Tumakuru | ಉರುಳಿಗೆ ಸಿಕ್ಕ ಚಿರತೆಯನ್ನು ಸುಟ್ಟು ವಿಡಿಯೋ ಹಂಚಿಕೊಂಡ ಯುವಕರು – 3 ಅರೆಸ್ಟ್!

ಕಾಡುಪ್ರಾಣಿಗಳಿಂದ ಬೆಳೆ ರಕ್ಷಣೆಗಾಗಿ ಜಮೀನಿನ ಸುತ್ತ ಅಳವಡಿಸಿದ್ದ ಉರುಳಿಗೆ ಸಿಲುಕಿದ್ದ ಚಿರತೆಯನ್ನು ಸುಟ್ಟ ಆರೋಪದ ಮೇಲೆ Tumakuru ತಾಲ್ಲೂಕಿನ ಗೌರಗೊಂಡನಹಳ್ಳಿ ಗ್ರಾಮದ ಮೂವರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ. ಬಂಧಿತರನ್ನು ಗೌರಗೊಂಡನಹಳ್ಳಿಯ ಜಿ.ಡಿ. ಶಿವಕುಮಾರ್, ನಾರಾಯಣಪ್ಪ ಹಾಗೂ ಚಂದ್ರಶೇಖರ್ ಎಂದು ಗುರುತಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ.

ಉರುಳಿಗೆ ಸಿಕ್ಕ ಚಿರತೆ
ಗೌರಗೊಂಡನಹಳ್ಳಿ ಗ್ರಾಮದ ನಾರಾಯಣಪ್ಪ ಅವರ ಬೆಟ್ಟದ ಬುಡದಲ್ಲಿ ಜಮೀನಿದ್ದು, ಅಲ್ಲಿ ರಾಗಿ ಬೆಳೆ ಬೆಳೆಯಲಾಗಿತ್ತು. ಕಾಡುಹಂದಿ, ನವಿಲು ಹಾಗೂ ಚಿರತೆಗಳ ಹಾವಳಿಯಿಂದ ಬೆಳೆ ಪದೇಪದೇ ಹಾನಿಗೊಳಗಾಗುತ್ತಿದ್ದ ಹಿನ್ನೆಲೆಯಲ್ಲಿ ಉಳಿದ ಬೆಳೆಯನ್ನು ರಕ್ಷಿಸುವ ಉದ್ದೇಶದಿಂದ ಜಮೀನಿನ ಸುತ್ತ ಉರುಳು ಅಳವಡಿಸಲಾಗಿತ್ತು ಎನ್ನಲಾಗಿದೆ.
READ THIS : ವಿದ್ಯುತ್ ಸ್ಪರ್ಶಿಸಿ ನವಿಲು ಸಾವು – ನವಿಲು ತಿನ್ನೋಕೆ ಹೋಗಿ ಚಿರತೆ ಸಾವು

ಸುಟ್ಟು ವಿಡಿಯೋ ಹಂಚಿಕೊಂಡ ಯುವಕರು
ಎರಡು ದಿನಗಳ ಹಿಂದೆ ಇದೇ ಉರುಳಿಗೆ ಚಿರತೆ ಸಿಲುಕಿಕೊಂಡಿತ್ತು. ವಿಷಯ ತಿಳಿದ ಆರೋಪಿಗಳು ಹಾಗೂ ಗ್ರಾಮದ ಕೆಲ ಯುವಕರು ನಿನ್ನೆ ಬೆಳಿಗ್ಗೆ ಸ್ಥಳಕ್ಕೆ ತೆರಳಿ ಚಿರತೆಯನ್ನು ಸುಟ್ಟಿದ್ದಾರೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು ಚಿರತೆಯನ್ನು ಸುಟ್ಟ ದೃಶ್ಯಗಳನ್ನು ಕೆಲವರು ಮೊಬೈಲ್ನಲ್ಲಿ ಚಿತ್ರೀಕರಿಸಿ ವಾಟ್ಸ್ಆ್ಯಪ್ ಗ್ರೂಪ್ಗಳಲ್ಲಿ ಹಂಚಿಕೊಂಡಿದ್ದರು ಎನ್ನಲಾಗಿದೆ. ಈ ವಿಡಿಯೊಗಳು ಸೋಶಿಯಲ್ ಮಿಡಿಯಾಗಳಲ್ಲಿ ಹರಿದಾಡಿದ ಬೆನ್ನಲ್ಲೇ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಪ್ರಕರಣದ ಮಾಹಿತಿ ಲಭಿಸಿದೆ. ಖಚಿತ ಮಾಹಿತಿ ಆಧರಿಸಿ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ಚಿರತೆಯ ಸುಟ್ಟ ಅವಶೇಷಗಳು ಹಾಗೂ ಮಾಂಸ ಪತ್ತೆಯಾಗಿವೆ. ಸ್ಥಳದಲ್ಲಿದ್ದ ಸಾಕ್ಷ್ಯಾಧಾರಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಪತ್ತೆಯಾದ ಮಾಂಸ ಚಿರತೆಯದ್ದೇ
ಇನ್ನು ಬಂಧಿತ ಮೂವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆರೋಪಿಗಳು ಚಿರತೆಯನ್ನು ಸುಟ್ಟಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸ್ಥಳದಲ್ಲಿ ಪತ್ತೆಯಾದ ಮಾಂಸ ಚಿರತೆಯದ್ದೇ ಎಂಬುದು ಖಚಿತವಾಗಿದ್ದು, ಬೆಂಗಳೂರಿನ ತಜ್ಞರ ತಂಡದಿಂದ ಹೆಚ್ಚಿನ ಪರೀಕ್ಷೆ ನಡೆಸಲಿದೆ.

MUST WATCH : NAGENDRA ರಾಜೀನಾಮೆಗೆ ಮುಂದುವರೆದ ಪ್ರತಿಭಟನೆ – ಕಪ್ಪು T-SHIRT ಧರಿಸಿ ಬಂದ BJP JDS




