
GADAG : 18 ದಿನ, 1200 ಕಿ.ಮೀ ಪ್ರಯಾಣ: ಭೋಪಾಲ್ ರೈಲು ನಿಲ್ದಾಣದಲ್ಲಿ ಪರ್ವೇಜ್ ಪ್ರತ್ಯಕ್ಷ
GADAG : ಕಳೆದ ಕೆಲವು ದಿನಗಳಿಂದ ನಿಗೂಢವಾಗಿ ನಾಪತ್ತೆಯಾಗಿದ್ದ ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಯಮಿತ (KRIDL) ಗದಗ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ (AEE) ಪರ್ವೇಜ್ ಧಾರವಾಡ ಅವರನ್ನು ಗದಗ ಪೊಲೀಸರು ಭೋಪಾಲ್ನಲ್ಲಿ ಪತ್ತೆಹಚ್ಚಿದ್ದಾರೆ.
ಭೋಪಾಲ್ ರೈಲ್ವೆ ನಿಲ್ದಾಣದಲ್ಲಿ ಪತ್ತೆ!
ಮಧ್ಯಪ್ರದೇಶದ ಭೋಪಾಲ್ ರೈಲ್ವೆ ನಿಲ್ದಾಣದಲ್ಲಿ ಪರ್ವೇಜ್ ಅವರ ಚಲನವಲನ ಪತ್ತೆಯಾಗಿದ್ದು, ರೈಲ್ವೆ ನಿಲ್ದಾಣದ ಸಿಸಿಟಿವಿ ಕ್ಯಾಮೆರಾದಲ್ಲಿ ಅವರ ಓಡಾಟದ ದೃಶ್ಯಗಳು ಸೆರೆಯಾಗಿವೆ.
ಸದ್ಯ ಗದಗ ಪೊಲೀಸರ ವಿಶೇಷ ತಂಡ ಭೋಪಾಲ್ನಲ್ಲಿ ಬೀಡುಬಿಟ್ಟಿದ್ದು, ಪರ್ವೇಜ್ ಅವರನ್ನು ಸುರಕ್ಷಿತವಾಗಿ ಗದಗಕ್ಕೆ ಕರೆತರಲು ಅಗತ್ಯ ಕ್ರಮ ಕೈಗೊಂಡಿದೆ.

ಮೊಬೈಲ್, ಆನ್ಲೈನ್ ಬ್ಯಾಂಕಿಂಗ್ ಬಂದ್
ಪರ್ವೇಜ್ ನಾಪತ್ತೆಯಾದ ಬಳಿಕ ತಮ್ಮ ಮೊಬೈಲ್ ಫೋನ್ ಹಾಗೂ ಆನ್ಲೈನ್ ಬ್ಯಾಂಕಿಂಗ್ ವ್ಯವಹಾರಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿದ್ದರು ಎನ್ನಲಾಗಿದೆ.
ಇದರಿಂದ ತನಿಖೆಗೆ ಯಾವುದೇ ಡಿಜಿಟಲ್ ಸುಳಿವುಗಳು ಲಭ್ಯವಾಗದೆ, ಪ್ರಕರಣ ಪೊಲೀಸರಿಗೆ ಸವಾಲಾಗಿ ಪರಿಣಮಿಸಿತ್ತು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ನೇತೃತ್ವದಲ್ಲಿ ಐದು ವಿಶೇಷ ಪೊಲೀಸ್ ತಂಡಗಳನ್ನು ರಚಿಸಲಾಗಿತ್ತು. ರೈಲ್ವೆ ನಿಲ್ದಾಣಗಳು ಸೇರಿದಂತೆ ವಿವಿಧ ಸಂಭಾವ್ಯ ಸ್ಥಳಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ಪೊಲೀಸರು, ಅಂತಿಮವಾಗಿ ಪರ್ವೇಜ್ ಅವರ ಸುಳಿವು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಈ ಸಂಬಂಧ ಗದಗ-ಬೆಟಗೇರಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು.
READ THIS : ಸರ್ಕಾರದ ಅನುದಾನ ಸಿಗದೆ KRIDL ಎಂಜಿನಿಯರ್ ಡೆತ್ನೋಟ್ ಬರೆದಿಟ್ಟು ಮಿಸ್ಸಿಂಗ್!

ಗುತ್ತಿಗೆದಾರರಿಂದ ಒತ್ತಡ ಆರೋಪ!
ಸರ್ಕಾರದಿಂದ ವಿವಿಧ ಕಾಮಗಾರಿಗಳಿಗೆ ಅನುದಾನ ಬಿಡುಗಡೆಯಾಗದ ಹಿನ್ನೆಲೆಯಲ್ಲಿ ಗುತ್ತಿಗೆದಾರರು ತಮಗೂ ಹಾಗೂ ತಮ್ಮ ಕುಟುಂಬಕ್ಕೂ ಹಣಕ್ಕಾಗಿ ನಿರಂತರವಾಗಿ ಕಿರುಕುಳ ಮತ್ತು ಒತ್ತಡ ನೀಡುತ್ತಿದ್ದಾರೆ ಎಂದು ಪರ್ವೇಜ್ ಅವರು ಡೆತ್ನೋಟ್ನಲ್ಲಿ ಉಲ್ಲೇಖಿಸಿದ್ದರು ಎನ್ನಲಾಗಿದೆ.
ಈ ತೀವ್ರ ಒತ್ತಡ ಹಾಗೂ ಮಾನಸಿಕ ಕಿರುಕುಳದಿಂದಾಗಿ ಅವರು ಮನೆ ತೊರೆದಿದ್ದರು ಎಂದು ತಿಳಿದುಬಂದಿದೆ.
ಆದರೆ ಪರ್ವೇಜ್ ಅವರು ಭೋಪಾಲ್ನಲ್ಲಿ ಪತ್ತೆಯಾಗಿರುವುದರಿಂದ ಪ್ರಕರಣಕ್ಕೆ ಇದೀಗ ಹೊಸ ತಿರುವು ದೊರೆತಿದೆ.
ಸಚಿವ ಈಶ್ವರ ಖಂಡ್ರೆ ಧೈರ್ಯ
ಪ್ರಕರಣದ ಗಂಭೀರತೆ ಅರಿತ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಖಂಡ್ರೆ ಅವರು ಪರ್ವೇಜ್ ಅವರ ತಂದೆ ಜಾಫರ್ ಸಾಬ್ ಅವರಿಗೆ ಕರೆ ಮಾಡಿ ಧೈರ್ಯ ತುಂಬಿದ್ದರು.
ಇಲಾಖೆಯಲ್ಲಿ ಅನುದಾನದ ಕೊರತೆಯಿಲ್ಲ, ಯಾವುದೇ ಆರ್ಥಿಕ ಸಮಸ್ಯೆಯಿದ್ದರೂ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದ್ದರು.

MUST WATCH : ಮಳೆ ಕೈಕೊಟ್ಟು ರೈತರು ಕಂಗಾಲು – ವರುಣದೇವನ ಮೊರೆ ಹೋದ ಅನ್ನದಾತರು




