ತಿರುಮಲ ಶ್ರೀವಾರಿ ಭಕ್ತರೇ ಎಚ್ಚರ; 259 ನಕಲಿ ವೆಬ್ಸೈಟ್ಗಳು ಬಂದ್, ಸೈಬರ್ ಕ್ರೈಮ್ ತನಿಖೆ ಚುರುಕು!

ಶ್ರೀವಾರಿ ದರ್ಶನ, ಆರ್ಜಿತ ಸೇವೆಗಳು ಹಾಗೂ ವಸತಿ ಬುಕಿಂಗ್ ಹೆಸರಿನಲ್ಲಿ ಸೈಬರ್ ವಂಚನೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಭಕ್ತರು ಎಚ್ಚರಿಕೆ ವಹಿಸುವಂತೆ ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಮನವಿ ಮಾಡಿದೆ. ನಕಲಿ ವೆಬ್ಸೈಟ್ಗಳು, ವಾಟ್ಸಾಪ್ ಗ್ರೂಪ್ಗಳು ಹಾಗೂ ಸಾಮಾಜಿಕ ಮಾಧ್ಯಮಗಳ ಮೂಲಕ ಭಕ್ತರನ್ನು ಸಂಪರ್ಕಿಸಿ ಹಣ ವಸೂಲಿ ಮಾಡುತ್ತಿರುವ ಕುರಿತು ಹಲವು ದೂರುಗಳು ಬಂದ ಹಿನ್ನೆಲೆಯಲ್ಲಿ ಟಿಟಿಡಿ ಈ ಎಚ್ಚರಿಕೆ ನೀಡಿದೆ.
ಟಿಟಿಡಿ ಹೆಸರಿನಲ್ಲಿ ನಕಲಿ ಬುಕಿಂಗ್ ವಂಚನೆ
ವಂಚಕರು ಟಿಟಿಡಿಯ ಅಧಿಕೃತ ಹೆಸರು, ಲೋಗೋ, ಚಿತ್ರಗಳು ಹಾಗೂ ಟ್ರೇಡ್ಮಾರ್ಕ್ಗಳನ್ನು ಅಕ್ರಮವಾಗಿ ಬಳಸಿಕೊಂಡು ನಕಲಿ ಡಿಜಿಟಲ್ ಪ್ಲಾಟ್ಫಾರ್ಮ್ಗಳನ್ನು ನಡೆಸುತ್ತಿದ್ದಾರೆ. ಶ್ರೀವಾರಿ ಶೀಘ್ರ ದರ್ಶನ, ವಿವಿಧ ಸೇವೆಗಳು ಹಾಗೂ ವಸತಿ ಕೊಠಡಿಗಳನ್ನು ಕಾಯ್ದಿರಿಸಿಕೊಡುವುದಾಗಿ ನಂಬಿಸಿ ಭಕ್ತರಿಂದ ದೊಡ್ಡ ಮೊತ್ತದ ಹಣವನ್ನು ವಸೂಲಿ ಮಾಡಲಾಗುತ್ತಿದೆ.
ವಿಶೇಷವಾಗಿ ವಾಟ್ಸಾಪ್ ಮತ್ತು ಸೋಶಿಯಲ್ ಮಿಡಿಯಾಳಲ್ಲಿ ಬರುವ ಅಪರಿಚಿತ ಬುಕಿಂಗ್ ಆಫರ್ಗಳು ಹಾಗೂ ಲಿಂಕ್ಗಳನ್ನು ನಂಬಿ ಹಣ ಪಾವತಿಸಬಾರದು ಎಂದು ಟಿಟಿಡಿ ಸ್ಪಷ್ಟಪಡಿಸಿದೆ.

259 ನಕಲಿ ವೆಬ್ಸೈಟ್ಗಳು ಬಂದ್
ನಕಲಿ ಡಿಜಿಟಲ್ ಪ್ಲಾಟ್ಫಾರ್ಮ್ಗಳ ಮೇಲೆ ಟಿಟಿಡಿಯ ಐಟಿ ವಿಭಾಗ, ವಿಜಿಲೆನ್ಸ್ ಹಾಗೂ ಸೈಬರ್ ಕ್ರೈಂ ಪೊಲೀಸ್ ಇಲಾಖೆ ಜಂಟಿಯಾಗಿ ನಿಗಾ ವಹಿಸಿವೆ. ಸೈಬರ್ ಅಪರಾಧಿಗಳನ್ನು ಗುರುತಿಸಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ.
ಕಳೆದ ಎರಡು ವರ್ಷಗಳಲ್ಲಿ ಭಕ್ತರನ್ನು ವಂಚಿಸುತ್ತಿದ್ದ 259 ನಕಲಿ ವೆಬ್ಸೈಟ್ಗಳನ್ನು ಗುರುತಿಸಿ ಸಂಪೂರ್ಣವಾಗಿ ತೆಗೆದುಹಾಕಲಾಗಿದೆ.
ಈ ಅಕ್ರಮಗಳಲ್ಲಿ ಭಾಗಿಯಾಗಿದ್ದ ಹಲವು ವ್ಯಕ್ತಿಗಳ ವಿರುದ್ಧ ಪೊಲೀಸ್ ಪ್ರಕರಣಗಳನ್ನೂ ದಾಖಲಿಸಲಾಗಿದೆ ಎಂದು ಟಿಟಿಡಿ ತಿಳಿಸಿದೆ.
ಇದನ್ನು ಓದಿ : Tirupati ಲಡ್ಡುಗೆ ನಕಲಿ ತುಪ್ಪ ಬಳಕೆ – ಕೋರ್ಟ್ಗೆ ಚಾರ್ಜ್ಶೀಟ್ ಸಲ್ಲಿಸಿದ CBI

ಅಧಿಕೃತ ಚಾನೆಲ್ಗಳಲ್ಲೇ ಬುಕಿಂಗ್ ಮಾಡಿ
ಶ್ರೀವಾರಿ ದರ್ಶನ, ವಸತಿ ಹಾಗೂ ವಿವಿಧ ಸೇವೆಗಳ ಬುಕಿಂಗ್ನ್ನು ಟಿಟಿಡಿಯ ಅಧಿಕೃತ ವೆಬ್ಸೈಟ್ ಅಥವಾ ಅಧಿಕೃತ ಮೊಬೈಲ್ ಅಪ್ಲಿಕೇಶನ್ ಮೂಲಕ ಮಾತ್ರ ಮಾಡಬೇಕು ಎಂದು ಭಕ್ತರಿಗೆ ಸೂಚಿಸಲಾಗಿದೆ.
ಯಾವುದೇ ಪಾವತಿ ಮಾಡುವ ಮುನ್ನ ವೆಬ್ಸೈಟ್ ಅಥವಾ ಸಾಮಾಜಿಕ ಮಾಧ್ಯಮ ಖಾತೆಯ ಅಧಿಕೃತತೆಯನ್ನು ಪರಿಶೀಲಿಸುವಂತೆ ಟಿಟಿಡಿ ಮನವಿ ಮಾಡಿದೆ.
ಅಪರಿಚಿತ ವ್ಯಕ್ತಿಗಳು ಕಳುಹಿಸುವ ಲಿಂಕ್ಗಳ ಮೂಲಕ ಹಣ ಪಾವತಿಸುವುದು ಅಥವಾ ವೈಯಕ್ತಿಕ ಹಾಗೂ ಬ್ಯಾಂಕಿಂಗ್ ಮಾಹಿತಿಯನ್ನು ಹಂಚಿಕೊಳ್ಳುವುದನ್ನು ತಪ್ಪಿಸಬೇಕು.

ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮುನ್ನೆಚ್ಚರಿಕೆ
ಟಿಟಿಡಿಯ ಹೆಸರು, ಲೋಗೋ ಹಾಗೂ ಬೌದ್ಧಿಕ ಆಸ್ತಿಯನ್ನು ದುರುಪಯೋಗಪಡಿಸಿಕೊಳ್ಳುವ ವ್ಯಕ್ತಿಗಳು ಮತ್ತು ಸಂಸ್ಥೆಗಳ ವಿರುದ್ಧ ಹಕ್ಕುಸ್ವಾಮ್ಯ, ಟ್ರೇಡ್ಮಾರ್ಕ್ ಹಾಗೂ ಸೈಬರ್ ಕಾನೂನುಗಳ ಅಡಿಯಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಟಿಟಿಡಿ ಎಚ್ಚರಿಕೆ ನೀಡಿದೆ.
ಇದನ್ನು ನೋಡಿ : ಸಾರ್ವಜನಿಕ ಸ್ಥಳದಲ್ಲಿ ಕಾರ್ಯಕ್ರಮ ಅನುಮತಿಗೆ ಹೊಸ ಕಾಯ್ದೆ




