ವರಮಹಾಲಕ್ಷ್ಮಿ ಹಬ್ಬದ ದಿನವೇ ಭೀಕರ Accident – ಕೆಎಸ್ಆರ್ಟಿಸಿ ಬಸ್ ಚಕ್ರಕ್ಕೆ ಸಿಲುಕಿ ತಾಯಿ, ಮಗ ದಾರುಣ ಸಾವು

ವರಮಹಾಲಕ್ಷ್ಮಿ ಹಬ್ಬದ ಸಂಭ್ರಮಕ್ಕಾಗಿ ಪೂಜಾ ಸಾಮಗ್ರಿ ಖರೀದಿಸಿ ಮನೆಗೆ ತೆರಳಲು, ರಸ್ತೆ ದಾಟುತ್ತಿದ್ದ ವೇಳೆ ಕೆಎಸ್ಆರ್ಟಿಸಿ ಬಸ್ ಡಿಕ್ಕಿಯಾಗಿ ತಾಯಿ ಹಾಗೂ ಮಗ ಸ್ಥಳದಲ್ಲೇ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಗೌರಿಬಿದನೂರು ನಗರದ ಅಂಬೇಡ್ಕರ್ ವೃತ್ತದ ಬಳಿ ನಡೆದಿದೆ.
ಮೃತರನ್ನು ಗೌರಿಬಿದನೂರು ತಾಲೂಕಿನ ಕಾದಲವೇಣಿ ಗ್ರಾಮದ ನಾಗಮಣಿ ಹಾಗೂ 14 ವರ್ಷದ ಗಗನ್ ಎಂದು ಗುರುತಿಸಲಾಗಿದೆ.

ಬಸ್ನ ಚಕ್ರಕ್ಕೆ ಸಿಲುಕಿ ದಾರುಣ ಸಾವು!
ಇನ್ನು ನಾಗಮಣಿ ಅವರು ತನ್ನ, ಇಬ್ಬರು ಮಕ್ಕಳೊಂದಿಗೆ ಹಬ್ಬದ ಖರೀದಿಗಾಗಿ ಗೌರಿಬಿದನೂರು ನಗರಕ್ಕೆ ಬಂದು, ಪೂಜಾ ಸಾಮಗ್ರಿಗಳನ್ನು ಖರೀದಿಸಿಕೊಂಡು, ಮನೆಗೆ ವಾಪಸ್ ತೆರಳುವ ವೇಳೆ ಈ ದುರ್ಘಟನೆ ಸಂಭವಿಸಿದೆ.
ಬೆಂಗಳೂರು ಕಡೆಯಿಂದ ಗೌರಿಬಿದನೂರು ಕಡೆಗೆ ಬರುತ್ತಿದ್ದ ಕೆಎಸ್ಆರ್ಟಿಸಿ ಬಸ್ ರಸ್ತೆ ದಾಟುತ್ತಿದ್ದ ಇವರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬಸ್ನ ಚಕ್ರಕ್ಕೆ ಸಿಲುಕಿ ತಾಯಿ ಹಾಗೂ ಓರ್ವ ಮಗ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಕಿರಿಯ ಮಗ ಚಂದನ್ ಎಂಬಾತನಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
READ THIS : ಯುಗಾದಿ ಹಬ್ಬದ ದಿನವೇ ಭೀಕರ Accident – ಬೈಕ್ ಸವಾರ ಸಾವು

ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ಕೊಡಬೇಕೆಂದು ಆಗ್ರಹ
ಇನ್ನು Accident ಆಗ್ತಿದ್ದಂತೆ ಸ್ಥಳಕ್ಕೆ ನೂರಾರು ಜನರು ಜಮಾಯಿಸಿದ್ದು, ಅಂಬೇಡ್ಕರ್ ವೃತ್ತದಲ್ಲಿ ಟ್ರಾಫಿಕ್ ಸಿಗ್ನಲ್ ಸರಿಯಾಗಿ ಕಾರ್ಯನಿರ್ವಹಿಸದಿರುವುದು ಹಾಗೂ ವೃತ್ತದ ಅವ್ಯವಸ್ಥೆಯೇ ಪದೇಪದೇ ಅಪಘಾತಗಳಿಗೆ ಕಾರಣವಾಗುತ್ತಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಕೂಡಲೇ ವಾಹನ ಸಂಚಾರ ಹೆಚ್ಚಿರುವ ಈ ಪ್ರದೇಶದಲ್ಲಿ ಸಮರ್ಪಕ ಟ್ರಾಫಿಕ್ ಸಿಗ್ನಲ್, ವೇಗ ನಿಯಂತ್ರಣ ಹಾಗೂ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು.
ಅಲ್ಧೇ ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ಕೊಡಬೇಕೆಂದು ಆಗ್ರಹಿಸಿದ್ದಾರೆ.

ಮಗನ ಸಾವಿನಿಂದ ಶೋಕದ ವಾತಾವರಣ ನಿರ್ಮಾಣ
ಸದ್ಯ ಮೃತದೇಹಗಳನ್ನು ಗೌರಿಬಿದನೂರು ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದ್ದು, ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಒಟ್ನಲ್ಲಿ ಹಬ್ಬದ ಖರೀದಿಗೆಂದು ನಗರಕ್ಕೆ ಬಂದ ತಾಯಿ ಹಾಗೂ ಮಗನ ಸಾವಿನಿಂದ ಕಾದಲವೇಣಿ ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.
MUST WATCH : ಪ್ರವಾಸಕ್ಕೆ ಹೋದ ತಾಯಿ ಮಗಳು ಕಣ್ಮರೆ – ತುಂಗಭದ್ರಾ ನದಿಯಲ್ಲಿ ಮುಂದುವರಿದ ಶೋಧ




