Tirupati ಗೆ ಹೋಗುವವರಿಗೆ ಬಿಗ್ ಅಲರ್ಟ್! ಗೋವಿಂದನ ದರ್ಶನಕ್ಕೆ 10-15 ಗಂಟೆ ಅಲ್ಲ, ಎಷ್ಟು ಗಂಟೆ ಕಾಯ್ಬೇಕು ಗೊತ್ತಾ?

ವಾರಾಂತ್ಯದ ಹಿನ್ನೆಲೆಯಲ್ಲಿ ವಿಶ್ವವಿಖ್ಯಾತ ತಿರುಮಲ ತಿರುಪತಿ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭಕ್ತರ ದಂಡೇ ಹರಿದುಬಂದಿದೆ. ಈ ತಿಂಗಳ ಆರಂಭದಿಂದಲೇ ಭಕ್ತರ ಸಂಖ್ಯೆ ಹೆಚ್ಚಳವಾಗಿದ್ದು, ತಿರುಮಲದ ಎಲ್ಲಾ ಕಾಯುವ ವಿಭಾಗಗಳು ಭರ್ತಿಯಾಗಿವೆ. ಪರಿಣಾಮ, ಭಕ್ತರು ಹೊರಾಂಗಣದಲ್ಲಿಯೂ ಸರದಿಯಲ್ಲಿ ನಿಂತು ದೇವರ ದರ್ಶನಕ್ಕಾಗಿ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ.
ದರ್ಶನಕ್ಕೆ ಎಷ್ಟು ಗಂಟೆ ಕಾಯಬೇಕು?
ಪ್ರಸ್ತುತ ಸುಮಾರು 24 ಗಂಟೆಗಳ ಕಾಯುವಿಕೆ ಇದ್ದರೆ, ಟೈಮ್ ಸ್ಲಾಟ್ ದರ್ಶನಕ್ಕೆ 18 ಗಂಟೆಗಳ ಸಮಯ ಬೇಕಾಗಿದೆ. ₹300 ವಿಶೇಷ ಪ್ರವೇಶ ದರ್ಶನ ಪಡೆದ ಭಕ್ತರು ಕೂಡ ಸುಮಾರು 5 ಗಂಟೆಗಳವರೆಗೆ ಕಾಯಬೇಕಾಗಿದೆ ಎಂದು ತಿರುಮಲ ತಿರುಪತಿ ದೇವಸ್ಥಾನ (TTD) ಮಾಹಿತಿ ನೀಡಿದೆ.
ಇನ್ನು ಒಂದೇ ದಿನದಲ್ಲಿ 90,546 ಭಕ್ತರು ಶ್ರೀವಾರಿಯ ದರ್ಶನ ಪಡೆದಿದ್ದು, ಅವರಲ್ಲಿ 36,333 ಮಂದಿ ತಲೆನೀಲಿ ಸಮರ್ಪಿಸಿದ್ದಾರೆ. ಇದೇ ವೇಳೆ ದೇವಾಲಯದ ಹುಂಡಿಯಲ್ಲಿ ₹3.93 ಕೋಟಿ ಕಾಣಿಕೆ ಸಂಗ್ರಹವಾಗಿದೆ.
ಇದನ್ನು ಓದಿ : ತಿರುಪತಿ ಗೋವಿಂದರಾಜ ಸ್ವಾಮಿ ದೇಗುಲದಲ್ಲಿ ಕುಡುಕನಿಂದ ಅವಾಂತರ

ಜುಲೈ 17ರಂದು ಅಣಿವಾರ ಆಸ್ಥಾನ
ಜುಲೈ 17ರಂದು ಶ್ರೀವಾರಿ ದೇವಸ್ಥಾನದಲ್ಲಿ ಅಣಿವಾರ ಆಸ್ಥಾನ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಜುಲೈ 13ರಿಂದ 16ರವರೆಗೆ ವಿಐಪಿ ಬ್ರೇಕ್ ದರ್ಶನಕ್ಕೆ ಶಿಫಾರಸು ಪತ್ರಗಳನ್ನು ಸ್ವೀಕರಿಸಲಾಗುವುದಿಲ್ಲ ಎಂದು ಟಿಟಿಡಿ ಪ್ರಕಟಿಸಿದೆ. ಉತ್ಸವದ ದಿನಗಳಲ್ಲಿ ವಿಐಪಿ ಬ್ರೇಕ್ ದರ್ಶನವನ್ನು ರದ್ದುಗೊಳಿಸಲಾಗಿದ್ದು, ಪ್ರೋಟೋಕಾಲ್ ವ್ಯಾಪ್ತಿಯ ಗಣ್ಯರಿಗೆ ಮಾತ್ರ ವಿನಾಯಿತಿ ನೀಡಲಾಗಿದೆ.

ಕೆಎಸ್ಟಿಡಿಸಿಯ ವಿಶೇಷ ತಿರುಪತಿ ಪ್ಯಾಕೇಜ್
ಒಂದೇ ದಿನದಲ್ಲಿ ಸುಗಮವಾಗಿ ತಿರುಪತಿ ದರ್ಶನ ಮಾಡಲು ಬಯಸುವ ಭಕ್ತರಿಗಾಗಿ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (KSTDC) ವಿಶೇಷ ಪ್ಯಾಕೇಜ್ನ್ನು ನೀಡುತ್ತಿದೆ.
- ಡಿಲಕ್ಸ್ ಎಸಿ ಬಸ್: ಪ್ರತಿ ವ್ಯಕ್ತಿಗೆ ₹2,270
- ವೋಲ್ವೋ ಎಸಿ ಬಸ್: ಪ್ರತಿ ವ್ಯಕ್ತಿಗೆ ₹2,300
ಈ ಪ್ಯಾಕೇಜ್ನಲ್ಲಿ ತಿರುಪತಿ ದರ್ಶನ ಟಿಕೆಟ್, ಉಪಾಹಾರ, ಮಧ್ಯಾಹ್ನದ ಊಟ ಹಾಗೂ ಲಡ್ಡು ಪ್ರಸಾದ ಒಳಗೊಂಡಿದ್ದು, ಕೆಎಸ್ಟಿಡಿಸಿ ಅಧಿಕೃತ ವೆಬ್ಸೈಟ್ ಮೂಲಕ ಮುಂಗಡ ಬುಕ್ಕಿಂಗ್ ಮಾಡಬಹುದು.

ಇದನ್ನು ನೋಡಿ : ಕಂದಾಯ ನೌಕರರ ಪ್ರತಿಭಟನಾ ಸ್ಥಳಕ್ಕೆ DC VISIT – ಸಂಧಾನ ಸಫಲ ಆಗುತ್ತಾ? ಇಲ್ವಾ?




