೆಚ್ಚರಿಕೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ವೈದ್ಯರೊಂದಿಗೆ ನಾನು ಮಾತುಕತೆ ನಡೆಸಿದ್ದು, ಯಾವುದೇ ಗಂಭೀರ ಸಮಸ್ಯೆ ಇಲ್ಲ. ಅವರು ಗಟ್ಟಿಮುಟ್ಟಾಗಿದ್ದು ಶೀಘ್ರದಲ್ಲೇ ಚೇತರಿಸಿಕೊಳ್ಳಲಿದ್ದಾರೆ” ಎಂದು ತಿಳಿಸಿದ್ದಾರೆ.

ಕಳೆದ ಕೆಲವು ದಿನಗಳಿಂದ ಸಣ್ಣಪುಟ್ಟ ಆರೋಗ್ಯ ಏರುಪೇರಿನಿಂದ ಬಳಲುತ್ತಿದ್ದ ಇಕ್ಬಾಲ್ ಹುಸೇನ್ ಅವರಿಗೆ ವೈದ್ಯಕೀಯ ಪರೀಕ್ಷೆಯ ವೇಳೆ ಹೃದಯ ಸಂಬಂಧಿತ ಸಮಸ್ಯೆಯ ಶಂಕೆ ವ್ಯಕ್ತವಾಗಿತ್ತು. ಹೀಗಾಗಿ ವೈದ್ಯರ ಸಲಹೆ ಮೇರೆಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಸದ್ಯ ಇಕ್ಬಾಲ್ ಹುಸೇನ್ ಅವರ ಆರೋಗ್ಯ ಸ್ಥಿರವಾಗಿದ್ದು, ವೈದ್ಯರ ನಿರಂತರ ನಿಗಾದಲ್ಲಿದ್ದಾರೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಭೇಟಿ ಬಳಿಕ ಕುಟುಂಬಸ್ಥರು ಹಾಗೂ ಬೆಂಬಲಿಗರಲ್ಲಿ ಆತಂಕ ಕಡಿಮೆಯಾಗಿದ್ದು, ಶೀಘ್ರ ಗುಣಮುಖರಾಗಲಿ ಎಂದು ಹಲವರು ಹಾರೈಸುತ್ತಿದ್ದಾರೆ.
MUST WATCH : ಕಾಂಗ್ರೆಸ್ ಶಾಸಕನಿಗೆ ದಿಢೀರ್ ಹೃದಯಾಘಾತ… ಖಾಸಗಿ ಆಸ್ಪತ್ರೆಗೆ ದಾಖಲು..




