Sophie Devine : ನ್ಯೂಝಿಲೆಂಡ್ ತಂಡದ ಸ್ಟಾರ್ ಆಟಗಾರ್ತಿ ಸೋಫಿ ಡಿವೈನ್ ಏಕದಿನ ಕ್ರಿಕೆಟ್ಗೆ ಗುಡ್ ಬೈ ಹೇಳಿದ್ದಾರೆ.

ನ್ಯೂಝಿಲೆಂಡ್ ಮಹಿಳಾ ಕ್ರಿಕೆಟ್ ತಂಡದ ಸ್ಟಾರ್ ಆಲ್ರೌಂಡರ್ ಸೋಫಿ ಡಿವೈನ್ (Sophie Devine) ತಮ್ಮ ದೀರ್ಘ ಏಕದಿನ (ODI) ಕ್ರಿಕೆಟ್ ವೃತ್ತಿಜೀವನಕ್ಕೆ ಗುಡ್ ಬೈ ಹೇಳಿದ್ದಾರೆ. ಮಹಿಳಾ ಏಕದಿನ ವಿಶ್ವಕಪ್ನ 27ನೇ ಪಂದ್ಯದ ಮೂಲಕ ಅವರು 19 ವರ್ಷಗಳ ಶ್ರೇಷ್ಠ ಅಂತಾರಾಷ್ಟ್ರೀಯ ಏಕದಿನ ಪಯಣವನ್ನು ಮುಗಿಸಿದ್ದಾರೆ.
2006ರಲ್ಲಿ ಆರಂಭವಾದ ಓಡಿಐ ಪಯಣ
2006ರಲ್ಲಿ ನ್ಯೂಝಿಲೆಂಡ್ ಪರ ಏಕದಿನ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ ಸೋಫಿ ಡಿವೈನ್ ಒಟ್ಟು 159 ಏಕದಿನ ಪಂದ್ಯಗಳಲ್ಲಿ ಭಾಗವಹಿಸಿದ್ದರು. ಈ ಅವಧಿಯಲ್ಲಿ 144 ಇನಿಂಗ್ಸ್ಗಳಲ್ಲಿ 4279 ರನ್ಗಳು ಅವರ ಬ್ಯಾಟ್ನಿಂದ ಬಂದಿವೆ.
ಅವರ ಖಾತೆಯಲ್ಲಿ 9 ಶತಕಗಳು ಮತ್ತು 18 ಅರ್ಧಶತಕಗಳು ದಾಖಲಾಗಿದ್ದು, ನ್ಯೂಝಿಲೆಂಡ್ ಪರ ಅತ್ಯಂತ ಸತತ ಪ್ರದರ್ಶನ ನೀಡಿದ ಆಟಗಾರ್ತಿಯರಲ್ಲಿ ಒಬ್ಬರಾಗಿದ್ದಾರೆ.
ಇದನ್ನು ಓದಿ : ಜಾಹ್ನವಿ-ಅಶ್ವಿನಿ ಗೌಡ ನಡುವೆ ಬಿಗ್ ಫೈಟ್
ಬ್ಯಾಟಿಂಗ್ ಜೊತೆಗೆ ಬೌಲಿಂಗ್ನಲ್ಲೂ ಮಿಂಚಿದ ಡಿವೈನ್
ಬೌಲರ್ ಆಗಿಯೂ ಸೋಫಿ ಡಿವೈನ್ ತಮ್ಮದೇ ಆದ ಗುರುತು ಮೂಡಿಸಿಕೊಂಡಿದ್ದಾರೆ. ಒಟ್ಟು 133 ಇನಿಂಗ್ಸ್ಗಳಲ್ಲಿ 5262 ಎಸೆತಗಳನ್ನು ಎಸೆದು 111 ವಿಕೆಟ್ಗಳನ್ನು ಕಬಳಿಸಿದ್ದಾರೆ.

ಈ ಮೂಲಕ ನ್ಯೂಝಿಲೆಂಡ್ ಪರ ಏಕದಿನ ಕ್ರಿಕೆಟ್ನಲ್ಲಿ 4,000 ರನ್ ಹಾಗೂ 100 ವಿಕೆಟ್ ಪಡೆದ ಅಪರೂಪದ ಸಾಧನೆ ಮಾಡಿದ ಕೆಲವೇ ಆಟಗಾರ್ತಿಯರಲ್ಲಿ ಡಿವೈನ್ ಒಬ್ಬರು.
ಇಂಗ್ಲೆಂಡ್ ವಿರುದ್ಧದ ಪಂದ್ಯವೇ ಕೊನೆಯದು
ಇತ್ತೀಚಿನ ಇಂಗ್ಲೆಂಡ್ ವಿರುದ್ಧದ ಪಂದ್ಯದೊಂದಿಗೆ ಡಿವೈನ್ ಅವರ ಏಕದಿನ ವೃತ್ತಿಜೀವನಕ್ಕೆ ತೆರೆ ಬಿದ್ದಿದೆ. ಆದರೆ ಅವರು ಕ್ರಿಕೆಟ್ನಿಂದ ಸಂಪೂರ್ಣ ನಿವೃತ್ತಿ ಹೊಂದಿಲ್ಲ. ಫ್ರಾಂಚೈಸಿ ಕ್ರಿಕೆಟ್ಗಳಲ್ಲಿ ಮುಂದುವರೆಯುವ ಉದ್ದೇಶವನ್ನು ಅವರು ಘೋಷಿಸಿದ್ದಾರೆ.
ವುಮೆನ್ಸ್ ಪ್ರೀಮಿಯರ್ ಲೀಗ್ನಲ್ಲಿ ಮರಳಿ ಕಣಕ್ಕಿಳಿಯುವ ಸಾಧ್ಯತೆ
ಸೋಫಿ ಡಿವೈನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಪ್ರಮುಖ ಆಟಗಾರ್ತಿ. ಕಳೆದ ಎರಡು ಸೀಸನ್ಗಳಲ್ಲಿ ಆರ್ಸಿಬಿ ಪರ ಕಣಕ್ಕಿಳಿದಿದ್ದ ಡಿವೈನ್, 2024ರ WPL ಚಾಂಪಿಯನ್ ಪಟ್ಟ ಪಡೆಯುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ಆದರೆ ವೈಯಕ್ತಿಕ ಕಾರಣಗಳಿಂದಾಗಿ ಅವರು 2025ರ ಸೀಸನ್ನಲ್ಲಿ ಭಾಗವಹಿಸಲಿಲ್ಲ. ಈಗ ಏಕದಿನ ಕ್ರಿಕೆಟ್ಗೆ ವಿದಾಯ ಹೇಳಿದ ಬಳಿಕ, ಮುಂಬರುವ ವುಮೆನ್ಸ್ ಪ್ರೀಮಿಯರ್ ಲೀಗ್ನಲ್ಲಿ ಮತ್ತೆ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚು ಎಂದು ತಿಳಿದುಬಂದಿದೆ.

ಇದನ್ನು ನೋಡಿ : ಕಣ್ಣೀರಿನೊಂದಿಗೆ ವಿದಾಯ ಹೇಳಿದ ಸೋಫಿ ಡಿವೈನ್




