EMI ಪಾವತಿಸುವವರಿಗೆ ಗುಡ್ ನ್ಯೂಸ್! ಸಾಲ ವಸೂಲಿಗೆ RBI ಹೊಸ ರೂಲ್ಸ್

EMI ಪಾವತಿ ವಿಳಂಬವಾದ ಸಂದರ್ಭದಲ್ಲಿ ಬ್ಯಾಂಕ್ಗಳು ಮತ್ತು ರಿಕವರಿ ಏಜೆಂಟ್ಗಳಿಂದ ಗ್ರಾಹಕರು ಎದುರಿಸುವ ಪದೇ ಪದೇ ಕರೆ, ಬೆದರಿಕೆ ಹಾಗೂ ಅವಮಾನಕಾರಿ ವರ್ತನೆಗೆ ಕಡಿವಾಣ ಹಾಕಲು ಭಾರತೀಯ ರಿಸರ್ವ್ ಬ್ಯಾಂಕ್ ಹೊಸ ನಿಯಮಗಳನ್ನು ರೂಪಿಸಿದೆ. ಈ ನಿಯಮಗಳು 2027ರ ಜನವರಿ 1ರಿಂದ ಜಾರಿಗೆ ಬರಲಿವೆ.
EMI ಕಟ್ಟಿಲ್ಲ ಅಂತ ರಾತ್ರಿ ಕರೆ ಮಾಡೋ ಹಾಗಿಲ್ಲ
ಹೊಸ ಮಾರ್ಗಸೂಚಿಗಳ ಪ್ರಕಾರ, ಬ್ಯಾಂಕ್ಗಳು ಮತ್ತು ನಿಯಂತ್ರಿತ ಸಾಲದಾತರು ಸಾಲ ವಸೂಲಾತಿ ವೇಳೆ ಗ್ರಾಹಕರ ಹಕ್ಕುಗಳನ್ನು ಗೌರವಿಸಬೇಕು. ಸಾಲಗಾರರನ್ನು ಸಾಮಾನ್ಯವಾಗಿ ಬೆಳಗ್ಗೆ 8 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ಮಾತ್ರ ಸಂಪರ್ಕಿಸಬೇಕು. ಈ ಸಮಯದ ಹೊರಗೆ ಕರೆ ಅಥವಾ ಭೇಟಿ ಅಗತ್ಯವಿದ್ದರೆ ಸಾಲಗಾರರ ಒಪ್ಪಿಗೆ ಪಡೆಯಬೇಕು.
ಬೆದರಿಕೆ, ಅವಮಾನಕ್ಕೆ ಅವಕಾಶವಿಲ್ಲ
ಸಾಲ ವಸೂಲಾತಿ ವೇಳೆ ಬೆದರಿಕೆ ಹಾಕುವುದು, ನಿಂದನೀಯ ಭಾಷೆ ಬಳಸುವುದು, ಅವಮಾನಿಸುವುದು ಅಥವಾ ಭಯ ಹುಟ್ಟಿಸುವ ರೀತಿಯಲ್ಲಿ ವರ್ತಿಸುವುದನ್ನು ಆರ್ಬಿಐ ನಿಷೇಧಿಸಿದೆ. ಅನಾಮಧೇಯ ಕರೆಗಳ ಮೂಲಕ ಒತ್ತಡ ಹೇರುವುದು, ಪದೇ ಪದೇ ಕರೆ ಮಾಡುವುದು ಅಥವಾ ಆಸ್ತಿ ಜಪ್ತಿ ಮಾಡುವುದಾಗಿ ಬೆದರಿಸುವಂತಿಲ್ಲ.
ಸಾಲಗಾರರ ಫೋಟೋ, ವಿಡಿಯೋ ಅಥವಾ ವೈಯಕ್ತಿಕ ಮಾಹಿತಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿ ಅವಮಾನಿಸುವುದಕ್ಕೂ ನಿರ್ಬಂಧ ವಿಧಿಸಲಾಗಿದೆ.
ದುಃಖದ ಸಂದರ್ಭ, ವೈದ್ಯಕೀಯ ತುರ್ತು ಪರಿಸ್ಥಿತಿ ಅಥವಾ ಮದುವೆಯಂತಹ ಸೂಕ್ಷ್ಮ ಸಂದರ್ಭಗಳಲ್ಲಿ ರಿಕವರಿ ಏಜೆಂಟ್ಗಳು ಸಂಪರ್ಕಿಸುವುದನ್ನು ತಪ್ಪಿಸಬೇಕು.

ಮನೆ ಭೇಟಿ ಮುನ್ನ ಮಾಹಿತಿ ಕಡ್ಡಾಯ
ರಿಕವರಿ ಏಜೆಂಟ್ಗಳು ಸಾಲಗಾರರ ಮನೆಗೆ ಏಕಾಏಕಿ ಭೇಟಿ ನೀಡುವಂತಿಲ್ಲ. ಮೊದಲ ವೈಯಕ್ತಿಕ ಭೇಟಿಗೂ ಕನಿಷ್ಠ ಒಂದು ದಿನ ಮುಂಚಿತವಾಗಿ ಮಾಹಿತಿ ನೀಡಬೇಕು.
ಭೇಟಿಗೆ ಬರುವ ಏಜೆಂಟ್ ತಮ್ಮ ಗುರುತಿನ ಚೀಟಿ, ಅಧಿಕಾರ ಪತ್ರ ಹಾಗೂ ಸಂಬಂಧಿತ ನೋಟಿಸ್ ಹೊಂದಿರಬೇಕು. ಬ್ಯಾಂಕ್ ಮತ್ತು ರಿಕವರಿ ಏಜೆನ್ಸಿಯ ದೂರು ಪರಿಹಾರ ಅಧಿಕಾರಿಯ ಸಂಪರ್ಕ ವಿವರಗಳನ್ನೂ ನೀಡಬೇಕು.
ರಿಕವರಿ ಕರೆಗಳಿಗೂ ದಾಖಲೆ
ಇನ್ನು ಮುಂದೆ ಸಾಲ ವಸೂಲಾತಿಗೆ ಸಂಬಂಧಿಸಿದ ಕರೆಗಳ ವಿವರಗಳನ್ನು ಬ್ಯಾಂಕ್ಗಳು ದಾಖಲಿಸಬೇಕು. ಕರೆ ಮಾಡಿದ ಸಮಯ, ಸಂಖ್ಯೆಯ ವಿವರ ಮತ್ತು ಸಂಪರ್ಕದ ದಾಖಲೆಗಳನ್ನು ಕನಿಷ್ಠ ಆರು ತಿಂಗಳವರೆಗೆ ಸಂರಕ್ಷಿಸಬೇಕು.
ರಿಕವರಿ ಏಜೆನ್ಸಿಗಳಿಗೆ ಕೆಲಸ ನೀಡಿದರೂ ಅದರ ಜವಾಬ್ದಾರಿಯಿಂದ ಬ್ಯಾಂಕ್ಗಳು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಏಜೆಂಟ್ಗಳ ವರ್ತನೆಯನ್ನು ಮೇಲ್ವಿಚಾರಣೆ ಮಾಡುವುದು ಹಾಗೂ ಅವರಿಗೆ ಸೂಕ್ತ ತರಬೇತಿ ನೀಡುವುದು ಬ್ಯಾಂಕ್ಗಳ ಕರ್ತವ್ಯ ಎಂದು ಆರ್ಬಿಐ ಸ್ಪಷ್ಟಪಡಿಸಿದೆ.
ಇದನ್ನು ಓದಿ : ‘ಮನಿ ಮ್ಯೂಲ್’ ಆಮಿಷಕ್ಕೆ ಬಲಿಯಾಗಬೇಡಿ – ಬ್ಯಾಂಕ್ ಗ್ರಾಹಕರಿಗೆ RBI ಎಚ್ಚರಿಕೆ!

EMI ಬಾಕಿಯಾದರೆ ಫೋನ್ ಲಾಕ್ ಮಾಡಬಹುದೇ?
EMI ಪಾವತಿಸದೇ ಉಳಿದ ಸಂದರ್ಭಗಳಲ್ಲಿ ಹಣಕಾಸು ನೆರವಿನಿಂದ ಖರೀದಿಸಿದ ಮೊಬೈಲ್, ಟ್ಯಾಬ್ಲೆಟ್ ಅಥವಾ ಲ್ಯಾಪ್ಟಾಪ್ಗಳನ್ನು ರಿಮೋಟ್ ಮೂಲಕ ನಿರ್ಬಂಧಿಸುವ ವ್ಯವಸ್ಥೆಗೂ RBI ನಿಯಮಗಳನ್ನು ರೂಪಿಸಿದೆ.
ಆದರೆ EMI ತಪ್ಪಿದ ತಕ್ಷಣವೇ ಸಾಧನವನ್ನು ಲಾಕ್ ಮಾಡುವಂತಿಲ್ಲ. ಕನಿಷ್ಠ 30 ದಿನಗಳ ಕಾಲ ಸಾಲ ಬಾಕಿ ಉಳಿದ ನಂತರ ಮಾತ್ರ ನಿರ್ಬಂಧ ಆರಂಭಿಸಬಹುದು. 60 ದಿನಗಳವರೆಗೆ ಬಾಕಿ ಉಳಿದರೆ ಹೆಚ್ಚಿನ ನಿರ್ಬಂಧ ವಿಧಿಸಲು ಅವಕಾಶವಿದೆ.
ಆದರೂ ತುರ್ತು ಕರೆಗಳು, SMS ಹಾಗೂ ಉದ್ಯೋಗಕ್ಕೆ ಅಗತ್ಯವಾದ ಕೆಲವು ಮೂಲಭೂತ ಸೇವೆಗಳನ್ನು ಸಂಪೂರ್ಣವಾಗಿ ಬಂದ್ ಮಾಡುವಂತಿಲ್ಲ.
ಬಳಕೆದಾರರ ಸಂಪರ್ಕಗಳು, ಫೋಟೋಗಳು, ವಿಡಿಯೋಗಳು, ಕರೆ ದಾಖಲೆಗಳು ಅಥವಾ ಲೊಕೇಶನ್ ಹಿಸ್ಟರಿಯಂತಹ ವೈಯಕ್ತಿಕ ಮಾಹಿತಿಯನ್ನು ಪಡೆಯಲು ಈ ವ್ಯವಸ್ಥೆಯನ್ನು ಬಳಸುವಂತಿಲ್ಲ.

EMI ಪಾವತಿಸಿದ ಬಳಿಕ ಒಂದು ಗಂಟೆಯೊಳಗೆ ಅನ್ಲಾಕ್
ಬಾಕಿ EMI ಪಾವತಿಸಿ ಸಾಲ ಖಾತೆಯನ್ನು ಸರಿಪಡಿಸಿದ ಬಳಿಕ ಸಾಧನವನ್ನು ಮತ್ತೆ ಸಾಮಾನ್ಯ ಸ್ಥಿತಿಗೆ ತರಲು ಸಮಯ ಮಿತಿ ನಿಗದಿಪಡಿಸಲಾಗಿದೆ.
ಪಾವತಿ ಅಥವಾ ಇತ್ಯರ್ಥವಾದ ಒಂದು ಗಂಟೆಯೊಳಗೆ ಸಾಧನವನ್ನು ಅನ್ಲಾಕ್ ಮಾಡಬೇಕು.
ವಿಳಂಬವಾದರೆ ಪ್ರತಿ ಗಂಟೆಗೆ ₹250 ಪರಿಹಾರ ನೀಡುವ ನಿಯಮವೂ ಇದೆ. ಆದರೆ, ಈ ಪರಿಹಾರಕ್ಕೆ ಬಾಕಿ ಸಾಲದ ಮೊತ್ತಕ್ಕೆ ಸಂಬಂಧಿಸಿದ ಮಿತಿಗಳು ಅನ್ವಯವಾಗುತ್ತವೆ.
ಗ್ರಾಹಕರಿಗೆ ಗೌರವಯುತ ಸಾಲ ವಸೂಲಾತಿ ಅನುಭವ ಒದಗಿಸುವುದು ಮತ್ತು ವಸೂಲಾತಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಹೆಚ್ಚಿಸುವುದು ಈ RBI ನಿಯಮಗಳ ಪ್ರಮುಖ ಉದ್ದೇಶವಾಗಿದೆ.
ಇದನ್ನು ನೋಡಿ : ನನ್ನ ರಕ್ತದ ಕಣ ಕಣದಲ್ಲೂ BJP ಇದೆ – ಬಿಜೆಪಿಗೆ ಮರಳುವ ಬಗ್ಗೆ ESHWARAPPA SHOCKING ಹೇಳಿಕೆ


