ತುರುವೇಕೆರೆ :
ಒಂದು ಕಡೆ ಬಿಸಿಲು ಮತ್ತೊಂದು ಕಡೆ ಮಳೆಯ ಅಬ್ಬರ. ಇಂತಹ ಸಮಯದಲ್ಲಿ ಬೆಸ್ಕಾಂ, ಕೆಇಬಿ ಇಲಾಖೆಗಳು ವಿದ್ಯುತ್ ಕಂಬಗಳ ನಿರ್ವಹಣೆಗೆ ಹೆಚ್ಚು ಒತ್ತು ನೀಡಬೇಕು. ಆದರೆ ಜಿಲ್ಲೆಯಲ್ಲಿ ಪದೇ ಪದೇ ಬೆಸ್ಕಾಂ ನಿರ್ಲಕ್ಷ್ಯಕ್ಕೆ ಸಾಯುತ್ತಿರುವವರ ಸಂಖ್ಯೆ ಹೆಚ್ಚಾಗ್ತಾನೆ ಇದೆ. ಬೆಸ್ಕಾಂ ನಿರ್ಲಕ್ಷ್ಯಕ್ಕೆ 5 ವರ್ಷದ ಮಗು ಬಲಿಯಾಗಿರುವ ಘಟನೆ ತುಮಕೂರು ಜಲ್ಲೆ ತುರುವೇಕೆರೆ ತಾಲೂಕಿನ ಗೋರಘಟ್ಟ ಗ್ರಾಮದಲ್ಲಿ ನಡೆದಿದೆ.
ಬಾಳಿ ಬದುಕಬೇಕಾದ ಕಂದಮ್ಮ ಇಂದು ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾವನ್ನಪ್ಪಿದೆ. ಗೋರಘಟ್ಟ ಗ್ರಾಮದ ಚಂದ್ರಯ್ಯ ಎಂಬುವವರ ಮಗ 5 ವರ್ಷದ ಪೋಷಕ ಶೆಟ್ಟಿ ಮೃತ ಬಾಲಕ. ಮನೆಯ ಮುಂದೆ ಮಗು ಎಂದಿನಂತೆ ಆಟವಾಡುತ್ತಿತ್ತು. ಇದೇ ವೇಳೆ ವಿದ್ಯುತ್ ತಂತಿ ತುಂಡಾಗಿ ಮನೆ ಮುಂದಿನ ತಂತಿ ಬೇಲಿ ಮೇಲೆ ಬಿದ್ದಿತ್ತು. ಇದನ್ನು ಗಮನಿಸದ ಮಗು ತಂತಿಬೇಲಿ ಮುಟ್ಟಿದ್ದರಿಂದ ವಿದ್ಯುತ್ ಪ್ರವಹಿಸಿ ಮಗು ಸ್ಥಳದಲ್ಲಿಯೇ ಸಾವನ್ನಪ್ಪಿದೆ. ಘಟನೆ ಸಂಬಂಧ ಗ್ರಾಮಸ್ಥರು ಬೆಸ್ಕಾಂ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ದಂಡಿನ ಶಿವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.