ರೇಣುಕಾಸ್ವಾಮಿ ಕೊಲೆ ಕೇಸ್; ಪ್ರದೂಷ್ ಮಾಫಿ ಸಾಕ್ಷಿ ವಿಚಾರವಾಗಿ ಹೈಕೋರ್ಟ್ ಮೆಟ್ಟಿಲೇರಿದ ನಟ Darshan !
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮತ್ತೊಂದು ಮಹತ್ವದ ಬೆಳವಣಿಗೆ ನಡೆದಿದೆ. ಪ್ರಕರಣದ ಎ-14 ಆರೋಪಿ ಪ್ರದೋಷ್ ಅವರನ್ನು ‘ಮಾಫಿ ಸಾಕ್ಷಿ’ಯಾಗಿ ಪರಿಗಣಿಸುವ ಸಿಸಿಹೆಚ್ ಕೋರ್ಟ್ ಆದೇಶವನ್ನು ಪ್ರಶ್ನಿಸಿ ನಟ ದರ್ಶನ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಹೈಕೋರ್ಟ್ ಮೆಟ್ಟಿಲೇರಿದ ದಾಸ
59ನೇ ಸಿಸಿಹೆಚ್ ಸೆಷನ್ಸ್ ಕೋರ್ಟ್ ನೀಡಿದ್ದ ಆದೇಶದ ವಿರುದ್ಧ Darshan ಪರ ವಕೀಲರು ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯನ್ನು ತುರ್ತಾಗಿ ವಿಚಾರಣೆ ನಡೆಸುವಂತೆ ಹಿರಿಯ ವಕೀಲ ಹಷ್ಮತ್ ಪಾಷಾ ಮನವಿ ಮಾಡಿದ್ದು, ಹೈಕೋರ್ಟ್ ವಿಚಾರಣೆಯನ್ನು ಇಂದು (ಆ.13) ಮಧ್ಯಾಹ್ನ 2.30ಕ್ಕೆ ನಿಗದಿಪಡಿಸಿದೆ. ಅಲ್ಲದೆ, ಅರ್ಜಿಯ ಕುರಿತು ಎಸ್ಪಿಪಿಗೆ ಮಾಹಿತಿ ನೀಡುವಂತೆ ದರ್ಶನ್ ಪರ ವಕೀಲರಿಗೆ ಸೂಚಿಸಲಾಗಿದೆ.

ದರ್ಶನ್ ಪರ ವಕೀಲರ ಆಕ್ಷೇಪವೇನು?
ಪ್ರದೂಷ್ ಅವರನ್ನು ಮಾಫಿ ಸಾಕ್ಷಿಯನ್ನಾಗಿ ಪರಿಗಣಿಸುವ ಪ್ರಕ್ರಿಯೆಯಲ್ಲಿ ಲೋಪದೋಷಗಳಿವೆ. ಆದರೆ, ಈ ಕುರಿತು ವಾದ ಮಂಡಿಸಲು ಸಿಸಿಹೆಚ್ ಕೋರ್ಟ್ ಅವಕಾಶ ನೀಡಲಿಲ್ಲ ಎಂಬುದು ದರ್ಶನ್ ಪರ ವಕೀಲರ ಪ್ರಮುಖ ಆಕ್ಷೇಪವಾಗಿದೆ.
“ಮಾಫಿ ಸಾಕ್ಷಿ ಅರ್ಜಿಗೆ ಸಂಬಂಧಿಸಿದಂತೆ ದರ್ಶನ್ ಪರ ವಕೀಲರ ವಾದ ಆಲಿಸಲು ಅನುಮತಿ ನೀಡದ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಸಿಸಿಹೆಚ್ ಕೋರ್ಟ್ ಆದೇಶವನ್ನು ಹೈಕೋರ್ಟ್ನಲ್ಲಿ ಪ್ರಶ್ನಿಸಿದ್ದೇವೆ,” ಎಂದು ಹಿರಿಯ ವಕೀಲ ಹಷ್ಮತ್ ಪಾಷಾ ತಿಳಿಸಿದ್ದಾರೆ.
ಇದನ್ನು ಓದಿ : A14 ಪ್ರದೂಷಗೆ ಹೆಚ್ಚಿನ ಭದ್ರತೆ ಒದಗಿಸಲು ಕೋರ್ಟ್ ಆದೇಶ

ದರ್ಶನ್ ವಿರುದ್ಧ ತಿರುಗಿದ ಎ-14 ಆರೋಪಿ
ರೇಣುಕಾಸ್ವಾಮಿ ಕೊಲೆ ಪ್ರಕರಣದ ಎ-14 ಆರೋಪಿಯಾಗಿರುವ ಪ್ರದೂಷ್ ಇತ್ತೀಚೆಗೆ ತಾನು ‘ಮಾಫಿ ಸಾಕ್ಷಿ’ಯಾಗಲು ಸಿದ್ಧ ಎಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ಪ್ರಕರಣಕ್ಕೆ ಸಂಬಂಧಿಸಿದ ಘಟನೆಗಳ ಇಂಚಿಂಚೂ ವಿವರಗಳನ್ನು ನ್ಯಾಯಾಲಯದ ಮುಂದೆ ಹೇಳಲು ಸಿದ್ಧನಿರುವುದಾಗಿ ಅವರು ತಿಳಿಸಿದ್ದಾರೆ.
ಅಲ್ಲದೆ, ರೇಣುಕಾಸ್ವಾಮಿ ಮೇಲೆ ಹಲ್ಲೆ ನಡೆಸದಂತೆ ದರ್ಶನ್ ಅವರನ್ನು ತಡೆಯಲು ತಾನು ಪ್ರಯತ್ನಿಸಿದ್ದಾಗಿ ಪ್ರದೋಷ್ ನ್ಯಾಯಾಲಯದ ಮುಂದೆ ಹೇಳಿಕೊಂಡಿದ್ದಾರೆ ಎನ್ನಲಾಗಿದೆ.
ಪ್ರದೋಷ್ ಮಾಫಿ ಸಾಕ್ಷಿಯಾಗಲು ಮುಂದಾಗಿರುವುದು ಪ್ರಕರಣದಲ್ಲಿ ದರ್ಶನ್ ಪರ ವಲಯಕ್ಕೆ ಮತ್ತೊಂದು ಕಾನೂನು ಸವಾಲಾಗಿ ಪರಿಣಮಿಸಿದೆ.
ಆದರೆ, ಪ್ರದೋಷ್ ವಿರುದ್ಧ ಕೊಲೆಯಲ್ಲಿ ಭಾಗಿಯಾಗಿರುವುದು ಹಾಗೂ ಸಾಕ್ಷ್ಯ ನಾಶ ಸೇರಿದಂತೆ ಗಂಭೀರ ಆರೋಪಗಳಿವೆ ಎಂದು ಪ್ರಾಸಿಕ್ಯೂಷನ್ ವಾದಿಸಿದೆ. ಪ್ರಕರಣಕ್ಕೆ ಸಂಬಂಧಿಸದವರನ್ನು ಆರೋಪಿಗಳನ್ನಾಗಿ ತರಲು ದರ್ಶನ್ ಅವರಿಂದ ₹30 ಲಕ್ಷ ಹಣ ಪಡೆದ ಆರೋಪವೂ ಪ್ರದೋಷ್ ವಿರುದ್ಧವಿದೆ. ಪವಿತ್ರಾ ಗೌಡ ಅವರನ್ನು ಶೆಡ್ಗೆ ಕರೆತರುವಲ್ಲಿ ಪ್ರದೋಷ್ ಪ್ರಮುಖ ಪಾತ್ರ ವಹಿಸಿದ್ದರೆಂಬ ಆರೋಪವೂ ಇದೆ.

ಸಿಸಿಹೆಚ್ ಕೋರ್ಟ್ ಆದೇಶದ ವಿರುದ್ಧ ಮೇಲ್ಮನವಿ
ಪ್ರದೋಷ್ ಮಾಫಿ ಸಾಕ್ಷಿಯಾಗುವುದಕ್ಕೆ ದರ್ಶನ್ ಪರ ವಕೀಲರು ಸಿಸಿಹೆಚ್ ಕೋರ್ಟ್ನಲ್ಲಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು.
ಆದರೆ, ವಾದ-ವಿವಾದಗಳನ್ನು ಆಲಿಸಿದ 59ನೇ ಸೆಷನ್ಸ್ ಕೋರ್ಟ್ ನ್ಯಾಯಾಧೀಶೆ ಸುಜಾತಾ ಸಾಂಬ್ರಾಣಿ ಅವರು ದರ್ಶನ್ ಪರ ವಕೀಲರ ಆಕ್ಷೇಪವನ್ನು ತಿರಸ್ಕರಿಸಿದ್ದರು.
ಕೊಲೆ ಪ್ರಕರಣದ ಸಹ-ಆರೋಪಿಗಳು, ಮತ್ತೊಬ್ಬ ಆರೋಪಿ ಮಾಫಿ ಸಾಕ್ಷಿಯಾಗಲು ಸಲ್ಲಿಸಿರುವ ಅರ್ಜಿಗೆ ಆಕ್ಷೇಪ ಸಲ್ಲಿಸಲು ಅವಕಾಶವಿಲ್ಲ ಎಂಬ ಅಭಿಪ್ರಾಯವನ್ನು ಕೋರ್ಟ್ ವ್ಯಕ್ತಪಡಿಸಿತ್ತು.
ಪ್ರಾಸಿಕ್ಯೂಷನ್ ವಾದಕ್ಕೆ ಮನ್ನಣೆ ನೀಡಿ ಪ್ರದೋಷ್ ಅವರ ಮಾಫಿ ಸಾಕ್ಷಿ ಅರ್ಜಿಗೆ ಸಂಬಂಧಿಸಿದಂತೆ ಆದೇಶ ನೀಡಲಾಗಿತ್ತು.
ಕೋರ್ಟ್ ಆದೇಶ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ Darshan
ಇದೀಗ ಇದೇ ಆದೇಶವನ್ನು ಪ್ರಶ್ನಿಸಿ ದರ್ಶನ್ ಪರ ವಕೀಲರು ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.
ಇಂದು ಮಧ್ಯಾಹ್ನ 2.30ಕ್ಕೆ ನಡೆಯಲಿರುವ ವಿಚಾರಣೆಯಲ್ಲಿ ಹೈಕೋರ್ಟ್ ಯಾವ ನಿಲುವು ತೆಗೆದುಕೊಳ್ಳಲಿದೆ ಎಂಬುದನ್ನು ಕಾದುನೋಡಬೇಕಿದೆ.
ಇದನ್ನು ನೋಡಿ : ಕಾವೇರಿಗಾಗಿ ಇಂದು ಕರ್ನಾಟಕ ಬಂದ್ – ತುಮಕೂರಲ್ಲಿ ಉರುಳು ಸೇವೆ ಮಾಡಿ ಆಕ್ರೋಶ





