Meta ಸಂಸ್ಥೆಗೆ ಕೇಂದ್ರ ಸರ್ಕಾರ ಶಾಕ್: ಇನ್ಸ್ಟಾಗ್ರಾಮ್ನಿಂದ ಮಕ್ಕಳ ಶೋಷಣೆಗೆ ಸಂಬಂಧಿಸಿದ ಜಾಹೀರಾತು ತೆಗೆಯಲು ಆದೇಶ

ಸಾಮಾಜಿಕ ಜಾಲತಾಣ ದೈತ್ಯ ಮೆಟಾ (Meta) ಸಂಸ್ಥೆಯ ವಿರುದ್ಧ ಕೇಂದ್ರ ಸರ್ಕಾರ ಕಠಿಣ ಕ್ರಮಕ್ಕೆ ಮುಂದಾಗಿದೆ. ಇನ್ಸ್ಟಾಗ್ರಾಮ್ನಲ್ಲಿ ಮಕ್ಕಳ ಲೈಂಗಿಕ ಶೋಷಣೆ ಹಾಗೂ ದೌರ್ಜನ್ಯಕ್ಕೆ ಸಂಬಂಧಿಸಿದ ಪಾವತಿಸಿದ (Paid) ಜಾಹೀರಾತುಗಳು ಕಾಣಿಸಿಕೊಂಡಿರುವ ಆರೋಪವನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (MeitY), ಮೆಟಾಗೆ ನೋಟಿಸ್ ಜಾರಿ ಮಾಡಿದೆ.
ಇನ್ಸ್ಟಾಗ್ರಾಮ್ನಿಂದ ಮಕ್ಕಳ ಶೋಷಣೆಗೆ ಸಂಬಂಧಿಸಿದ ಜಾಹೀರಾತು ತೆಗೆಯಲು ಆದೇಶ
ಸಚಿವಾಲಯವು ಇನ್ಸ್ಟಾಗ್ರಾಮ್ನಲ್ಲಿ ಮಕ್ಕಳ ಲೈಂಗಿಕ ಶೋಷಣೆಯನ್ನು ಉತ್ತೇಜಿಸುವ ಅಥವಾ ಅದಕ್ಕೆ ದಾರಿ ಮಾಡಿಕೊಡುವ ಎಲ್ಲಾ ಜಾಹೀರಾತುಗಳು ಹಾಗೂ ಕಾನೂನುಬಾಹಿರ ವಿಷಯಗಳನ್ನು ತಕ್ಷಣವೇ ತೆಗೆದುಹಾಕುವಂತೆ ಮೆಟಾಗೆ ನಿರ್ದೇಶನ ನೀಡಿದೆ.

7 ದಿನಗಳೊಳಗೆ ಸಮಗ್ರ ವರದಿ ಸಲ್ಲಿಸುವಂತೆ ಸೂಚನೆ
ಇದರ ಜೊತೆಗೆ, ಇಂತಹ ವಿಷಯಗಳು ಇನ್ಸ್ಟಾಗ್ರಾಮ್ನಲ್ಲಿ ಹೇಗೆ ಪ್ರಕಟವಾದವು, ಅವುಗಳನ್ನು ತಡೆಯಲು ಸಂಸ್ಥೆ ಯಾವ ಕ್ರಮಗಳನ್ನು ಕೈಗೊಂಡಿದೆ.
ಹಾಗೂ ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಯಾವ ಸುರಕ್ಷತಾ ವ್ಯವಸ್ಥೆಗಳನ್ನು ಜಾರಿಗೆ ತರುತ್ತಿದೆ ಎಂಬ ಕುರಿತು 7 ದಿನಗಳೊಳಗೆ ಸಮಗ್ರ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ.
ಇದನ್ನು ಓದಿ : ಇನ್ಸ್ಟಾ, ಫೇಸ್ಬುಕ್, ವಾಟ್ಸಾಪ್ಗೆ ಪೇಡ್ ಸಬ್ಸ್ಕ್ರಿಶನ್ಸ್ ಆರಂಭಿಸಲು ಮೆಟಾ ನಿರ್ಧಾರ
ಕೇಂದ್ರ ಸರ್ಕಾರ Meta ಗೆ ಕಟ್ಟುನಿಟ್ಟಿನ ನಿರ್ದೇಶನ
ವರದಿಗಳ ಪ್ರಕಾರ, ಇನ್ಸ್ಟಾಗ್ರಾಮ್ನಲ್ಲಿ ಪ್ರದರ್ಶನಗೊಂಡಿದ್ದ ಕೆಲವು ಪಾವತಿಸಿದ ಜಾಹೀರಾತುಗಳು ಬಳಕೆದಾರರನ್ನು ಮಕ್ಕಳ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ ಕಾನೂನುಬಾಹಿರ ವಿಷಯಗಳನ್ನು ಹೊಂದಿರುವ ಇತರೆ ವೆಬ್ಸೈಟ್ಗಳಿಗೆ ಕರೆದೊಯ್ಯುತ್ತಿದ್ದವು ಎಂಬ ಆರೋಪ ಕೇಳಿಬಂದಿದೆ.
ಅಲ್ಲದೆ, ಇನ್ಸ್ಟಾಗ್ರಾಮ್ನ ಅಲ್ಗಾರಿದಮ್ ಇಂತಹ ವಿಷಯಗಳು ಹೆಚ್ಚು ಜನರಿಗೆ ತಲುಪಲು ಕಾರಣವಾಗಿರಬಹುದೆಂಬ ಅನುಮಾನವನ್ನೂ ಸರ್ಕಾರ ವ್ಯಕ್ತಪಡಿಸಿದೆ.
ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಬಲಿಷ್ಠ ಸುರಕ್ಷತಾ ವ್ಯವಸ್ಥೆಗಳನ್ನು ಜಾರಿಗೊಳಿಸಬೇಕು ಎಂದು ಕೇಂದ್ರ ಸರ್ಕಾರ ಮೆಟಾಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ.

ತಪ್ಪಿದರೆ ಪೋಕ್ಸೋ ಕಾಯ್ದೆಯಡಿ ಜೈಲು ಶಿಕ್ಷೆ
ಕೇಂದ್ರ ಸರ್ಕಾರ ನೀಡಿರುವ ಈ ನೋಟಿಸ್ಗೆ ಮೆಟಾ ಸಂಸ್ಥೆಯು ನಿಗದಿತ ಸಮಯದೊಳಗೆ ಸೂಕ್ತ ಪ್ರತಿಕ್ರಿಯೆ ನೀಡದಿದ್ದರೆ ಅಥವಾ ಸರಿಪಡಿಸುವ ಕ್ರಮಗಳನ್ನು ತೆಗೆದುಕೊಳ್ಳಲು ವಿಫಲವಾದರೆ, ಭಾರತದ ಮಾಹಿತಿ ತಂತ್ರಜ್ಞಾನ (IT) ಕಾಯ್ದೆ ಹಾಗೂ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (POCSO) ಕಾಯ್ದೆ, 2012 ರ ಅಡಿಯಲ್ಲಿ ಕಠಿಣ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಸರ್ಕಾರ ಎಚ್ಚರಿಸಿದೆ.
ಮಕ್ಕಳ ಸುರಕ್ಷತೆಯನ್ನು ಅತ್ಯುನ್ನತ ಆದ್ಯತೆಯಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ, ಸಾಮಾಜಿಕ ಮಾಧ್ಯಮಗಳ ದುರುಪಯೋಗವನ್ನು ತಡೆಯುವ ನಿಟ್ಟಿನಲ್ಲಿ ಈ ಕ್ರಮ ಕೈಗೊಂಡಿದೆ.

ಇದನ್ನು ನೋಡಿ : ಹುಟ್ಟೂರಿನಲ್ಲಿ ವಿಎ ಭುವನಾ ಅಂತ್ಯಸಂಸ್ಕಾರ- ಮಗಳನ್ನು ಕಳೆದುಕೊಂಡು ಹೆತ್ತವರ ರೋಧನೆ




