Bengaluru : ದಾಖಲೆ ಬರೆದ ಉಷ್ಣಾಂಶ: 112 ವರ್ಷಗಳ ಬಳಿಕ ಜುಲೈನಲ್ಲಿ ಅತ್ಯಧಿಕ ತಾಪಮಾನ ದಾಖಲು

ನೈಋತ್ಯ ಮುಂಗಾರು ದುರ್ಬಲಗೊಂಡಿರುವ ಪರಿಣಾಮ ಕರ್ನಾಟಕದಾದ್ಯಂತ ತಾಪಮಾನ ಏರಿಕೆಯಾಗಿದ್ದು, ರಾಜಧಾನಿ ಬೆಂಗಳೂರಿನಲ್ಲಿ 112 ವರ್ಷಗಳ ಬಳಿಕ ಜುಲೈ ತಿಂಗಳಲ್ಲೇ ಅತಿ ಹೆಚ್ಚು ಗರಿಷ್ಠ ತಾಪಮಾನ ದಾಖಲಾಗಿದೆ.
112 ವರ್ಷಗಳ ಬಳಿಕ ಜುಲೈನಲ್ಲಿ ಅತ್ಯಧಿಕ ತಾಪಮಾನ
ಭಾರತೀಯ ಹವಾಮಾನ ಇಲಾಖೆಯ (IMD) ಮಾಹಿತಿ ಪ್ರಕಾರ, ಮಂಗಳವಾರ (ಜುಲೈ 14) ಬೆಂಗಳೂರಿನಲ್ಲಿ ಗರಿಷ್ಠ 33.6 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಜುಲೈ ತಿಂಗಳಲ್ಲಿ ಬೆಂಗಳೂರಿನಲ್ಲಿ ದಾಖಲಾಗಿರುವ ಇದು ಕಳೆದ 112 ವರ್ಷಗಳಲ್ಲೇ ಅತ್ಯಧಿಕ ತಾಪಮಾನವಾಗಿದೆ.
ಇದಕ್ಕೂ ಮೊದಲು ಜುಲೈ ತಿಂಗಳಲ್ಲಿ ಬೆಂಗಳೂರಿನಲ್ಲಿ ಗರಿಷ್ಠ 33.3 ಡಿಗ್ರಿ ಸೆಲ್ಸಿಯಸ್ ತಾಪಮಾನ 1914 ಹಾಗೂ 1926ರಲ್ಲಿ ದಾಖಲಾಗಿತ್ತು. ಇದೀಗ 33.6 ಡಿಗ್ರಿ ಸೆಲ್ಸಿಯಸ್ ದಾಖಲಾಗುವ ಮೂಲಕ ಆ ದಾಖಲೆಯನ್ನು ಮೀರಿದೆ.

ತಾಪಮಾನ ಹೆಚ್ಚಳಕ್ಕೆ ಕಾರಣವೇನು?
ಸಾಮಾನ್ಯವಾಗಿ ಜುಲೈ ತಿಂಗಳಲ್ಲಿ ಬೆಂಗಳೂರಿನ ಗರಿಷ್ಠ ತಾಪಮಾನ 28.3 ಡಿಗ್ರಿ ಸೆಲ್ಸಿಯಸ್ ಇರಬೇಕಾಗಿದ್ದು, ಈ ಬಾರಿ ಅದು ಸುಮಾರು 5 ಡಿಗ್ರಿ ಸೆಲ್ಸಿಯಸ್ಗೂ ಹೆಚ್ಚು ಏರಿಕೆಯಾಗಿದೆ.
ಇದನ್ನು ಓದಿ : ಒಂದು ವಾರ ತಾಪಮಾನ ಹೆಚ್ಚಳ – ಹವಾಮಾನ ಇಲಾಖೆ ಮುನ್ಸೂಚನೆ!
ಬೆಂಗಳೂರು ಮಾತ್ರವಲ್ಲದೆ, ರಾಜ್ಯದ ಬಹುತೇಕ ಜಿಲ್ಲೆಗಳಲ್ಲೂ ಗರಿಷ್ಠ ತಾಪಮಾನ ಸಾಮಾನ್ಯಕ್ಕಿಂತ 3ರಿಂದ 4 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಿದೆ.
ನೈಋತ್ಯ ಮುಂಗಾರು ದುರ್ಬಲಗೊಂಡಿರುವುದರಿಂದ ಮಳೆಯ ಪ್ರಮಾಣ ಕಡಿಮೆಯಾಗಿದ್ದು, ಅದರ ಪರಿಣಾಮವಾಗಿ ಬಿಸಿಲಿನ ತೀವ್ರತೆ ಹೆಚ್ಚಾಗಿದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.
ಜುಲೈ 19ರವರೆಗೆ ಬಿಸಿಲು ಮುಂದುವರಿಯುವ ಸಾಧ್ಯತೆ
ಹವಾಮಾನ ಇಲಾಖೆ ಮುನ್ಸೂಚನೆಯ ಪ್ರಕಾರ, ರಾಜ್ಯದಲ್ಲಿ ಜುಲೈ 15ರಿಂದ 19ರವರೆಗೆ ಉಷ್ಣಾಂಶವು ಇನ್ನೂ 3ರಿಂದ 5 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗುವ ಸಾಧ್ಯತೆ ಇದೆ.
ಯೆಲ್ಲೋ ಅಲರ್ಟ್ ಅಲರ್ಟ್ ಘೋಷಣೆ
ಇನ್ನು ಕರಾವಳಿ ಜಿಲ್ಲೆಗಳಲ್ಲಿ ಬಿಸಿ ಹಾಗೂ ತೇವಾಂಶ ಹೆಚ್ಚಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಇಂದು ಮತ್ತು ನಾಳೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಉತ್ತರ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಇನ್ನೂ ಕೆಲವು ದಿನಗಳು ಒಣಹವಾಮಾನ ಮುಂದುವರಿಯುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಇದನ್ನು ನೋಡಿ : ಕಳ್ಳರಿಗೆ ಬ್ರೇಕ್ ಹಾಕಲು ಖಾಕಿ ಪ್ಲಾನ್ – ಮನೆ ಮನೆಗೆ ತೆರಳಿ ಜಾಗೃತಿ ಅಭಿಯಾನ




