Bengaluru : ಹೋಂಸ್ಟೇ ನೋಂದಣಿ ಕಡ್ಡಾಯ – ಇದುವರೆಗೂ 500ಕ್ಕೂ ಅಧಿಕ ಹೋಂಸ್ಟೇಗಳ ನೋಂದಣಿಗೆ ಅರ್ಜಿ

Bengaluru : ಕರ್ನಾಟಕ ಸರ್ಕಾರದ ಪ್ರವಾಸೋದ್ಯಮ ಇಲಾಖೆಯು ರಾಜ್ಯದ ಹೋಂಸ್ಟೇಗಳಿಗಾಗಿ ಹೊಸ ನೋಂದಣಿ ಮಾರ್ಗಸೂಚಿಗಳನ್ನು ಜಾರಿಗೊಳಿಸಿದ್ದು, ಅಧಿಕೃತ ನೋಂದಣಿಯನ್ನು ಕಡ್ಡಾಯಗೊಳಿಸಿದೆ. ನಿಗದಿತ ಕನಿಷ್ಠ ಮಾನದಂಡಗಳನ್ನು ಪೂರೈಸದ ಹೋಂಸ್ಟೇಗಳಿಗೆ ಯಾವುದೇ ಕಾರಣಕ್ಕೂ ಮಾನ್ಯತೆ ನೀಡುವುದಿಲ್ಲ ಎಂದು ಪ್ರವಾಸೋದ್ಯಮ ಇಲಾಖೆಯ ಆಯುಕ್ತ ಡಾ. ರಾಮ್ ಪ್ರಸಾತ್ ಮನೋಹರ್ ತಿಳಿಸಿದ್ದಾರೆ.
ಕರ್ನಾಟಕ ಹೋಂಸ್ಟೇ ನೋಂದಣಿ ಮಾರ್ಗಸೂಚಿ–2025
ಪ್ರವಾಸಿಗರಿಗೆ ಸುರಕ್ಷಿತ ಹಾಗೂ ಗುಣಮಟ್ಟದ ವಸತಿ ಸೌಲಭ್ಯ ಒದಗಿಸುವ ಉದ್ದೇಶದಿಂದ “ಕರ್ನಾಟಕ ಹೋಂಸ್ಟೇ ನೋಂದಣಿ ಮಾರ್ಗಸೂಚಿ–2025″ ಜಾರಿಗೆ ತರಲಾಗಿದೆ. ಇದರ ಅನ್ವಯ ರಾಜ್ಯದಲ್ಲಿರುವ ಪ್ರತಿಯೊಂದು ಹೋಂಸ್ಟೇ ಕೂಡ ಪ್ರವಾಸೋದ್ಯಮ ಇಲಾಖೆಯಲ್ಲಿ ಕಡ್ಡಾಯವಾಗಿ ನೋಂದಾಯಿಸಿಕೊಳ್ಳಬೇಕು.

500ಕ್ಕೂ ಅಧಿಕ ಹೋಂಸ್ಟೇಗಳ ನೋಂದಣಿಗೆ ಅರ್ಜಿ
ಈವರೆಗೆ 500ಕ್ಕೂ ಹೆಚ್ಚು ಹೋಂಸ್ಟೇ ಮಾಲೀಕರು ನೋಂದಣಿಗೆ ಅರ್ಜಿ ಸಲ್ಲಿಸಿದ್ದು, ಅವುಗಳಲ್ಲಿ ಸುಮಾರು 400 ಅರ್ಜಿಗಳ ದಾಖಲೆಗಳ ಪರಿಶೀಲನೆ ಪೂರ್ಣಗೊಂಡಿದೆ. ಪ್ರಸ್ತುತ ಸ್ಥಳ ಪರಿಶೀಲನಾ ಕಾರ್ಯ ನಡೆಯುತ್ತಿದ್ದು, ಪ್ರವಾಸೋದ್ಯಮ ಇಲಾಖೆ, ಪೊಲೀಸ್ ಇಲಾಖೆ, ಜಿಲ್ಲಾಧಿಕಾರಿ ಕಚೇರಿ ಹಾಗೂ ಜಿಲ್ಲಾ ಪಂಚಾಯಿತಿ ಅಥವಾ ಜಿಲ್ಲಾ ನಗರಾಭಿವೃದ್ಧಿ ಕೋಶದ ಅಧಿಕಾರಿಗಳನ್ನೊಳಗೊಂಡ ಜಂಟಿ ತಂಡವು ಹೋಂಸ್ಟೇಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದೆ.
ಇದನ್ನು ಓದಿ : ಹೋಂ ಸ್ಟೇನಲ್ಲಿ ಯುವತಿ ಅನುಮಾನಾಸ್ಪದ ಸಾವು
ಮಾಲೀಕರಿಗೆ ಮರು ಅರ್ಜಿ ಸಲ್ಲಿಸಲು ಅವಕಾಶ
ಹೋಂಸ್ಟೇಗಳ ಮೂಲಸೌಕರ್ಯ, ಸುರಕ್ಷತೆ, ಸ್ವಚ್ಛತೆ ಹಾಗೂ ಕಾರ್ಯಾಚರಣೆಯ ಗುಣಮಟ್ಟದ ಆಧಾರದ ಮೇಲೆ ಮಾತ್ರ ನೋಂದಣಿಗೆ ಅನುಮೋದನೆ ನೀಡಲಾಗುತ್ತದೆ.
ಅಗತ್ಯ ಮಾನದಂಡಗಳನ್ನು ಪೂರೈಸದ ಅರ್ಜಿಗಳನ್ನು ತಿರಸ್ಕರಿಸಲಾಗುವುದು. ಆದರೆ, ಲೋಪದೋಷಗಳನ್ನು ಸರಿಪಡಿಸಿದ ಬಳಿಕ ಮಾಲೀಕರಿಗೆ ಮರು ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗುತ್ತದೆ.

45 ದಿನಗಳೊಳಗೆ ನೋಂದಣಿ ಪ್ರಮಾಣಪತ್ರ
ಎಲ್ಲಾ ಹಂತದ ಪರಿಶೀಲನೆ ಯಶಸ್ವಿಯಾಗಿ ಪೂರ್ಣಗೊಂಡು ಅಧಿಕಾರಿಗಳ ಅನುಮೋದನೆ ದೊರೆತ 45 ದಿನಗಳೊಳಗೆ ನೋಂದಣಿ ಪ್ರಮಾಣಪತ್ರ ವಿತರಿಸಲಾಗುತ್ತದೆ. ಈ ಪ್ರಮಾಣಪತ್ರವು ಐದು ವರ್ಷಗಳವರೆಗೆ ಮಾನ್ಯವಾಗಿದ್ದು, ಬಳಿಕ ನವೀಕರಿಸಬೇಕಾಗುತ್ತದೆ.
ಪ್ರವಾಸಿಗರಿಗೆ ಸುರಕ್ಷಿತ
ಹೊಸ ವ್ಯವಸ್ಥೆಯಿಂದ ರಾಜ್ಯದಲ್ಲಿ ಕಾನೂನುಬದ್ಧವಾಗಿ ಕಾರ್ಯನಿರ್ವಹಿಸುತ್ತಿರುವ ಹೋಂಸ್ಟೇಗಳಿಗೆ ಅಧಿಕೃತ ಮಾನ್ಯತೆ ದೊರೆಯಲಿದ್ದು, ಇಲಾಖೆಯ ಬಳಿ ಸಮಗ್ರ ಡೇಟಾಬೇಸ್ ಸಿದ್ಧವಾಗಲಿದೆ.
ಇದರಿಂದ ಪ್ರವಾಸಿಗರಿಗೆ ಸುರಕ್ಷಿತ ಹಾಗೂ ವಿಶ್ವಾಸಾರ್ಹ ವಸತಿ ವ್ಯವಸ್ಥೆ ಒದಗಿಸಲು ಸಹಕಾರಿಯಾಗಲಿದೆ ಎಂದು ಡಾ. ರಾಮ್ ಪ್ರಸಾತ್ ಮನೋಹರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಪ್ರವಾಸೋದ್ಯಮ ಹಾಗೂ ಇಂಧನ ಸಚಿವ ಕೆ.ಜೆ. ಜಾರ್ಜ್ ಹೇಳಿದ್ದೇನು?
ಇದೇ ವಿಚಾರವಾಗಿ ಮಾತನಾಡಿದ ಪ್ರವಾಸೋದ್ಯಮ ಹಾಗೂ ಇಂಧನ ಸಚಿವ ಕೆ.ಜೆ. ಜಾರ್ಜ್ ಅವರು, ಹೊಸ ಮಾರ್ಗಸೂಚಿಗೆ ಮಾಲೀಕರಿಂದ ಸಿಗುತ್ತಿರುವ ಬೆಂಬಲ ಆಶಾದಾಯಕವಾಗಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಎಲ್ಲಾ ನಿರ್ವಾಹಕರು ಶೀಘ್ರವಾಗಿ ನೋಂದಣಿ ಮುಗಿಸಿಕೊಳ್ಳುವ ಮೂಲಕ ಕರ್ನಾಟಕದ ಪ್ರವಾಸೋದ್ಯಮ ಕ್ಷೇತ್ರವನ್ನು ಮತ್ತಷ್ಟು ಬಲಿಷ್ಠಗೊಳಿಸಲು ಸಹಕರಿಸಬೇಕು ಎಂದು ಅವರು ಕರೆ ನೀಡಿದ್ದಾರೆ.
ಇದನ್ನು ನೋಡಿ : ಗುಂಡಿ ನಗರವಾಗ್ತಿದ್ಯಾ ತುಮಕೂರು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜನರ ಆಕ್ರೋಶ





