ಮತ್ತೆ ಸದ್ದು ಮಾಡಿದ ಮುತ್ತಪ್ಪ ರೈ ಪುತ್ರ Ricky Rai ಲ್ಯಾಂಬೋರ್ಗಿನಿ – ಏರ್ಪೋರ್ಟ್ ರಸ್ತೆಯಲ್ಲಿ ಪುಂಡಾಟದ ವಿಡಿಯೋ ವೈರಲ್.

ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ( Ricky Rai ) ಒಡೆತನದ ಲ್ಯಾಂಬೋರ್ಗಿನಿ ಕಾರು ಮತ್ತೊಮ್ಮೆ ಸುದ್ದಿಯಲ್ಲಿದೆ. ಬೆಂಗಳೂರಿನ ಏರ್ಪೋರ್ಟ್ ರಸ್ತೆಯಲ್ಲಿ ಡ್ರಿಫ್ಟಿಂಗ್ ಮಾಡುವ ಮೂಲಕ, ಸೈಲೆನ್ಸರ್ನಿಂದ ಬೆಂಕಿ ಉಗುಳುತ್ತಾ ಕರ್ಕಶ ಶಬ್ದ ಮಾಡಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. KA 05 NR 0009 ನೋಂದಣಿ ಸಂಖ್ಯೆಯ ಲ್ಯಾಂಬೋರ್ಗಿನಿ ಕಾರಿನ ವಿಡಿಯೋ ಇದೀಗ ಪೊಲೀಸರ ಗಮನ ಸೆಳೆದಿದ್ದು, ಘಟನೆ ಯಾವ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ ಎಂಬುದರ ಕುರಿತು ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

ಕಾರು ಯಾವಾಗ ಚಲಾಯಿಸಲಾಗಿದೆ? ಆ ವೇಳೆ ಕಾರಿನಲ್ಲಿದ್ದವರು ಯಾರು?
ವೈರಲ್ ವಿಡಿಯೋ ಆಧರಿಸಿ ಮೊದಲು ಪ್ರಕರಣ ದಾಖಲಿಸಿ ಬಳಿಕ ತನಿಖೆ ಮುಂದುವರಿಸಲು ಪೊಲೀಸರು ನಿರ್ಧರಿಸಿದ್ದಾರೆ.
ಕಾರು ಯಾವಾಗ ಚಲಾಯಿಸಲಾಗಿದೆ, ಆ ವೇಳೆ ವಾಹನದಲ್ಲಿದ್ದವರು ಯಾರು ಹಾಗೂ ಕಾರು ಚಲಾಯಿಸಿದ್ದು ಯಾರು ಎಂಬ ಮಾಹಿತಿ ಸಂಗ್ರಹಿಸಲಾಗುತ್ತಿದೆ.
ಇದನ್ನು ಓದಿ : ಹಾಸ್ಟೆಲ್ನಲ್ಲಿ ಮಗುವಿಗೆ ಜನ್ಮ ನೀಡಿದ 9ನೇ ತರಗತಿ ವಿದ್ಯಾರ್ಥಿನಿ!

ಈ ಕಾರು ಇದೇ ಮೊದಲ ಬಾರಿಗೆ ವಿವಾದಕ್ಕೆ ಸಿಲುಕಿಲ್ಲ
ಈ ಕಾರು ಇದೇ ಮೊದಲ ಬಾರಿಗೆ ವಿವಾದಕ್ಕೆ ಸಿಲುಕಿಲ್ಲ. ಕಳೆದ ಮಾರ್ಚ್ 21ರಂದು ಎಂಜಿ ರಸ್ತೆ ಹಾಗೂ ಕಬ್ಬನ್ ರಸ್ತೆಯಲ್ಲಿ ಇದೇ ಕಾರಿನಿಂದ ಡ್ರಿಫ್ಟಿಂಗ್ ನಡೆಸಲಾಗಿತ್ತು.
ಆಗ ಸಿಸಿಟಿವಿ ಪರಿಶೀಲನೆಯಲ್ಲಿ ರಿಕ್ಕಿ ರೈ ಅವರೇ ಕಾರು ಚಲಾಯಿಸಿದ್ದು ಪತ್ತೆಯಾಗಿತ್ತು. ಆರಂಭದಲ್ಲಿ ತಾವು ಕಾರು ಚಾಲನೆ ಮಾಡಿಲ್ಲ ಎಂದು Ricky Rai ಹೇಳಿಕೊಂಡಿದ್ದರೂ, ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ ಅವರೇ ವಾಹನ ಚಲಾಯಿಸಿದ್ದು ದೃಢಪಟ್ಟಿತ್ತು. ಈ
ಸಂಬಂಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿತ್ತು. ಪ್ರಕರಣದ ವಿಚಾರಣೆ ವೇಳೆ ರಿಕ್ಕಿ ರೈ ಪರ ವಕೀಲರು, ರಸ್ತೆ ಸರಿಯಾಗಿರಲಿಲ್ಲ.
ಅದರಿಂದ ಕಾರು ಸ್ಕಿಡ್ ಆಗಿದೆ ಎಂದು ವಾದ ಮಂಡಿಸಿದ್ದರು. ಬಳಿಕ ರಿಕ್ಕಿ ರೈ ನ್ಯಾಯಾಲಯದಲ್ಲಿ ದಂಡ ಪಾವತಿಸಿದ್ದರು.

ಮತ್ತೆ ಪ್ರಕರಣ ದಾಖಲಾಗುವ ಸಾಧ್ಯತೆ
ಇದೀಗ ಅದೇ ಲ್ಯಾಂಬೋರ್ಗಿನಿ ಕಾರು ಮತ್ತೆ ಏರ್ಪೋರ್ಟ್ ರಸ್ತೆಯಲ್ಲಿ ಪುಂಡಾಟ ನಡೆಸಿರುವ ಆರೋಪ ಕೇಳಿಬಂದಿದ್ದು, ವೈರಲ್ ವಿಡಿಯೋವನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.
ತನಿಖೆಯಲ್ಲಿ ನಿಯಮ ಉಲ್ಲಂಘನೆ ದೃಢಪಟ್ಟರೆ ಅತಿವೇಗದ ಚಾಲನೆ, ಮಾಡಿಫೈಡ್ ಸೈಲೆನ್ಸರ್ ಬಳಕೆ, ಸೈಲೆನ್ಸರ್ನಿಂದ ಬೆಂಕಿ ಉಗುಳಿಸುವುದು ಹಾಗೂ ಸಾರ್ವಜನಿಕರಿಗೆ ತೊಂದರೆ ಉಂಟುಮಾಡುವ ರೀತಿಯ ಕರ್ಕಶ ಶಬ್ದ ಸೃಷ್ಟಿಸಿದ ಆರೋಪಗಳಡಿ ಪ್ರಕರಣ ದಾಖಲಾಗುವ ಸಾಧ್ಯತೆ ಇದೆ.

ಇದನ್ನು ನೋಡಿ : ಬೆಂಗಳೂರಿನಲ್ಲಿ ಇಂದು ಕೂಡ ಮಳೆ ಅಬ್ಬರ – ಸಂಜೆ ಸುರಿದ ಮಳೆಗೆ ಸವಾರರ ಪರದಾಟ




