Bengaluru : ರಾಜ್ಯದ ಮತದಾರರೇ ಗಮನಿಸಿ : ಮತದಾನದ ಹಕ್ಕನ್ನು ಉಳಿಸಿಕೊಳ್ಳಲು ತಪ್ಪದೇ ಈ ಕೆಲಸ ಮಾಡಿ!

Bengaluru : ಪ್ರಜಾಪ್ರಭುತ್ವದ ಅಡಿಪಾಯವಾಗಿರುವ ಮತದಾನದ ಹಕ್ಕು ಪ್ರತಿಯೊಬ್ಬ ಅರ್ಹ ನಾಗರಿಕನಿಗೂ ತಲುಪಿಸುವ ಉದ್ದೇಶದಿಂದ “ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR-2026) ಪ್ರಕ್ರಿಯೆ ಆರಂಭವಾಗಿದೆ. ನಿಮ್ಮ ಮತದಾನದ ಹಕ್ಕು… ನಿಮ್ಮ ಕೈಯಲ್ಲಿ” ಎಂಬ ಧ್ಯೇಯವಾಕ್ಯದೊಂದಿಗೆ ನಡೆಯುತ್ತಿರುವ ಈ ಅಭಿಯಾನದಲ್ಲಿ ಸಾರ್ವಜನಿಕರು ಸಕ್ರಿಯವಾಗಿ ಭಾಗವಹಿಸುವಂತೆ ಚುನಾವಣಾ ಅಧಿಕಾರಿಗಳು ಮನವಿ ಮಾಡಿದ್ದಾರೆ.
ಬಲಿಷ್ಠ ಹಾಗೂ ಸದೃಢ ಪ್ರಜಾಪ್ರಭುತ್ವದ ನಿರ್ಮಾಣಕ್ಕಾಗಿ ಪ್ರತಿಯೊಬ್ಬ ಅರ್ಹ ನಾಗರಿಕರು ತಮ್ಮ ಹೆಸರನ್ನು ಮತದಾರರ ಪಟ್ಟಿಯಲ್ಲಿ ನೋಂದಾಯಿಸಿಕೊಳ್ಳುವುದು ಮತ್ತು ವಿವರಗಳನ್ನು ಪರಿಶೀಲಿಸಿಕೊಳ್ಳುವುದು ಅತ್ಯಗತ್ಯವಾಗಿದೆ.

ಮನೆ ಮನೆಗೆ ಭೇಟಿ ನೀಡಲಿರುವ BLOಗಳು
ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆಯ ಅಂಗವಾಗಿ ಬೂತ್ ಮಟ್ಟದ ಅಧಿಕಾರಿಗಳು (BLO) ಮನೆ ಮನೆಗೆ ಭೇಟಿ ನೀಡಲಿದ್ದಾರೆ. ಈ ವೇಳೆ ಸಾರ್ವಜನಿಕರು ಅಗತ್ಯ ದಾಖಲೆಗಳನ್ನು ಒದಗಿಸಿ, ಮತದಾರರ ಪಟ್ಟಿಯಲ್ಲಿರುವ ತಮ್ಮ ಹೆಸರು, ವಯಸ್ಸು, ವಿಳಾಸ ಹಾಗೂ ಇತರೆ ಮಾಹಿತಿಯನ್ನು ಪರಿಶೀಲಿಸಿ ದೃಢಪಡಿಸಿಕೊಳ್ಳಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇದನ್ನು ಓದಿ : SIR ಪ್ರಕ್ರಿಯೆಗೆ ತೆರಳುತ್ತಿದ್ದಾಗ ಡೆಡ್ಲಿ ಆಕ್ಸಿಡೆಂ*
ನಿಮ್ಮ ಮತದಾನದ ಹಕ್ಕನ್ನು ಉಳಿಸಿಕೊಳ್ಳಲು ಈ ಕೆಳಗಿನ ಹಂತಗಳನ್ನು ಅನುಸರಿಸಿ
- ಮತದಾರರ ಪಟ್ಟಿಯಲ್ಲಿರುವ ವಿವರಗಳನ್ನು ಪರಿಶೀಲಿಸಿ ಹೆಸರು, ವಯಸ್ಸು, ವಿಳಾಸ ಸೇರಿದಂತೆ ಎಲ್ಲ ಮಾಹಿತಿಯೂ ಸರಿಯಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ.
- ಹೆಸರು ಸೇರ್ಪಡೆ ಅಥವಾ ತಿದ್ದುಪಡಿ ಅಗತ್ಯವಿದ್ದರೆ BLOಗೆ ಅಗತ್ಯ ದಾಖಲೆಗಳನ್ನು ಸಲ್ಲಿಸಿ.
- 18 ವರ್ಷ ಪೂರ್ಣಗೊಂಡಿರುವ ಯುವಕರು ಹಾಗೂ ಮತದಾನದ ಅರ್ಹತೆ ಹೊಂದಿರುವ ಕುಟುಂಬದ ಇತರ ಸದಸ್ಯರ ಹೆಸರನ್ನು ಮತದಾರರ ಪಟ್ಟಿಗೆ ಸೇರಿಸಲು ಈ ಅವಕಾಶವನ್ನು ಬಳಸಿಕೊಳ್ಳಿ.
- BLO ಭೇಟಿ ವೇಳೆ ಸಂಪೂರ್ಣ ಸಹಕಾರ ನೀಡಿ, ಅಗತ್ಯ ಮಾಹಿತಿಯನ್ನು ಒದಗಿಸಿ.

ಮತದಾನದ ಹಕ್ಕು ಅತ್ಯಂತ ಅಮೂಲ್ಯ
ಪ್ರಜಾಪ್ರಭುತ್ವದ ಉನ್ನತಿಗೆ ನಮ್ಮದೊಂದು ಮತದಾನದ ಹಕ್ಕು ಅತ್ಯಂತ ಅಮೂಲ್ಯವಾಗಿದೆ. SIR-2026 ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಜವಾಬ್ದಾರಿಯುತವಾಗಿ ಭಾಗವಹಿಸಿ, ನಿಮ್ಮ ಹೆಸರನ್ನು ಮತದಾರರ ಪಟ್ಟಿಯಲ್ಲಿ ಖಚಿತಪಡಿಸಿಕೊಳ್ಳುವ ಮೂಲಕ ಬಲಿಷ್ಠ ಪ್ರಜಾಪ್ರಭುತ್ವ ನಿರ್ಮಾಣಕ್ಕೆ ನಿಮ್ಮ ಅಮೂಲ್ಯ ಕೊಡುಗೆ ನೀಡಿ ಎಂದು ಪ್ರಕಟಣೆ ಕೋರಿದೆ.

ಇದನ್ನು ನೋಡಿ : ಮಗಳ ಸಾವಿನಿಂದ ಕಂಗಲಾದ ತಾಯಿ – ಬಿಕ್ಕಿ ಬಿಕ್ಕಿ ಅತ್ತ BHUVNA ತಾಯಿ ಸರೋಜಮ್ಮ




