Varamahalakshmi ವ್ರತವನ್ನು ಎಲ್ಲಾ ಮುತ್ತೈದೆಯರು ಭಕ್ತಿ ಮತ್ತು ಶ್ರದ್ಧೆಯಿಂದ ಆಚರಿಸುತ್ತಾರೆ.

ಶ್ರಾವಣವು ಹಬ್ಬಗಳ ಮಾಸವಾಗಿದೆ. ಮೊನ್ನೆಯಷ್ಟೇ ಮೊದಲ ಹಬ್ಬವಾಗಿ ನಾಗರಪಂಚಮಿಯನ್ನು ಅತ್ಯಂತ ಸಡಗರ- ಸಂಭ್ರಮದಿಂದ ಆಚರಿಸಿದ್ದೇವೆ. ಇದೀಗ ಶ್ರಾವಣ ಮಾಸದ ಎರಡನೇ ಶುಕ್ರವಾರ ಬರುವ ವರಮಹಾಲಕ್ಷ್ಮಿ ಹಬ್ಬವನ್ನು ಕೂಡ ಸಂಭ್ರಮದಿಂದಲೇ ಬರಮಾಡಿಕೊಳ್ಳುತ್ತಿದ್ದೇವೆ. ವರಮಹಾಲಕ್ಷ್ಮಿ (Varamahalakshmi) ವ್ರತವನ್ನು ಎಲ್ಲಾ ಮುತ್ತೈದೆಯರು ಭಕ್ತಿ ಮತ್ತು ಶ್ರದ್ಧೆಯಿಂದ ಆಚರಿಸುತ್ತಾರೆ.
ಪುರಾಣ ಏನು ಹೇಳುತ್ತೆ..?:
ಪುರಾಣದ ಪ್ರಕಾರ, ದೇವತೆಗಳು ಮತ್ತು ರಾಕ್ಷಸರು ಅಮೃತಕ್ಕಾಗಿ ವಾಸುಕಿ ಸರ್ಪದ ನೆರವಿನಿಂದ ಮಂದಾರ ಪರ್ವತವನ್ನು ಬಳಸಿ ಕ್ಷೀರಸಾಗರ ಮಂಥನ ನಡೆಸಿದಾಗ ಲಕ್ಷ್ಮಿದೇವಿಯು ಶ್ವೇತವರ್ಣದಲ್ಲಿ ಉದ್ಭವಿಸಿದಳು ಎನ್ನಲಾಗುತ್ತದೆ.
ಇಷ್ಟಾರ್ಥಗಳನ್ನು ಈಡೇರಿಸುವ ಲಕ್ಷ್ಮಿದೇವಿಯ ಆರಾಧನೆಗಾಗಿ ವರಮಹಾಲಕ್ಷ್ಮಿ ವ್ರತವನ್ನು ಆಚರಿಸಲಾಗುತ್ತದೆ ಎಂಬ ನಂಬಿಕೆಯಿದೆ.
READ THIS : ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ – ಬೆಲೆ ಏರಿಕೆಯ ನಡುವೆಯೂ ಖರೀದಿ ಭರಾಟೆ ಜೋರು

ಬಿಲ್ವಪತ್ರೆಯಿಂದ ಪೂಜೆ ಸಲ್ಲಿಸುವ ಸಂಪ್ರದಾಯ
ವರಮಹಾಲಕ್ಷ್ಮಿಗೆ ಕಮಲದ ಹೂವು ಹಾಗೂ ಬಿಲ್ವಪತ್ರೆ ಪ್ರಿಯ. ಹೀಗಾಗಿ ಪೂಜೆಯ ವೇಳೆ ಕಮಲದ ಹೂವು, ಬಿಲ್ವಪತ್ರೆ ಸೇರಿದಂತೆ ವಿವಿಧ ಹೂವುಗಳನ್ನು ಸಮರ್ಪಿಸಲಾಗುತ್ತದೆ. ಹಣ, ಚಿನ್ನ, ಬಳೆ, ಹಣ್ಣು, ಸಿಹಿತಿಂಡಿ, ಅರಿಶಿಣ-ಕುಂಕುಮ ಸೇರಿದಂತೆ ವಿವಿಧ ವಸ್ತುಗಳನ್ನು ದೇವಿಯ ಮುಂದೆ ಇಟ್ಟು ಪೂಜೆ ನೆರವೇರಿಸಲಾಗುತ್ತದೆ. ಬಿಲ್ವ ವೃಕ್ಷದಲ್ಲಿ ಲಕ್ಷ್ಮಿದೇವಿ ನೆಲೆಸಿದ್ದಾಳೆ ಎಂಬ ನಂಬಿಕೆಯ ಹಿನ್ನೆಲೆಯಲ್ಲಿ ಬಿಲ್ವಪತ್ರೆಯಿಂದ ಪೂಜೆ ಸಲ್ಲಿಸುವ ಸಂಪ್ರದಾಯವೂ ಇದೆ.
ವರಲಕ್ಷ್ಮಿ ಎಂದರೆ ವರಗಳನ್ನು ನೀಡುವವಳು ಎಂಬ ನಂಬಿಕೆಯಿದ್ದು, ನಿಷ್ಠೆಯಿಂದ ವ್ರತ ಆಚರಿಸಿದರೆ ಕುಟುಂಬಕ್ಕೆ ಸುಖ, ಸಮೃದ್ಧಿ ಹಾಗೂ ಏಳಿಗೆ ದೊರೆಯುತ್ತದೆ ಎಂಬುದು ಭಕ್ತರ ವಿಶ್ವಾಸ. ತನು, ಮನ ಹಾಗೂ ಮನೆ ಶುದ್ಧವಾಗಿರುವಲ್ಲಿ ಲಕ್ಷ್ಮಿದೇವಿ ನೆಲೆಸುತ್ತಾಳೆ ಎಂಬ ನಂಬಿಕೆಯೂ ಹಿಂದಿನಿಂದಲೂ ನಡೆದುಕೊಂಡು ಬಂದಿದೆ.

ಯಮುನಾ ಪೂಜೆ ನೆರವೇರಿಸಿ ವರಮಹಾಲಕ್ಷ್ಮಿ ವ್ರತ
ಹಬ್ಬದಂದು ಕಡಲೆಬೇಳೆಯಿಂದ ತಯಾರಿಸಿದ ಪಾಯಸ, ಹೋಳಿಗೆ ಸೇರಿದಂತೆ ವಿವಿಧ ಸಿಹಿತಿನಿಸುಗಳನ್ನು ನೈವೇದ್ಯವಾಗಿ ಸಮರ್ಪಿಸಲಾಗುತ್ತದೆ.
ಪೂಜಾ ಸಿದ್ಧತೆಗಳ ಬಳಿಕ ಮೊದಲು ವಿಘ್ನನಿವಾರಕ ಗಣಪತಿಯನ್ನು ಪೂಜಿಸಿ, ನಂತರ ಯಮುನಾ ಪೂಜೆ ನೆರವೇರಿಸಿ ವರಮಹಾಲಕ್ಷ್ಮಿ ವ್ರತವನ್ನು ಆರಂಭಿಸುವುದು ಸಂಪ್ರದಾಯವಾಗಿದೆ.
ವ್ರತದ ಅಂಗವಾಗಿ ಮನೆಗೆ ಮುತ್ತೈದೆಯರನ್ನು ಆಹ್ವಾನಿಸಿ ಅರಿಶಿಣ, ಕುಂಕುಮ ಹಾಗೂ ಸಿಹಿ ನೀಡಿ ಗೌರವಿಸುವ ಪದ್ಧತಿಯೂ ಇದೆ.
ಮದುವೆಯಾದ ಹೆಣ್ಣುಮಕ್ಕಳು ಮೊದಲ ವರ್ಷದಿಂದ ಒಂಬತ್ತು ವರ್ಷಗಳವರೆಗೆ ಶ್ರದ್ಧೆಯಿಂದ ವ್ರತ ಆಚರಿಸಿ, ಒಂಬತ್ತನೇ ವರ್ಷ ವ್ರತವನ್ನು ಮುಕ್ತಾಯಗೊಳಿಸುವ ಸಂಪ್ರದಾಯವೂ ಹಲವು ಕುಟುಂಬಗಳಲ್ಲಿ ಮುಂದುವರಿದಿದೆ.

MUST WATCH : ಪಂಚಭೂತಗಳಲ್ಲಿ ಲೀನರಾದ B.C.NAGESH – ನೆಚ್ಚಿನ ನಾಯಕನಿಗೆ ಭಾವಪೂರ್ಣ ವಿದಾಯ




