Tamil Actor Abhinay Death : ಕಾಲಿವುಡ್ನ ಜನಪ್ರಿಯ ನಟ, ಬಹುಭಾಷಾ ಕಲಾವಿದ ಅಭಿನಯ್ ಇಂದು ನಿಧನ ಹೊಂದಿದ್ದಾರೆ.

ಕಾಲಿವುಡ್ನ ಜನಪ್ರಿಯ ನಟ ಹಾಗೂ ಬಹುಭಾಷಾ ಕಲಾವಿದ ಅಭಿನಯ್ (Tamil actor Abhinay) ನವೆಂಬರ್ 10ರಂದು ನಿಧನ ಹೊಂದಿದ್ದಾರೆ. ಅವರಿಗೆ 44 ವರ್ಷ ವಯಸ್ಸಾಗಿತ್ತು.
ಅವರು ಕಳೆದ ಕೆಲವು ದಿನಗಳಿಂದ ಲಿವರ್ ಸಂಬಂಧಿತ ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಇಹಲೋಕ ತ್ಯಜಿಸಿದ್ದಾರೆ.
ಆರ್ಥಿಕ ನೆರವಿಗಾಗಿ ವಿಡಿಯೊ ಮೂಲಕ ಮನವಿ
ಅಭಿನಯ್ ತಮ್ಮ ಅಸೌಖ್ಯದ ದಿನಗಳಲ್ಲಿ ವಿಡಿಯೊ ಮೂಲಕ ಜನರಿಗೆ ಆರ್ಥಿಕ ನೆರವು ನೀಡುವಂತೆ ಮನವಿ ಮಾಡಿದ್ದರು. “ನಾನು ಹೆಚ್ಚು ಕಾಲ ಇರುತ್ತೇನೆಯೋ ತಿಳಿದಿಲ್ಲ. ವೈದ್ಯರು ಇನ್ನೂ ಒಂದೂವರೆ ವರ್ಷ ಮಾತ್ರ ಬದುಕಬಹುದು ಎಂದಿದ್ದಾರೆ,” ಎಂದು ಅವರು ವಿಡಿಯೊದಲ್ಲಿ ಹೇಳಿಕೊಂಡಿದ್ದರು. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಅಭಿಮಾನಿಗಳಲ್ಲಿ ಆತಂಕ ಮೂಡಿಸಿತ್ತು.
ಚೆನ್ನೈ ನಿವಾಸದಲ್ಲೇ ಮೃತದೇಹ
ಪ್ರಸ್ತುತ ಅಭಿನಯ್ ಅವರ ಮೃತದೇಹವನ್ನು ಚೆನ್ನೈಯಲ್ಲಿರುವ ಅವರ ನಿವಾಸದಲ್ಲಿ ಇರಿಸಲಾಗಿದೆ. ಅವರಿಗೆ ಹತ್ತಿರದ ಸಂಬಂಧಿಕರು ಯಾರೂ ಇಲ್ಲದ ಕಾರಣ, ಅಂತ್ಯಕ್ರಿಯೆಯನ್ನು ನಡಿಗರ್ ಸಂಘದ ಪ್ರತಿನಿಧಿಗಳ ಮೇಲ್ವಿಚಾರಣೆಯಲ್ಲಿ ನಡೆಸಲಾಗುವುದು ಎಂದು ಮೂಲಗಳು ತಿಳಿಸಿವೆ.
ಚಿತ್ರರಂಗದ ಆರಂಭ – ಧನುಷ್ ಜೊತೆಗಿನ ಮೊದಲ ಸಿನಿಮಾ
ಅಭಿನಯ್ ತಮ್ಮ ಸಿನಿ ಜೀವನವನ್ನು 2002ರಲ್ಲಿ ಧನುಷ್ ನಟನೆಯ ಮೊದಲ ಚಿತ್ರ ‘ತುಲ್ಲುವದೋ ಇಲಮೈ’ ಮೂಲಕ ಆರಂಭಿಸಿದ್ದರು. ಈ ಚಿತ್ರದಿಂದ ಅವರು ತಮಿಳು ಚಿತ್ರರಂಗಕ್ಕೆ ಕಾಲಿಟ್ಟರು.
ಇದನ್ನು ನೋಡಿ : ವಿಧಾನಸೌಧದ ಟೆರರಿಸ್ಟ್ ಬಗ್ಗೆ ಯಾರೂ ಚರ್ಚೆ ಮಾಡ್ತಿಲ್ಲವಲ್ಲ? -HDK ಶಾಕಿಂಗ್ ಹೇಳಿಕೆ

ಮಲಯಾಳಂ ಚಿತ್ರಗಳಲ್ಲೂ ಗುರುತಿಸಿಕೊಂಡ ಕಲಾವಿದ
ತಮಿಳಿನ ಜೊತೆಗೆ ಅಭಿನಯ್ ಮಲಯಾಳಂ ಚಿತ್ರರಂಗದಲ್ಲಿಯೂ ತಮ್ಮ ಗುರುತನ್ನು ಮೂಡಿಸಿದ್ದರು. 2002ರಲ್ಲಿ ಬಿಡುಗಡೆಯಾದ ‘ಕೈಯೆತುಮ್ ದೂರತ್’ ಅವರ ಮೊದಲ ಮಲಯಾಳಂ ಸಿನಿಮಾ.
ಅವರು ಡಬ್ಬಿಂಗ್ ಕಲಾವಿದರಾಗಿಯೂ ಹೆಸರು ಮಾಡಿದ್ದಾರೆ. ತಮಿಳಿನ ‘ತುಪಾಕಿ’, ‘ಅಂಜಾನ್’, ‘ಪೈಯಾ’, ಹಾಗೂ ‘ಕಾಕ ಮುಟ್ಟೈ’ ಚಿತ್ರಗಳಲ್ಲಿ ವಿವಿಧ ಬಾಲಿವುಡ್ ನಟರಿಗೆ ಧ್ವನಿ ನೀಡಿದ್ದಾರೆ.
ಕೊನೆಯ ಸಿನಿಮಾ ಮತ್ತು ಜಾಹೀರಾತು ಪ್ರಭಾವ
2014ರಲ್ಲಿ ಬಿಡುಗಡೆಯಾದ ‘ವಲ್ಲವನುಕ್ಕು ಪುಲ್ಲುಂ ಆಯುಧಮ್’ ಅವರ ಕೊನೆಯ ಚಿತ್ರವಾಗಿತ್ತು. ಅದಾದ ಬಳಿಕ ಅವರು ಸಿನಿಮಾರಂಗದಿಂದ ದೂರ ಉಳಿದಿದ್ದರು. ಅಭಿನಯ್ ಒರಿಯೋ ಬಿಸ್ಕೆಟ್ ಸೇರಿದಂತೆ ಹಲವಾರು ಬ್ರ್ಯಾಂಡ್ಗಳ ಜಾಹೀರಾತುಗಳಲ್ಲಿ ಕಾಣಿಸಿಕೊಂಡು ಜನಮೆಚ್ಚುಗೆ ಪಡೆದಿದ್ದರು.
ಧನುಷ್ ಸೇರಿದಂತೆ ಕಲಾವಿದರಿಂದ ನೆರವು
ಅಭಿನಯ್ ಚಿಕಿತ್ಸೆಗೆ ತಮಿಳು ಚಿತ್ರರಂಗದ ಹಲವಾರು ಕಲಾವಿದರು ಆರ್ಥಿಕ ನೆರವು ನೀಡಿದ್ದರು. ಧನುಷ್ 5 ಲಕ್ಷ ರೂ. ಹಾಗೂ ಕೆ.ಪಿ.ವೈ. ಬಾಲ 1 ಲಕ್ಷ ರೂ. ಸಹಾಯ ನೀಡಿದ್ದರು. ಆದರೂ ಚಿಕಿತ್ಸೆ ಫಲಕಾರಿಯಾಗದೆ ಅಭಿನಯ್ ಅಕಾಲಿಕವಾಗಿ ನಿಧನರಾಗಿದ್ದಾರೆ.
23 ವರ್ಷಗಳ ವೃತ್ತಿ ಜೀವನದಲ್ಲಿ ಸುಮಾರು 15 ಚಿತ್ರಗಳಲ್ಲಿ ನಟಿಸಿದ ಅಭಿನಯ್ ಅವರ ನಿಧನದಿಂದ ಕಾಲಿವುಡ್ ಹಾಗೂ ಮಾಲಿವುಡ್ ಚಿತ್ರರಂಗ ಕಂಬನಿ ಮಿಡಿದಿದೆ.

ಇದನ್ನು ಓದಿ : Actor Abhinay : ಕಾಲಿವುಡ್ ಜನಪ್ರಿಯ ನಟ ಅಭಿನಯ್ ಇನ್ನಿಲ್ಲ




