ಜಪಾನ್ಗೆ ಲಗ್ಗೆ ಇಡಲು ಸಜ್ಜಾದ Dhurandhar ಸಿನಿಮಾ.

ಭಾರತದಲ್ಲಿ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಯಶಸ್ಸು ಕಂಡಿರುವ ‘ಧುರಂಧರ್’ ಹಾಗೂ ‘ಧುರಂಧರ್ 2’ ಸಿನಿಮಾಗಳು ಇದೀಗ ಜಾಗತಿಕ ಮಟ್ಟದಲ್ಲಿಯೂ ತಮ್ಮ ಪ್ರಭಾವವನ್ನು ವಿಸ್ತರಿಸುತ್ತಿವೆ. ಅಮೆರಿಕ ಸೇರಿದಂತೆ ಹಲವು ದೇಶಗಳಲ್ಲಿ ಉತ್ತಮ ಗಳಿಕೆ ದಾಖಲಿಸಿರುವ ‘ಧುರಂಧರ್’ ಸಿನಿಮಾ ಇದೀಗ ಜಪಾನ್ನಲ್ಲಿ ಬಿಡುಗಡೆಯಾಗಲು ಸಜ್ಜಾಗಿದೆ.

ಜಪಾನ್ನಲ್ಲಿ ಬಿಡುಗಡೆಯಾಗಲು ಸಜ್ಜು
Dhurandhar ಸಿನಿಮಾ ಜುಲೈ 10ರಂದು ಜಪಾನ್ನಲ್ಲಿ ಅಲ್ಲಿನ ಸ್ಥಳೀಯ ಭಾಷೆಯಲ್ಲಿ ತೆರೆಗೆ ಬರಲಿದೆ. ಭಾರತೀಯ ಸಿನಿಮಾಗಳಿಗೆ ಜಪಾನ್ನಲ್ಲಿ ದೊಡ್ಡ ಅಭಿಮಾನಿ ಬಳಗವಿದ್ದು, ಹಲವು ವರ್ಷಗಳಿಂದ ಬಾಲಿವುಡ್, ತಮಿಳು ಹಾಗೂ ತೆಲುಗು ಚಿತ್ರಗಳು ಅಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿವೆ.

ಜಪಾನ್ನಲ್ಲಿ ‘ಮಹಾರಾಜ’ ಸಿನಿಮಾ ಉತ್ತಮ ಪ್ರತಿಕ್ರಿಯೆ
2024ರಲ್ಲಿ ಬಿಡುಗಡೆಯಾದ ತಮಿಳಿನ ‘ಮಹಾರಾಜ’ ಸಿನಿಮಾ 2025ರಲ್ಲಿ ಜಪಾನ್ನಲ್ಲಿ ಬಿಡುಗಡೆಯಾಗಿ ಉತ್ತಮ ಪ್ರತಿಕ್ರಿಯೆ ಪಡೆದಿತ್ತು. ಅದರ ಬಳಿಕ ಬಿಡುಗಡೆಯಾದ ಕೆಲವು ಭಾರತೀಯ ಸಿನಿಮಾಗಳು ನಿರೀಕ್ಷಿತ ಮಟ್ಟದ ಯಶಸ್ಸು ಸಾಧಿಸಲು ಸಾಧ್ಯವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ‘ಧುರಂಧರ್’ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆಗಳು ವ್ಯಕ್ತವಾಗಿವೆ.
ಇದನ್ನು ಓದಿ : ಕನ್ನಡದಲ್ಲೂ ಬಿಡುಗಡೆ ಆಯ್ತು ‘Dhurandhar 2’ ..ಇಷ್ಟು ದಿನ ತಡವಾಗಿದ್ದು ಯಾಕೆ…?

ಭಾರತೀಯ ಸಿನಿಮಾಗಳಿಗೆ ವಿಶೇಷ ಮಾರುಕಟ್ಟೆ
ಜಪಾನ್ನಲ್ಲಿ ಭಾರತೀಯ ಸಿನಿಮಾಗಳಿಗೆ ವಿಶೇಷ ಮಾರುಕಟ್ಟೆ ಇದೆ. ರಜನಿಕಾಂತ್ ಅಭಿನಯದ ‘ಮುತ್ತು’ ಸಿನಿಮಾ ಅಲ್ಲಿ ಐತಿಹಾಸಿಕ ಯಶಸ್ಸು ಕಂಡಿತ್ತು. ಬಳಿಕ ‘ಈಗ’, ‘3 ಇಡಿಯಟ್ಸ್’ ಹಾಗೂ ‘ಆರ್ಆರ್ಆರ್’ ಸಿನಿಮಾಗಳು ಕೂಡ ಭರ್ಜರಿ ಕಲೆಕ್ಷನ್ ದಾಖಲಿಸಿದ್ದವು. ಇದೀಗ ‘ಧುರಂಧರ್’ ಕೂಡ ಅದೇ ಸಾಲಿಗೆ ಸೇರುವ ಸಾಧ್ಯತೆ ಇದೆ ಎಂದು ಸಿನಿಪ್ರಿಯರು ನಿರೀಕ್ಷಿಸುತ್ತಿದ್ದಾರೆ.

Dhurandhar ಮುರಿಯುತ್ತಾ ‘ದಂಗಲ್’ ದಾಖಲೆ
‘ಧುರಂಧರ್’ ಮತ್ತು ‘ಧುರಂಧರ್ 2’ ಸಿನಿಮಾಗಳು ಭಾರತೀಯ ಬಾಕ್ಸ್ ಆಫೀಸ್ನಲ್ಲಿ ಭಾರಿ ದೊಡ್ಡ ಮೊತ್ತ ಗಳಿಕೆ ಮಾಡಿದ್ದರೂ ಸಹ ಭಾರತದ ಅತಿ ಹೆಚ್ಚು ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಿದ ಸಿನಿಮಾಗಳು ಎನಿಸಿಕೊಂಡಿಲ್ಲ. ಆ ದಾಖಲೆ ಈಗಲೂ ‘ದಂಗಲ್’ ಹೆಸರಿನಲ್ಲೇ ಇದೆ. ಒಂದೊಮ್ಮೆ ‘ಧುರಂಧರ್’ ಸಿನಿಮಾ ಜಪಾನಿನಲ್ಲಿ ಯಶಸ್ಸು ಗಳಿಸಿದರೆ ‘ದಂಗಲ್’ ಸಿನಿಮಾದ ದಾಖಲೆ ಅಳಿಸಿ ಹೋಗುವ ಸಾಧ್ಯತೆ ಇದೆ.

2025ರಲ್ಲಿ ಬಿಡುಗಡೆಯಾದ ‘ಧುರಂಧರ್’ ಸಿನಿಮಾದಲ್ಲಿ ರಣ್ವೀರ್ ಸಿಂಗ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಅಕ್ಷಯ್ ಖನ್ನಾ, ಆರ್. ಮಾಧವನ್, ಅರ್ಜುನ್ ರಾಂಪಾಲ್ ಹಾಗೂ ಸಂಜಯ್ ದತ್ ಸೇರಿದಂತೆ ಹಲವು ತಾರೆಯರು ಚಿತ್ರದಲ್ಲಿ ಅಭಿನಯಿಸಿದ್ದಾರೆ. ಚಿತ್ರವನ್ನು ಆದಿತ್ಯ ಧರ್ ನಿರ್ದೇಶಿಸಿದ್ದಾರೆ.
ಇದನ್ನು ನೋಡಿ : ಅಣ್ಣಮ್ಮ ದೇವಸ್ಥಾನಕ್ಕೆ CM DKS ಭೇಟಿ – ಅಭಿಮಾನಿಗಳಿಂದ DKಗೆ ಭರ್ಜರಿ ಸ್ವಾಗತ..!




