
ಜೈಲಲ್ಲಿರುವ ಕನ್ನಾಳೆಗೆ ಮತ್ತೊಂದು ಕಂಟಕ – TUMAKURU ವಿವಿಯಿಂದ ರಾಜ್ಯಪಾಲರಿಗೆ ವರದಿ
KPSC ಪಶುವೈದ್ಯಾಧಿಕಾರಿಗಳ ನೇಮಕಾತಿ ಅಕ್ರಮ ಪ್ರಕರಣದಲ್ಲಿ, ಬಂಧನಕ್ಕೊಳಗಾಗಿರುವ ಬಸವರಾಜ್ ಕನ್ನಾಳೆಗೆ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದೆ. TUMAKURU ವಿಶ್ವವಿದ್ಯಾಲಯದ ರಾಜ್ಯಪಾಲರ ನಾಮನಿರ್ದೇಶಿತ ಸಿಂಡಿಕೇಟ್ ಸದಸ್ಯರಾಗಿದ್ದ ಕನ್ನಾಳೆಗೆ, ತುಮಕೂರು ವಿವಿಯಿಂದ ಎರಡು ಬಾರಿ ನೋಟಿಸ್ ನೀಡಿದ್ದು, ಇದೀಗ ನೋಟಿಸ್ಗೆ ಉತ್ತರ ನೀಡದ ಕನ್ನಾಳೆ ವಿರುದ್ದ ರಾಜ್ಯಪಾಲರಿಗೆ ಎರಡು ಪುಟದ ವರದಿ ಕೊಟ್ಟಿದೆ.
ಜೈಲಲ್ಲಿರೋ ಕನ್ನಾಳೆಗೆ ಮತ್ತೊಂದು ಕಂಟಕ!
ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಬಸವರಾಜ್ ಕನ್ನಾಳೆ, 2025ರಿಂದ ತುಮಕೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿದ್ರು. ಆದ್ರೆ KPSC ಪಶುವೈದ್ಯಾಧಿಕಾರಿ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಕನ್ನಾಳೆ ಬಂಧನಕ್ಕೊಳಗಾದ ಬಳಿಕ, ಅವರ ವಿರುದ್ಧದ ಆರೋಪಗಳ ಹಿನ್ನೆಲೆಯಲ್ಲಿ, ಸಿಂಡಿಕೇಟ್ ಸದಸ್ಯತ್ವದ ವಿಚಾರವೂ ಮುನ್ನೆಲೆಗೆ ಬಂದಿದೆ. ಪ್ರಕರಣದಲ್ಲಿ ಕನ್ನಾಳೆ ಪ್ರಮುಖ ಮಧ್ಯವರ್ತಿಯಾಗಿ ಆರೋಪ ಎದುರಿಸುತ್ತಿದ್ದು, ತನಿಖೆ ನಡೆಯುತ್ತಿದೆ.
READ THIS : ಬಸವರಾಜ್ ಕನ್ನಾಳೆ ಡೈರಿಯಲ್ಲಿ ಬಯಲಾಯ್ತು ಲಕ್ಷ ಲಕ್ಷ ಹಣದ ಲೆಕ್ಕ!

ನೋಟಿಸ್ಗೆ ಉತ್ತರ ನೀಡದ ಹಿನ್ನಲೆ ರಾಜ್ಯಪಾಲರಿಗೆ ವಿವಿಯಿಂದ ವರದಿ
ಇನ್ನು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರ ನಿರ್ದೇಶನದಂತೆ ಸೆಪ್ಟೆಂಬರ್ 10 ಮತ್ತು 21ರಂದು ಎರಡು ಬಾರಿ ಶೋಕಾಸ್ ನೋಟಿಸ್ ಜಾರಿಗೊಳಿಸಲಾಗಿದೆ. ಕನ್ನಾಳೆ ಜೈಲಿನಲ್ಲಿರುವ ಹಿನ್ನೆಲೆ, ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಅವರ ನಿವಾಸಕ್ಕೆ ತೆರಳಿ ಕುಟುಂಬಸ್ಥರ ಮೂಲಕ ನೋಟಿಸ್ ತಲುಪಿಸಲಾಗಿದ್ದು, ನೋಟಿಸ್ನಲ್ಲಿ KPSC ಪಶುವೈದ್ಯಾಧಿಕಾರಿ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಕನ್ನಾಳೆ ವಿರುದ್ಧ ಕೇಳಿಬಂದಿರುವ ಆರೋಪಗಳನ್ನ ಉಲ್ಲೇಖಿಸಲಾಗಿದೆ. ನೋಟಿಸ್ ತಲುಪಿದ ಏಳು ದಿನಗಳೊಳಗೆ ಉತ್ತರ ನೀಡುವಂತೆ ಸೂಚಿಸಲಾಗಿದ್ದು, ಒಂದು ವೇಳೆ ಉತ್ತರಿಸದೇ ಇದ್ದರೆ ವಜಾಗೊಳಿಸುವ ಎಚ್ಚರಿಕೆ ನೀಡಿದ್ದಾರೆ.

ಇದೇ ವೇಳೆ ಪ್ರಕರಣಕ್ಕೆ ಸಂಬಂಧಿಸಿದಂತೆ ತುಮಕೂರು ವಿಶ್ವವಿದ್ಯಾಲಯದ ಕುಲಪತಿ ಸಿಐಡಿ ಅಧಿಕಾರಿಗಳನ್ನ ಸಂಪರ್ಕಿಸಿ, ಬಸವರಾಜ್ ಕನ್ನಾಳೆ ಬಗ್ಗೆ ಮಾಹಿತಿಯನ್ನ ಪಡೆದುಕೊಂಡಿದ್ದಾರೆ. ಈ ವಿಚಾರವನ್ನೂ ಸಹ ರಾಜ್ಯಪಾಲರಿಗೆ ಸಲ್ಲಿಸಿದ ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ.

ರಾಜ್ಯಪಾಲರು ಯಾವ ನಿರ್ಧಾರ ಕೈಗೋಳ್ತಾರೆ ?
ಸೆಪ್ಟೆಂಬರ್ 21ರಂದು ಕೊನೆಯ ನೋಟಿಸ್ ತಲುಪಿದ್ದು, ಏಳು ದಿನಗಳ ಕಾಲಾವಕಾಶವೂ ಮುಗಿದಿದೆ. ಇದೀಗ ಈ ಎಲ್ಲಾ ವಿವರಗಳನ್ನು ವಿವಿ ಕುಲಪತಿಗಳು ರಾಜ್ಯಪಾಲರಿಗೆ ತಲುಪಿಸಿದ್ದಾರೆ. ಈಗ ಚೆಂಡು ರಾಜ್ಯಪಾಲರ ಅಂಗಳದಲ್ಲಿ ಇದ್ದು ವಜಾಗೊಳಿಸೋದು ಪಕ್ಕಾ ಎಂದು ಹೇಳಲಾಗ್ತಿದೆ. ಆದ್ರೆ ರಾಜ್ಯಪಾಲರು ಯಾವ ನಿರ್ಧಾರ ಕೈಗೋಳ್ತಾರೆ ಅನ್ನೋದನ್ನ ಕಾದು ನೋಡಬೇಕಿದೆ.
MUST WATCH : ಲಾರಿ, ಸ್ಕೂಟರ್ ನಡುವೆ ಡೆಡ್ಲಿ ಆಕ್ಸಿಡೆಂ ಸ್ಥಳದಲ್ಲೇ ಪಿಯು ವಿದ್ಯಾರ್ಥಿನಿ ದಾರುಣ ಸಾ*





