ತುಮಕೂರು :
ಇತ್ತೀಚೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ಹೊರಬಿದ್ದಿದ್ದು, ತುಮಕೂರಿನ ಇಬ್ಬರು ಸೇರಿ 22 ಮಂದಿ ವಿದ್ಯಾರ್ಥಿಗಳು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ತುಮಕೂರಿನ ಚೇತನಾ ವಿದ್ಯಾಮಂದಿರದ ಮಹಮ್ಮದ್ ಮಸ್ತೂರ್ ಆದಿಲ್ 625ಕ್ಕೆ 625 ಅಂಕಗಳನ್ನು ಪಡೆದು ರಾಜ್ಯಕ್ಕೆ 8 ರ್ಯಾಂಕ್ ಪಡೆಯುವ ಮೂಲಕ ತುಮಕೂರಿಗೆ ಕೀರ್ತಿ ತಂದಿದ್ದಾರೆ. ಆದಿಲ್ ಸಾಧನೆಗೆ ಶಾಲಾ ಶಿಕ್ಷಕರು, ಸ್ನೇಹಿತರು, ಪೋಷಕರು ಸಂತಸ ವ್ಯಕ್ತಪಡಿಸಿದ್ದರು. ಇತ್ತ ತಮ್ಮ ಸಮುದಾಯದ ಬಾಲಕ ಎಸ್‌ಎಸ್‌ಎಲ್‌ಸಿಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ ಎಂದು ಮುಸ್ಲಿಂ ಮುಖಂಡರು ಆತನ ಮನೆಗೆ ಹೋಗಿ ಹಾರ ಹಾಕಿ, ಸಿಹಿ ತಿನ್ನಿಸಿ ಶುಭ ಹಾರೈಸಿದ್ದಾರೆ.
ನಿನ್ನೆ ನಗರದ ಸದಾಶಿವನಗರದ ಯಾಸೀನ್ ಮಸೀದ್‌ನ ಕಮಿಟಿಯಾದ ಬದರ್ ಎ ಮಸೀದ್ ಮುಖಂಡರು, ವಿದ್ಯಾರ್ಥಿ ಮಹಮ್ಮದ್ ಮಸ್ತೂರ್ ನಿವಾಸಕ್ಕೆ ತೆರಳಿ, ವಿದ್ಯಾರ್ಥಿ ಹಾಗೂ ಅವರ ತಂದೆಗೆ ಹಾರ ಹಾಕಿ, ಸಿಹಿ ತಿನ್ನಿಸಿ ಮುಂದಿನ ಜೀವನ ಉಜ್ವಲವಾಗಿರಲಿ ಎಂದು ಹಾರೈಸಿದರು. ಈ ವೇಳೆ ಮಾತನಾಡಿದ ವಿದ್ಯಾರ್ಥಿ ಮಸ್ತೂರ್ ಆದಿಲ್, ಬದರ್ ಎ ಮಸೀದ್ ಕಮಿಟಿಯವರು ಸನ್ಮಾನ ಮಾಡ್ತಾ ಇರೋದು ಖುಷಿಯಾಗ್ತಿದೆ ಎಂದರು.
ಇನ್ನು ಈ ವೇಳೆ ಮಾತನಾಡಿದ ಸಮುದಾಯದ ಮುಖಂಡರು, ತುಮಕೂರಿನ ಹೆಸರನ್ನು ರಾಜ್ಯಮಟ್ಟಕ್ಕೆ ತೆಗೆದುಕೊಂಡು ಹೋದ ವಿದ್ಯಾರ್ಥಿಗೆ ಶುಭಹಾರೈಸಿದರು. 25 ವರ್ಷಗಳವರೆಗೆ ನಿದ್ರೆ, ಆಸೆ ಎಲ್ಲವನ್ನು ತ್ಯಜಿಸಿ ಅಭ್ಯಾಸ ಮಾಡಿ, ನಿಮ್ಮ ತಂದೆ- ತಾಯಿ ಊರಿಗೆ ಕೀರ್ತಿ ತನ್ನಿ ಅಂತಾ ವಿದ್ಯಾರ್ಥಿಗಳಿಗೆ ಸಂದೇಶ ನೀಡಿದರು. ಅಲ್ಲದೇ ವಿದ್ಯೆ ಕಲಿಸದ ತಂದೆ, ಬುದ್ದಿ ಹೇಳದ ಗುರುವು, ಬಿದ್ದರಲೂ ನೋಡದ ತಾಯಿ ಶುದ್ಧ ವೈರಿಗಳು ಸರ್ವಜ್ಞ ಎಂದು ಹೇಳುವ ಮೂಲಕ ಪೋಷಕರಿಗೆ ಸಂದೇಶ ನೀಡಿದರು. ಜೊತೆಗೆ ಮಕ್ಕಳಿಗೆ ಆಸ್ತಿ ಮಾಡಬೇಡಿ, ಮಕ್ಕಳನ್ನೇ ಆಸ್ತಿ ಮಾಡಿ ಎಂದು ತಿಳಿಸಿದರು.