ಪಾವಗಡ :
ಪಾವಗಡವನ್ನು ಒಂದು ಕಡೆ ಬರದ ನಾಡೆಂದು ಕರೆದರೆ ಮತ್ತೊಂದು ಕಡೆ ಐತಿಹಾಸಿಕವಾಗಿ ರಾಜಮನೆತನ ಆಳ್ವಿಕೆಯಿಂದ ಪ್ರಸಿದ್ಧತೆ ಪಡೆದುಕೊಂಡಿದೆ. ಐತಿಹಾಸಿಕ ಕಲ್ಯಾಣಿಗಳು ಹಾಗೂ ಸ್ಮಾರಕಗಳಿಂದಲೇ ಒಂದು ಕಾಲದಲ್ಲಿ ಹೆಸರು ಮಾಡಿತ್ತು. ರಾಯದುರ್ಗ, ನಿಡಗಲ್, ಮಡಕಸಿರ, ರತ್ನಗಿರಿ, ಮಿಡಿಗೇಶಿ, ಪಾಳ್ಯ ಪಟ್ಟಣಗಳಲ್ಲಿರುವ ಸ್ಮಾರಕಗಳು, ಕಲ್ಯಾಣಿಗಳು ಭೂಗಳ್ಳರ ಪಾಲಾಗುತ್ತಿದೆ ಅನ್ನೋ ಆರೋಪಗಳು ಕೇಳಿ ಬರುತ್ತಿವೆ.
ಪಾವಗಡ ಪ್ರಾಕೃತಿಕವಾಗಿ ಬಿಸಿಲ ನಾಡಾದರೂ ಐತಿಹಾಸಿಕವಾಗಿ ಸ್ಮಾರಕ, ಕಲ್ಯಾಣಿಗಳಿಂದಲೇ ಪ್ರಸಿದ್ಧತೆ ಪಡೆದಿದೆ. ಆದರೆ ಇಂದು ಭೂಗಳ್ಳರ ಕಣ್ಣಿಗೆ ಬಿದ್ದು ತನ್ನ ಸೌಂದರ್ಯವನ್ನೇ ಕಳೆದುಕೊಳ್ತಿದೆ. ಕೋಟಿಗಟ್ಟಲೆ ಬೆಲೆ ಬಾಳುವ ಸರ್ಕಾರಿ ಖರಾಬು ಜಾಗಗಳು ಕೂಡ ಪ್ರಭಾವಿ ವ್ಯಕ್ತಿಗಳಿಂದ ಒತ್ತುವರಿಯಾಗ್ತಿವೆ ಅನ್ನೋ ಆರೋಪ ಕೂಡ ಇದೆ. ಗುಂಡಾಲಮ್ಮ ಕಲ್ಯಾಣಿಯು ಇಂದು ಸಂಪೂರ್ಣವಾಗಿ ಒತ್ತುವರಿಯಾಗಿದೆ ಅನ್ನೋದು ಸಾರ್ವಜನಿಕರ ಮಾತಾಗಿದೆ.
ಇನ್ನು ಪಾಳೆಗಾರರ ಕಾಲದಲ್ಲಿ ವೀರನಾರಿಯ ನೆನಪಿಗಾಗಿ ಗುಂಡಲಮ್ಮ ಕಲ್ಯಾಣಿಯನ್ನು ಕಟ್ಟಿಸಿದರು. ಕಲ್ಯಾಣಿ ದಕ್ಷಿಣ ಭಾಗದಲ್ಲಿ ಬಾವಿಯ ಒಳಗೆ ಒಂದು ಮಂಟಪವನ್ನು ಹೋಲುವ ಗುಡಿಯನ್ನು ಕಟ್ಟಿಸಿ ಗುಂಡಲಮ್ಮ ಪ್ರತಿಮೆಯನ್ನು ಪ್ರತಿಷ್ಠೆ ಮಾಡಿಸಿದರೂ ಎನ್ನಲಾಗಿದೆ. ಈ ಕಲ್ಯಾಣಿ ಬಾವಿಯ ಉತ್ತರ ಭಾಗದಲ್ಲಿ ಹಲವಾರು ಸಮಾಧಿಗಳಿದ್ದು, ಪ್ರತಿ ಸಮಾಧಿಗೆ ಸುತ್ತಲೂ ಮಂಟಪ ರೀತಿಯಲ್ಲಿ ಆಕೃತಿಯನ್ನು ನಿರ್ಮಿಸಲಾಗಿದೆಯಂತೆ. ಇವೆಲ್ಲವೂ ರಾಜ ಮನೆತನಕ್ಕೆ ಸೇರಿದವರ ಸಮಾಧಿ ಎನ್ನಲಾಗಿದೆ.
ಇನ್ನು ಸ್ಮಾರಕಗಳು ಪಾವಗಡ ಗ್ರಾಮ ಸರ್ವೆ ನಂಬರ್ 353/2a1 ರಲ್ಲಿ ಒಂದು ಎಕರೆ ಪ್ರದೇಶದಲ್ಲಿ ಇದೆ. ಆದರೆ ಈ ಕೊನ್ನಾರಿಯ ಸುತ್ತಮುತ್ತ ಸಮಾಧಿಗಳಿದ್ದವು. ಈ ಸಮಾಧಿಗಳ ಸುತ್ತಲೂ ಮಂಟಪಗಳನ್ನು ನಿರ್ಮಿಸಿದ್ದು, ಸಾರ್ವಜನಿಕ ಬಳಕೆ ನಿಷೇಧಿಸುವ ಮೂಲಕ ಗೋಡೆಯನ್ನು ನಿರ್ಮಿಸಿ, ಬೀಗ ಹಾಕಿ ಸರ್ಕಾರಿ ಸ್ವತ್ತನ್ನು ಕಬಳಿಸಿ ಜಾಗವನ್ನು ಒತ್ತುವರಿ ಮಾಡಲಾಗಿದೆ ಅನ್ನೋ ಆರೋಪ ಕೇಳಿಬರ್ತಿದೆ. ಇನ್ನು ಪಾವಗಡದಲ್ಲಿ ಸುಮಾರು 15 ಕ್ಕೂ ಹೆಚ್ಚು ಸರ್ಕಾರಿ ಜಾಗಗಳು ಒತ್ತುವರಿಯಾಗಿದ್ದು ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಬೇಕಾಗಿದೆ. ಇಲ್ಲವಾದಲ್ಲಿ ಐತಿಹಾಸಿಕ ಸ್ಥಳ ಪ್ರಭಾವಿ ಭೂಗಳ್ಳರ ಪಾಲಾಗಿ ನಾಶವಾಗುತ್ತದೆ. ಆರ್ಕಾಲಜಿ ಡಿಪಾರ್ಟ್‌ಮೆಂಟ್ ಮತ್ತು ತಾಲೂಕು ಆಡಳಿತಾಧಿಕಾರಿಗಳು ಕೂಡಲೇ ಸರ್ವೆ ಕೆಲಸಕ್ಕೆ ಮುಂದಾಗಿ ಭೂಗಳ್ಳತನಕ್ಕೆ ಕಡಿವಾಣ ಹಾಕಬೇಕಿದೆ.