Karnataka ಕ್ಕೆ ಮತ್ತೆ ಶಾಕ್ – ತಮಿಳುನಾಡಿಗೆ ದಿನಕ್ಕೆ 12 ಸಾವಿರ ಕ್ಯೂಸೆಕ್ ನೀರು ಬಿಡಿ

ಮುಂಗಾರು ಮಳೆ ವೈಫಲ್ಯದಿಂದ ರಾಜ್ಯದಲ್ಲಿ ಬರದ ಆತಂಕ ಎದುರಾಗಿರುವ ಬೆನ್ನಲ್ಲೇ ಕರ್ನಾಟಕಕ್ಕೆ ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಮತ್ತೊಂದು ಆಘಾತ ನೀಡಿದೆ. ಮುಂದಿನ 15 ದಿನಗಳ ಕಾಲ ತಮಿಳುನಾಡಿಗೆ ಪ್ರತಿನಿತ್ಯ 12 ಸಾವಿರ ಕ್ಯೂಸೆಕ್ ಕಾವೇರಿ ನೀರು ಹರಿಸುವಂತೆ CWRC ಆದೇಶಿಸಿದೆ.
ತಮಿಳುನಾಡಿಗೆ ದಿನಕ್ಕೆ 12 ಸಾವಿರ ಕ್ಯೂಸೆಕ್ ನೀರು ಬಿಡಿ
ಇಂದು ನಡೆದ ಸಭೆಯಲ್ಲಿ ಕಾವೇರಿ ನೀರು ನಿಯಂತ್ರಣ ಸಮಿತಿ ಕರ್ನಾಟಕ ಮತ್ತು ತಮಿಳುನಾಡು ಎರಡೂ ರಾಜ್ಯಗಳ ವಾದಗಳನ್ನು ಆಲಿಸಿತು. ಈ ವೇಳೆ ಕರ್ನಾಟಕದ ಪರವಾಗಿ ಅಧಿಕಾರಿಗಳು ರಾಜ್ಯದಲ್ಲಿನ ಮಳೆ ಪರಿಸ್ಥಿತಿ, ಕಾವೇರಿ ಜಲಾಶಯಗಳಲ್ಲಿನ ನೀರಿನ ಸಂಗ್ರಹ ಹಾಗೂ ಬರಗಾಲದ ಸ್ಥಿತಿಗತಿಗಳನ್ನು ಸಮಿತಿಯ ಮುಂದಿಟ್ಟರು.
ತಮಿಳುನಾಡಿಗೆ ಪ್ರತಿನಿತ್ಯ 12 ಸಾವಿರ ಕ್ಯೂಸೆಕ್ ನೀರು ಹರಿಸುವಷ್ಟು ನೀರು ರಾಜ್ಯದ ಜಲಾಶಯಗಳಲ್ಲಿ ಲಭ್ಯವಿಲ್ಲ. ಇಂತಹ ಪರಿಸ್ಥಿತಿಯಲ್ಲಿ ನೀರು ಬಿಡುಗಡೆ ಮಾಡುವುದು ಕಷ್ಟ ಎಂದು ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳು CWRCಗೆ ಮನವರಿಕೆ ಮಾಡಲು ಪ್ರಯತ್ನಿಸಿದರು. ಆದರೂ ಸಮಿತಿ 12 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಆದೇಶಿಸಿದೆ.
ಇದನ್ನು ಓದಿ : ಕಾವೇರಿ ಕಿಚ್ಚು, ನಾಳೆ ಕರ್ನಾಟಕ ಬಂದ್ ಆಗುತ್ತಾ?

CWMA ಸಭೆಯಲ್ಲಿ ಕರ್ನಾಟಕದ ಆಕ್ಷೇಪ
ಇಂದು ಮಧ್ಯಾಹ್ನ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ (CWMA) ಸಭೆಯೂ ನಡೆಯಲಿದೆ. ಈ ಸಭೆಯಲ್ಲಿ ಕರ್ನಾಟಕ ಸರ್ಕಾರವು CWRC ಆದೇಶವನ್ನು ಪ್ರಶ್ನಿಸಲು ಸಿದ್ಧತೆ ನಡೆಸಿದೆ.
ರಾಜ್ಯದ ಪ್ರಸ್ತುತ ಜಲ ಪರಿಸ್ಥಿತಿಯಲ್ಲಿ ಪ್ರತಿನಿತ್ಯ 12 ಸಾವಿರ ಕ್ಯೂಸೆಕ್ ನೀರು ತಮಿಳುನಾಡಿಗೆ ಹರಿಸುವುದು ಕಷ್ಟ.
ರಾಜ್ಯದ ಕುಡಿಯುವ ನೀರು ಹಾಗೂ ಕೃಷಿ ಅಗತ್ಯಗಳನ್ನೂ ಪರಿಗಣಿಸಬೇಕು ಎಂದು ಕರ್ನಾಟಕ ತನ್ನ ವಾದವನ್ನು ಮಂಡಿಸುವ ಸಾಧ್ಯತೆಯಿದೆ.
ಜುಲೈ 28ರಂದು 3,500 ಕ್ಯೂಸೆಕ್ ನೀರಿಗೆ ಆದೇಶ
ಇದಕ್ಕೂ ಮುನ್ನ ಜುಲೈ 28ರಂದು CWRC ಕರ್ನಾಟಕಕ್ಕೆ 15 ದಿನಗಳ ಕಾಲ ಪ್ರತಿನಿತ್ಯ 3,500 ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಬಿಡುಗಡೆ ಮಾಡುವಂತೆ ಆದೇಶಿಸಿತ್ತು.
ಇದೀಗ ಆ ಪ್ರಮಾಣವನ್ನು ಗಣನೀಯವಾಗಿ ಹೆಚ್ಚಿಸಿ 12 ಸಾವಿರ ಕ್ಯೂಸೆಕ್ಗೆ ನಿಗದಿಪಡಿಸಿರುವುದು ರಾಜ್ಯದಲ್ಲಿ ಮತ್ತಷ್ಟು ಆಕ್ರೋಶಕ್ಕೆ ಕಾರಣವಾಗಿದೆ.

ಆಗಸ್ಟ್ 13ರಂದು ಕರ್ನಾಟಕ ಬಂದ್
ತಮಿಳುನಾಡಿಗೆ ಕಾವೇರಿ ನೀರು ಹರಿಸುವ ವಿಚಾರದಲ್ಲಿ ಕನ್ನಡಪರ ಸಂಘಟನೆಗಳೂ ಆಕ್ರೋಶ ವ್ಯಕ್ತಪಡಿಸಿವೆ. ರಾಜ್ಯದಲ್ಲಿ ಬರದ ಪರಿಸ್ಥಿತಿ ಇರುವಾಗ ತಮಿಳುನಾಡಿಗೆ ನೀರು ಬಿಡುವುದನ್ನು ವಿರೋಧಿಸಿ ಆಗಸ್ಟ್ 13ರಂದು ಕರ್ನಾಟಕ ಬಂದ್ಗೆ ಕರೆ ನೀಡಲಾಗಿದೆ.
ಕನ್ನಡ ಚಳವಳಿ ವಾಟಾಳ್ ಪಕ್ಷದ ಮುಖಂಡ ವಾಟಾಳ್ ನಾಗರಾಜ್ ಅವರು ಮಾಧ್ಯಮಗಳ ಜೊತೆ ಮಾತನಾಡಿ, “ಈ ತಿಂಗಳ 13ರಂದು ಮೊದಲೇ ತಿಳಿಸಿದಂತೆ ಶಾಂತಿಯುತವಾಗಿ ಕರ್ನಾಟಕ ಬಂದ್ ನಡೆಯಲಿದೆ.
ಈ ಹೋರಾಟಕ್ಕೆ ಎಲ್ಲರೂ ಸಹಕಾರ ನೀಡಬೇಕು” ಎಂದು ಮನವಿ ಮಾಡಿದ್ದಾರೆ.

ಇದನ್ನು ನೋಡಿ : ಆರಂಭಕ್ಕೂ ಮುನ್ನ NAGENDRAರನ್ನ ಕೈಬಿಡಿ – ಹೋರಾಟದ ಎಚ್ಚರಿಕೆ ಕೊಟ್ಟ BJP




