5 ದಿನಗಳ ಕಾಲ ಕೊಡಗಿನಲ್ಲಿ ನಲಪಾಡ್ ಮದುವೆ: ಯುವ ಕಾಂಗ್ರೆಸ್ ನಾಯಕನ ಕೈಹಿಡಿಯುತ್ತಿರೋ ಹುಡುಗಿ ಯಾರು ಗೊತ್ತಾ?

ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ನ ಮಾಜಿ ಅಧ್ಯಕ್ಷ ಹಾಗೂ ಶಾಂತಿನಗರ ಕ್ಷೇತ್ರದ ಶಾಸಕ ಎನ್.ಎ. ಹ್ಯಾರಿಸ್ ಅವರ ಪುತ್ರ ಮೊಹಮ್ಮದ್ ನಲಪಾಡ್ ಅವರ ಎರಡನೇ ವಿವಾಹಕ್ಕೆ ಕೊಡಗಿನಲ್ಲಿ ಭರದ ಸಿದ್ಧತೆ ನಡೆದಿದೆ.
5 ದಿನಗಳ ಕಾಲ ಮದುವೆ
ಮಡಿಕೇರಿ ಹೊರವಲಯದ ಮೇಕೇರಿ ಗ್ರಾಮದ ಕೂರ್ಗ್ ವೈಲ್ಡರ್ನೆಟ್ ರೆಸಾರ್ಟ್ನಲ್ಲಿ ಆಗಸ್ಟ್ 15ರಿಂದ 20ರವರೆಗೆ ಮದುವೆ ಸಂಭ್ರಮ ನಡೆಯಲಿದೆ. ಆಗಸ್ಟ್ 16ರಂದು ಮಧ್ಯಾಹ್ನ 12 ಗಂಟೆಗೆ ಮೊಹಮ್ಮದ್ ನಲಪಾಡ್ ಹಾಗೂ ಮಲಿಹಾ ಫಾತಿಮಾ ಅವರ ನಿಕಾಹ್ ನೆರವೇರಲಿದೆ.

ನಲಪಾಡ್ ಮದುವೆ ಆಗ್ತಿರೋ ಹುಡುಗಿ ಯಾರು ಗೊತ್ತಾ?
ಮಲಿಹಾ ಫಾತಿಮಾ ಅವರು ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಹಾಗೂ ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಸ್.ಐ. ಮುನೀರ್ ಅಹಮ್ಮದ್ ಅವರ ಪುತ್ರಿ. ಎರಡೂ ಕುಟುಂಬಗಳ ಸಮ್ಮತಿಯೊಂದಿಗೆ ನಲಪಾಡ್ ಮತ್ತು ಮಲಿಹಾ ಫಾತಿಮಾ ಅವರ ವಿವಾಹ ನಿಶ್ಚಯವಾಗಿದೆ.
ಎರಡನೇ ಮದುವೆ ಸಂಭ್ರಮದಲ್ಲಿ ನಲಪಾಡ್!
2017ರಲ್ಲಿ ಸಮ್ರೀನ್ ಸೇಲಂ ಅವರನ್ನು ವಿವಾಹವಾಗಿದ್ದ ಮೊಹಮ್ಮದ್ ನಲಪಾಡ್ ಇದೀಗ ಎರಡನೇ ವಿವಾಹವಾಗುತ್ತಿದ್ದಾರೆ. ಮಲಿಹಾ ಫಾತಿಮಾ ಕಾನೂನು ವ್ಯಾಸಂಗ ಮಾಡಿದ್ದು, ಅಮೆರಿಕ ಮೂಲದ ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಉದ್ಯೋಗದಲ್ಲಿದ್ದಾರೆ.
ಮಲಿಹಾ ಅವರ ತಂದೆ ಎಸ್.ಐ. ಮುನೀರ್ ಅಹಮ್ಮದ್ ಅವರು ಕಾಂಗ್ರೆಸ್ನ ಹಿರಿಯ ಮುಖಂಡ ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯ ಬಿ.ಎ. ಹಸನಬ್ಬ ಅವರ ಸಹೋದರಿ ಪುತ್ರರಾಗಿದ್ದಾರೆ.
ಮುನೀರ್ ಅಹಮ್ಮದ್ ಹಾಗೂ ಶಾಸಕ ಎನ್.ಎ. ಹ್ಯಾರಿಸ್ ಕಳೆದ ಎರಡು ದಶಕಗಳಿಂದ ಸ್ನೇಹಿತರಾಗಿದ್ದಾರೆ.
ಇದನ್ನು ಓದಿ : ಬಿಟ್ ಕಾಯಿನ್ ಕೇಸ್ – ನಲಪಾಡ್ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆ

ಗಣ್ಯರಿಗೆ ಆಹ್ವಾನ
ಆಗಸ್ಟ್ 16ರಂದು ನಡೆಯಲಿರುವ ನಿಕಾಹ್ ಕಾರ್ಯಕ್ರಮದಲ್ಲಿ ಎರಡೂ ಕುಟುಂಬಗಳ ಸದಸ್ಯರು ಹಾಗೂ ಆಯ್ದ ಆಹ್ವಾನಿತ ಗಣ್ಯರು ಭಾಗವಹಿಸಲಿದ್ದಾರೆ.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕೇರಳ ಮುಖ್ಯಮಂತ್ರಿ ಸತೀಶನ್, ನಟರಾದ ಸುದೀಪ್ ಹಾಗೂ ಯಶ್ ಸೇರಿದಂತೆ ಹಲವು ಗಣ್ಯರು ಭಾಗವಹಿಸುವ ನಿರೀಕ್ಷೆಯಿದೆ.
ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ನರೇಂದ್ರ ಸ್ವಾಮಿ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎ.ಎಸ್. ಪೊನ್ನಣ್ಣ, ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಹಾಗೂ ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀತೀರ ಧರ್ಮಜ ಉತ್ತಪ್ಪ ಅವರಿಗೂ ಆಹ್ವಾನ ನೀಡಲಾಗಿದೆ. ಆಗಸ್ಟ್ 17ರಂದು ವಿವಾಹ ಆರತಕ್ಷತೆ ಕಾರ್ಯಕ್ರಮ ನಡೆಯಲಿದ್ದು, ಇದಕ್ಕೂ ಕುಟುಂಬಸ್ಥರು ಹಾಗೂ ಆಹ್ವಾನಿತ ಗಣ್ಯರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.

5 ದಿನಗಳ ಕಾಲ ಮದುವೆ – 104 ಕೊಠಡಿಗಳು ಬುಕ್
ಐದು ದಿನಗಳ ಮದುವೆ ಸಂಭ್ರಮಕ್ಕಾಗಿ ನಲಪಾಡ್ ಮತ್ತು ಮಲಿಹಾ ಫಾತಿಮಾ ಅವರ ಕುಟುಂಬಸ್ಥರು ರೆಸಾರ್ಟ್ನಲ್ಲೇ ತಂಗಲಿದ್ದಾರೆ. ಈ ಹಿನ್ನೆಲೆಯಲ್ಲಿ ರೆಸಾರ್ಟ್ನ ಒಟ್ಟು 104 ಕೊಠಡಿಗಳನ್ನು ಬುಕ್ ಮಾಡಲಾಗಿದೆ.
ಮದುವೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಆಗಸ್ಟ್ 15ರಿಂದ 20ರವರೆಗೆ ಸಾರ್ವಜನಿಕರಿಗೆ ರೆಸಾರ್ಟ್ ಪ್ರವೇಶ ನಿರ್ಬಂಧಿಸಲಾಗಿದ್ದು, ಕಾರ್ಯಕ್ರಮದ ಸಿದ್ಧತೆಗಳು ಭರದಿಂದ ಸಾಗಿವೆ.
ಇದನ್ನು ನೋಡಿ : ನೆಹರು ಕ್ರೀಡಾಂಗಣದಲ್ಲಿ ಸ್ವಾತಂತ್ರ್ಯೋತ್ಸವ ಸಚಿವ ESHWAR KHANDREಯಿಂದ ಧ್ವಜಾರೋಹಣ





