ಮಾಜಿ CM ಸಿದ್ದರಾಮಯ್ಯಗೆ 79 ನೇ ಜನ್ಮ ದಿನದ ಸಂಭ್ರಮ – ಗಣ್ಯರಿಂದ ಶುಭಾಶಯ

ಕರ್ನಾಟಕದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ತಮ್ಮ 79ನೇ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಸಿದ್ದರಾಮಯ್ಯ ಅವರ ಹುಟ್ಟು ಹಬ್ಬಕ್ಕೆ ಅಭಿಮಾನಿಗಳು ಅಭಿಮಾನಿಗಳು, ಕಾಂಗ್ರೆಸ್ ಕಾರ್ಯಕರ್ತರು, ರಾಜಕೀಯ ನಾಯಕರು ಹಾಗೂ ಗಣ್ಯರು ಶುಭ ಕೋರಿದ್ದಾರೆ.
ವಕೀಲ ವೃತ್ತಿಯಲ್ಲಿದ್ದರೂ ಇವರನ್ನು ಸೆಳೆದಿದ್ದು ಮಾತ್ರ ರಾಜಕೀಯ
1948ರ ಆಗಸ್ಟ್ 3ರಂದು ಮೈಸೂರು ಜಿಲ್ಲೆಯ ಸಿದ್ದರಾಮನಹುಂಡಿ ಗ್ರಾಮದಲ್ಲಿ ಜನಿಸಿದ ಮಾಜಿ CM ಸಿದ್ದು, ಮೈಸೂರಿನ ಶಾರದಾ ವಿಲಾಸ ಕಾನೂನು ಕಾಲೇಜಿನಲ್ಲಿ 1972ರಲ್ಲಿ ಕಾನೂನು ಪದವಿ ಪಡೆದರು.
ವಕೀಲರಾಗಿ ವೃತ್ತಿ ಆರಂಭಿಸಿದರೂ, ಸಮಾಜಸೇವೆ ಮತ್ತು ರಾಜಕೀಯದತ್ತ ಹೆಚ್ಚಿನ ಆಸಕ್ತಿ ಹೊಂದಿದ್ದ ಅವರು ಸಾರ್ವಜನಿಕ ಜೀವನವನ್ನು ಆಯ್ಕೆ ಮಾಡಿಕೊಂಡರು.

ರೈತ ಚಳವಳಿಗಳ ಮೂಲಕ ರಾಜಕೀಯ ಪ್ರವೇಶ
ಸಮಾಜವಾದಿ ಚಿಂತಕ ಡಾ. ರಾಮ್ ಮನೋಹರ್ ಲೋಹಿಯಾ ಅವರ ವಿಚಾರಧಾರೆಯಿಂದ ಪ್ರೇರಿತರಾದ ಸಿದ್ದರಾಮಯ್ಯ, ರೈತ ಚಳವಳಿಗಳ ಮೂಲಕ ರಾಜಕೀಯ ಪ್ರವೇಶಿಸಿದರು. 1978ರಲ್ಲಿ ಮೈಸೂರು ತಾಲೂಕು ಅಭಿವೃದ್ಧಿ ಮಂಡಳಿ ಸದಸ್ಯರಾಗಿ ಆಯ್ಕೆಯಾಗುವ ಮೂಲಕ ತಮ್ಮ ರಾಜಕೀಯ ಜೀವನ ಆರಂಭಿಸಿದರು. ಬಳಿಕ 1983ರಲ್ಲಿ ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಿಂದ ಭಾರತೀಯ ಲೋಕದಳದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಮೊದಲ ಬಾರಿಗೆ ವಿಧಾನಸಭೆಗೆ ಪ್ರವೇಶಿಸಿದರು.
ರಾಜ್ಯದ 16ನೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ
ರಾಜ್ಯ ರಾಜಕೀಯದಲ್ಲಿ ಕ್ರಮೇಣ ಪ್ರಭಾವಿ ನಾಯಕರಾಗಿ ಬೆಳೆದ ಸಿದ್ದರಾಮಯ್ಯ, 2008ರಿಂದ 2013ರವರೆಗೆ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾಗಿ ಕಾರ್ಯನಿರ್ವಹಿಸಿದರು. 2013ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟ ಬಹುಮತ ದೊರೆತ ಬಳಿಕ ರಾಜ್ಯದ 16ನೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ, ಐದು ವರ್ಷಗಳ ಪೂರ್ಣಾವಧಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದರು.
ಇದನ್ನು ಓದಿ : ತುಮಕೂರಿಗೆ CM ಸಿದ್ದರಾಮಯ್ಯ ಎಂಟ್ರಿ.! KN ರಾಜಣ್ಣ ನಿವಾಸದಲ್ಲಿ ಸಿದ್ದು.!

ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ
2023ರ ವಿಧಾನಸಭಾ ಚುನಾವಣೆಯಲ್ಲಿ ವರುಣಾ ಕ್ಷೇತ್ರದಿಂದ ಭರ್ಜರಿ ಗೆಲುವು ಸಾಧಿಸಿದ ಅವರು, ಕಾಂಗ್ರೆಸ್ ಹೈಕಮಾಂಡ್ ನಿರ್ಧಾರದಂತೆ ಎರಡನೇ ಬಾರಿಗೆ ಮುಖ್ಯಮಂತ್ರಿ ಸ್ಥಾನ ಅಲಂಕರಿಸಿದರು.
ನಂತರ 2026ರ ಮೇ 28ರಂದು ಹೈಕಮಾಂಡ್ ಸೂಚನೆಯಂತೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು.
ದೀರ್ಘಾವಧಿ ಸೇವೆ ಸಲ್ಲಿಸಿದ ಮುಖ್ಯಮಂತ್ರಿ
ಸಿದ್ದರಾಮಯ್ಯ ಅವರು ಸುಮಾರು 12 ವಿಧಾನಸಭಾ ಚುನಾವಣೆಗಳಲ್ಲಿ ಸ್ಪರ್ಧಿಸಿ 9 ಬಾರಿ ಜಯಗಳಿಸಿದ್ದಾರೆ. ಮೊದಲ ಅವಧಿಯಲ್ಲಿ 2013ರ ಮೇ 13ರಿಂದ 2018ರ ಮೇ 15ರವರೆಗೆ ಮತ್ತು ಎರಡನೇ ಅವಧಿಯಲ್ಲಿ 2023ರ ಮೇ 20ರಿಂದ 2026ರ ಜೂನ್ 3ರವರೆಗೆ ಮುಖ್ಯಮಂತ್ರಿ ಆಗಿ ಸೇವೆ ಸಲ್ಲಿಸಿದರು. ಒಟ್ಟಾರೆ ಸುಮಾರು ಎಂಟು ವರ್ಷಗಳಿಗಿಂತ ಹೆಚ್ಚು ಅವಧಿ ಮುಖ್ಯಮಂತ್ರಿ ಹುದ್ದೆಯಲ್ಲಿ ಕಾರ್ಯನಿರ್ವಹಿಸುವ ಮೂಲಕ ಕರ್ನಾಟಕದ ಇತಿಹಾಸದಲ್ಲೇ ಅತ್ಯಂತ ದೀರ್ಘಾವಧಿ ಸೇವೆ ಸಲ್ಲಿಸಿದ ಮುಖ್ಯಮಂತ್ರಿಗಳಲ್ಲಿ ಒಬ್ಬರಾಗಿದ್ದಾರೆ.

ರಾಜಕೀಯ ಜೀವನದ ನಾಲ್ಕು ದಶಕಗಳಿಗೂ ಹೆಚ್ಚು ಅವಧಿಯಲ್ಲಿ ರೈತಪರ, ಜನಪರ ಮತ್ತು ಆಡಳಿತಾತ್ಮಕ ನಿರ್ಧಾರಗಳ ಮೂಲಕ ರಾಜ್ಯ ರಾಜಕೀಯದಲ್ಲಿ ವಿಶಿಷ್ಟ ಛಾಪು ಮೂಡಿಸಿರುವ ಸಿದ್ದರಾಮಯ್ಯ ಅವರಿಗೆ ಜನ್ಮದಿನದ ಅಂಗವಾಗಿ ಹಲವರು ಶುಭಾಷಯಗಳನ್ನು ಕೋರಿದ್ದಾರೆ.
ಇದನ್ನು ನೋಡಿ : ತುಮಕೂರಿನಲ್ಲಿ ಚಿಪ್ಪಿಗೆ ಫುಲ್ ಡಿಮ್ಯಾಂಡ್-ರೇಟ್ ಕೇಳಿದ್ರೆ ಶಾಕ್ ಆಗಿ ಹೋಗ್ತಿರಾ?





