GT- RR ನಡುವೆ ಇಂದು `ಮಾಡು ಇಲ್ಲವೇ ಮಡಿ’ ಕದನ.

GT- RR : ಐಪಿಎಲ್ 2026ರ ಫೈನಲ್ಗೆ ಪ್ರವೇಶ ಪಡೆಯಲು ಇಂದು ಗುಜರಾತ್ ಟೈಟನ್ಸ್ (GT) ಮತ್ತು ರಾಜಸ್ಥಾನ್ ರಾಯಲ್ಸ್ (RR) ತಂಡಗಳು ಕ್ವಾಲಿಫೈಯರ್-2ನಲ್ಲಿ ಮುಖಾಮುಖಿಯಾಗಲಿವೆ. ನ್ಯೂ ಚಂಡೀಗಢದ ಮಹಾರಾಜ ಯದವೀಂದ್ರ ಸಿಂಗ್ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಗೆಲ್ಲುವ ತಂಡ ಮೇ 31ರಂದು ಆರ್ಸಿಬಿ ವಿರುದ್ಧ ಫೈನಲ್ನಲ್ಲಿ ಸೆಣಸಾಡಲಿದೆ. ಸೋತ ತಂಡ ಟೂರ್ನಿಯಿಂದ ಹೊರಬೀಳಲಿದೆ.
ಮತ್ತೆ ಭರ್ಜರಿ ಕಮ್ಬ್ಯಾಕ್
ಈ ಸೀಸನ್ನಲ್ಲಿ ಏಳು-ಬೀಳುಗಳ ನಡುವೆ ಉತ್ತಮ ಪ್ರದರ್ಶನ ನೀಡಿದ ಗುಜರಾತ್ ಟೈಟನ್ಸ್ 18 ಅಂಕಗಳೊಂದಿಗೆ ಪ್ಲೇಆಫ್ಗೆ ಪ್ರವೇಶಿಸಿತ್ತು. ಮತ್ತೊಂದೆಡೆ ಆರಂಭಿಕ ನಾಲ್ಕು ಪಂದ್ಯಗಳನ್ನು ಸತತವಾಗಿ ಗೆದ್ದಿದ್ದ ರಾಜಸ್ಥಾನ್ ರಾಯಲ್ಸ್, ಮಧ್ಯದಲ್ಲಿ ಲಯ ಕಳೆದುಕೊಂಡರೂ ಮತ್ತೆ ಭರ್ಜರಿ ಕಮ್ಬ್ಯಾಕ್ ಮಾಡಿದೆ.

ಎರಡು ಬಾರಿ ಮುಖಾಮುಖಿ
ಈ ಆವೃತ್ತಿಯಲ್ಲಿ ಉಭಯ ತಂಡಗಳು ಈಗಾಗಲೇ ಎರಡು ಬಾರಿ ಮುಖಾಮುಖಿಯಾಗಿವೆ. ಏಪ್ರಿಲ್ 4ರಂದು ನಡೆದ ಮೊದಲ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ 6 ರನ್ಗಳ ರೋಚಕ ಜಯ ಸಾಧಿಸಿತ್ತು.
ಬಳಿಕ ಮೇ 9ರಂದು ನಡೆದ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ 77 ರನ್ಗಳ ಭರ್ಜರಿ ಗೆಲುವು ಸಾಧಿಸಿ ಪ್ರತೀಕಾರ ತೀರಿಸಿಕೊಂಡಿತ್ತು.

ಗುಜರಾತ್ಗೆ ಬ್ಯಾಟಿಂಗ್ – ಬೌಲಿಂಗ್ ಎರಡರಲ್ಲೂ ಬಲ
ಗುಜರಾತ್ ಟೈಟನ್ಸ್ ತಂಡದ ಯಶಸ್ಸಿನ ಪ್ರಮುಖ ಆಧಾರ ಆರಂಭಿಕ ಜೋಡಿ ನಾಯಕ ಶುಭಮನ್ ಗಿಲ್ ಮತ್ತು ಸಾಯಿ ಸುದರ್ಶನ್. ಮಧ್ಯಮ ಕ್ರಮಾಂಕದಲ್ಲಿ ಜೋಸ್ ಬಟ್ಲರ್, ಜೇಸನ್ ಹೋಲ್ಡರ್ ಹಾಗೂ ರಾಹುಲ್ ತೆವಾಟಿಯಾ ಅವರ ಮೇಲೂ ದೊಡ್ಡ ನಿರೀಕ್ಷೆಯಿದೆ. ವಿಶೇಷವಾಗಿ ಕ್ವಾಲಿಫೈಯರ್-1ನಲ್ಲಿ ತೆವಾಟಿಯಾ ಸ್ಫೋಟಕ ಆಟವಾಡಿದ್ದರು.
ಬೌಲಿಂಗ್ನಲ್ಲಿ ಕಗಿಸೋ ರಬಾಡಾ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ ಮತ್ತು ರಶೀದ್ ಖಾನ್ ಅವರ ದಾಳಿ ಆರ್ಆರ್ ಬ್ಯಾಟರ್ಗಳಿಗೆ ದೊಡ್ಡ ಸವಾಲಾಗಲಿದೆ.

ರಾಜಸ್ಥಾನ್ಗೆ ವೈಭವ್ ಸೂರ್ಯವಂಶಿಯೇ ಟ್ರಂಪ್ ಕಾರ್ಡ್
ರಾಜಸ್ಥಾನ್ ರಾಯಲ್ಸ್ ಪರ ಯುವ ಬ್ಯಾಟರ್ ವೈಭವ್ ಸೂರ್ಯವಂಶಿ ಈ ಸೀಸನ್ನಲ್ಲಿ ಅಮೋಘ ಫಾರ್ಮ್ನಲ್ಲಿದ್ದಾರೆ.
ಎಲಿಮಿನೇಟರ್ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಕೇವಲ 29 ಎಸೆತಗಳಲ್ಲಿ 97 ರನ್ ಸಿಡಿಸಿ ಮಿಂಚಿದ್ದರು. ಯಶಸ್ವಿ ಜೈಸ್ವಾಲ್ ಹಾಗೂ ಧ್ರುವ್ ಜುರೆಲ್ ಕೂಡ ಉತ್ತಮ ಲಯದಲ್ಲಿದ್ದಾರೆ.
ಇನ್ನು ಬೌಲಿಂಗ್ನಲ್ಲಿ ಜೋಫ್ರಾ ಆರ್ಚರ್ ಪ್ರಮುಖ ಅಸ್ತ್ರವಾಗಿದ್ದು, ಈ ಸೀಸನ್ನಲ್ಲಿ ಈಗಾಗಲೇ 21 ವಿಕೆಟ್ ಕಬಳಿಸಿ ಅಗ್ರ ವಿಕೆಟ್ ಟೇಕರ್ಗಳ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.
ಪವರ್ಪ್ಲೇಯಲ್ಲೇ ಜಿಟಿ ಆರಂಭಿಕರನ್ನು ಕಟ್ಟಿಹಾಕುವ ಜವಾಬ್ದಾರಿ ಆರ್ಚರ್ ಮೇಲಿದೆ.
ಇದನ್ನು ಓದಿ : ‘ಸೂರ್ಯ’ವಂಶಿ ಅಬ್ಬರಕ್ಕೆ ಸನ್ ಬರ್ನ್ – ಎಲಿಮಿನೇಟರ್ ಪಂದ್ಯದಲ್ಲಿ ಗೆದ್ದು ಬೀಗಿದ RR

ರನ್ ಮಳೆ ನಿರೀಕ್ಷೆ
ಮುಲ್ಲಾನ್ಪುರ ಪಿಚ್ ಬ್ಯಾಟರ್ಗಳಿಗೆ ಅನುಕೂಲಕರವಾಗಿದ್ದು, ಮತ್ತೊಮ್ಮೆ ಹೈ ಸ್ಕೋರಿಂಗ್ ಪಂದ್ಯ ನಡೆಯುವ ಸಾಧ್ಯತೆ ಇದೆ. ಇದೇ ಮೈದಾನದಲ್ಲಿ ನಡೆದ ಎಲಿಮಿನೇಟರ್ನಲ್ಲಿ ರಾಜಸ್ಥಾನ್ ರಾಯಲ್ಸ್ 243 ರನ್ಗಳ ಬೃಹತ್ ಮೊತ್ತ ಪೇರಿಸಿತ್ತು.
ಪ್ರತಿಯಾಗಿ ಸನ್ರೈಸರ್ಸ್ ಹೈದರಾಬಾದ್ 196 ರನ್ಗಳಿಗೆ ಆಲೌಟ್ ಆಗಿತ್ತು. ಹೀಗಾಗಿ ಇಂದಿನ ಪಂದ್ಯದಲ್ಲೂ ರನ್ ಮಳೆ ಹರಿಯುವ ನಿರೀಕ್ಷೆ ಹೆಚ್ಚಾಗಿದೆ.

ಸಂಭವನೀಯ ತಂಡಗಳು
ಗುಜರಾತ್ ಟೈಟನ್ಸ್
ಸಾಯಿ ಸುದರ್ಶನ್, ಶುಭಮನ್ ಗಿಲ್ (ನಾಯಕ), ಜೋಸ್ ಬಟ್ಲರ್ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ನಿಶಾಂತ್ ಸಿಂಧು, ಜೇಸನ್ ಹೋಲ್ಡರ್, ರಶೀದ್ ಖಾನ್, ಕುಲ್ವಂತ್ ಖೆಜ್ರೋಲಿಯಾ, ಕಗಿಸೋ ರಬಾಡಾ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ.
ಇಂಪ್ಯಾಕ್ಟ್ ಸಬ್: ರಾಹುಲ್ ತೆವಾಟಿಯಾ, ಗ್ಲೆನ್ ಫಿಲಿಪ್ಸ್, ಅನುಜ್ ರಾವತ್, ಕುಮಾರ್ ಕುಶಾಗ್ರಾ, ಸಾಯಿ ಕಿಶೋರ್.

ರಾಜಸ್ಥಾನ್ ರಾಯಲ್ಸ್
ಯಶಸ್ವಿ ಜೈಸ್ವಾಲ್, ವೈಭವ್ ಸೂರ್ಯವಂಶಿ, ಧ್ರುವ್ ಜುರೆಲ್ (ವಿಕೆಟ್ ಕೀಪರ್), ರಿಯಾನ್ ಪರಾಗ್ (ನಾಯಕ), ಡೊನೊವನ್ ಫೆರೇರಾ, ರವೀಂದ್ರ ಜಡೇಜಾ, ದಸುನ್ ಶನಕ, ಜೋಫ್ರಾ ಆರ್ಚರ್, ನಾಂದ್ರೆ ಬರ್ಗರ್, ಯಶ್ ರಾಜ್ ಪುಂಜಾ, ಬ್ರಿಜೇಶ್ ಶರ್ಮಾ.
ಇಂಪ್ಯಾಕ್ಟ್ ಸಬ್: ಶುಭಂ ದುಬೆ, ಸುಶಾಂತ್ ಮಿಶ್ರಾ, ಅಮನ್ ರಾವ್ ಪೆರಾಲ, ರವಿ ಬಿಷ್ಣೋಯ್, ತುಷಾರ್ ದೇಶಪಾಂಡೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




