BREAKING : ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಪತ್ನಿ ಚನ್ನಮ್ಮ ನಿಧನ

BREAKING : ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡ ಅವರ ಪತ್ನಿ ಚೆನ್ನಮ್ಮ (85) ಅವರು ಇಂದು (ಜುಲೈ 18) ನಿಧನರಾಗಿದ್ದಾರೆ. ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ಜುಲೈ 15ರಂದು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ.
ಚನ್ನಮ್ಮ ಅವರಿಗೆ ತಜ್ಞ ವೈದ್ಯ ಡಾ. ಸತ್ಯನಾರಾಯಣ ಅವರ ನೇತೃತ್ವದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆರೋಗ್ಯ ಸ್ಥಿತಿ ಗಂಭೀರವಾಗಿದ್ದ ಹಿನ್ನೆಲೆಯಲ್ಲಿ ವೈದ್ಯರು ನಿರಂತರ ನಿಗಾ ವಹಿಸಿದ್ದರೂ ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ.

1954ರಲ್ಲಿ ದೇವೇಗೌಡರೊಂದಿಗೆ ವಿವಾಹ
ಹಾಸನ ಜಿಲ್ಲೆಯ ಮುತ್ತಿಗೆ ಹಿರೇಹಳ್ಳಿಯವರಾದ ಚೆನ್ನಮ್ಮ ಅವರು 1954ರ ಮೇ 25ರಂದು ಹೆಚ್.ಡಿ. ದೇವೇಗೌಡ ಅವರೊಂದಿಗೆ ದಾಂಪತ್ಯ ಜೀವನ ಆರಂಭಿಸಿದ್ದರು. ಈ ದಂಪತಿಗೆ ಹೆಚ್.ಡಿ. ರೇವಣ್ಣ, ಹೆಚ್.ಡಿ. ಬಾಲಕೃಷ್ಣ, ಹೆಚ್.ಡಿ. ರಮೇಶ್ ಗೌಡ, ಹೆಚ್.ಡಿ. ಕುಮಾರಸ್ವಾಮಿ, ಶೈಲಜಾ ಮತ್ತು ಅನಸೂಯಾ ಸೇರಿದಂತೆ ನಾಲ್ವರು ಪುತ್ರರು ಹಾಗೂ ಇಬ್ಬರು ಪುತ್ರಿಯರಿದ್ದಾರೆ.
ಇದನ್ನು ಓದಿ : ಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಿರುದ್ಧ ದೇವೇಗೌಡ ಸ್ಪೋಟಕ ಆರೋಪ!

ದೇವೇಗೌಡರ ರಾಜಕೀಯ ಬದುಕಿನ ಬೆನ್ನೆಲುಬು
ಹೆಚ್.ಡಿ. ದೇವೇಗೌಡ ಅವರ ರಾಜಕೀಯ ಜೀವನದಲ್ಲಿ ಚೆನ್ನಮ್ಮ ಅವರ ಪಾತ್ರ ಮಹತ್ವದ್ದಾಗಿತ್ತು. ದೇವೇಗೌಡರು ರಾಜಕೀಯದಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದ ಸಂದರ್ಭದಲ್ಲೂ ಕುಟುಂಬದ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತು, ಆರು ಮಕ್ಕಳ ಶಿಕ್ಷಣ ಮತ್ತು ಸಂಸಾರವನ್ನು ಸಮರ್ಥವಾಗಿ ನಿಭಾಯಿಸಿ ಆದರ್ಶ ಗೃಹಿಣಿಯಾಗಿ ಗುರುತಿಸಿಕೊಂಡಿದ್ದರು.

ಚನ್ನಮ್ಮ ಅವರ ಮೇಲೆ ನಡೆದಿತ್ತು ಆ್ಯಸಿಡ್ ದಾಳಿ!
2001ರ ಫೆಬ್ರವರಿ ತಿಂಗಳಲ್ಲಿ ಚೆನ್ನಮ್ಮ ಅವರು ಹರದನಹಳ್ಳಿಯಲ್ಲಿ ದೇವಾಲಯದಲ್ಲಿ ಪೂಜೆ ಮುಗಿಸಿ ವಾಪಸ್ ಬರುತ್ತಿದ್ದ ವೇಳೆ ಅವರ ಮೇಲೆ ಆ್ಯಸಿಡ್ ದಾಳಿಯಾಗಿತ್ತು. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಅವರು ಚಿಕಿತ್ಸೆ ಬಳಿಕ ಚೇತರಿಸಿಕೊಂಡಿದ್ದರು.
ಇದನ್ನು ನೋಡಿ : ಮಹಿಳೆಯರ ಉಳಿತಾಯ ಹಣಕ್ಕೆ ಕನ್ನ? -DCC BANK ಮುಂದೆ ನಾರಿಯರ ಆಕ್ರೋಶ





