Ballari : ತೆಕ್ಕಲಕೋಟೆ ಬಳಿ ಉತ್ಖನನದಲ್ಲಿ ಸಿಕ್ತು ಒಂದರ ಪಕ್ಕದಲ್ಲೊಂದು 5 ಸಾವಿರ ವರ್ಷ ಹಳೆಯ ಅಸ್ಥಿಪಂಜರಗಳು!

ಗಣಿ ಜಿಲ್ಲೆ Ballari ಯ ಒಡಲಲ್ಲಿ ಸಾವಿರಾರು ವರ್ಷಗಳ ಇತಿಹಾಸ ಅಡಗಿದೆ ಎನ್ನುವುದಕ್ಕೆ ಮತ್ತೊಂದು ಬಲವಾದ ಸಾಕ್ಷಿ ಸಿಕ್ಕಿದೆ. ಸಿರಗುಪ್ಪ ತಾಲೂಕು ತೆಕ್ಕಲಕೋಟೆ ಪಟ್ಟಣದ ಗೌಡ್ರ ಮೂಲೆ ಬೆಟ್ಟದಲ್ಲಿ ನಡೆಯುತ್ತಿರುವ ಉತ್ಖನನದ ವೇಳೆ ಸುಮಾರು 3,000 ರಿಂದ 5,000 ವರ್ಷಗಳಷ್ಟು ಹಳೆಯದಾದ ಮಾನವನ ಅಸ್ಥಿಪಂಜರಗಳು ಪತ್ತೆಯಾಗಿವೆ.

ಒಂದಲ್ಲ, ಎರಡು ಅಸ್ಥಿಪಂಜರ ಪತ್ತೆ!
ಕಳೆದ ಒಂದು ವಾರದಿಂದ ಈ ಪ್ರದೇಶದಲ್ಲಿ ಉತ್ಖನನ ಕಾರ್ಯ ನಡೆಯುತ್ತಿದ್ದು, ಆರಂಭದಲ್ಲಿ ಮಾನವನ ಮೂಳೆಯೊಂದು ಪತ್ತೆಯಾಗಿತ್ತು. ಇದರಿಂದ ಕುತೂಹಲಗೊಂಡ ಉತ್ಖನನ ತಂಡ ಮಣ್ಣನ್ನು ಇನ್ನಷ್ಟು ಆಳವಾಗಿ ಅಗೆದಾಗ ಸುಮಾರು 5.5 ಅಡಿ ಉದ್ದದ ಪೂರ್ಣ ಪ್ರಮಾಣದ ಮಾನವ ಅಸ್ಥಿಪಂಜರ ಪತ್ತೆಯಾಗಿದೆ. ಅಚ್ಚರಿ ಎಂಬಂತೆ ಇದರ ಪಕ್ಕದಲ್ಲೇ ಮತ್ತೊಂದು ಅಸ್ಥಿಪಂಜರ ಕೂಡ ದೊರೆತಿದ್ದು, ಇತಿಹಾಸ ತಜ್ಞರ ಹುಬ್ಬೇರಿಸಿದೆ.
5000 ವರ್ಷಗಳಹಿಂದಿನಇತಿಹಾಸ
ಈ ಪಳೆಯುಳಿಕೆಗಳು ನವಶಿಲಾಯುಗ (Neolithic) ಹಾಗೂ ಸೂಕ್ಷ್ಮ ಶಿಲಾಯುಗ (Microlithic) ಕಾಲಘಟ್ಟಕ್ಕೆ ಸೇರಿದವುಗಳಾಗಿರಬಹುದು ಎಂದು ಅಂದಾಜಿಸಲಾಗಿದೆ.
ಅಮೆರಿಕದ ಹಾರ್ಟ್ವಿಕ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಹಾಗೂ ಉತ್ಖನನ ತಂಡದ ಸಹ ನಿರ್ದೇಶಕಿ ನಮಿತಾ ಎಸ್. ಸುಗಂಧಿ ಅವರು, “ಇವು ಸುಮಾರು 3,000 ರಿಂದ 5,000 ವರ್ಷಗಳಷ್ಟು ಹಳೆಯದಾಗಿರುವ ಸಾಧ್ಯತೆಯಿದೆ. ಮೃತದೇಹಗಳ ಮೇಲೆ ಕಲ್ಲುಗಳನ್ನು ಇಟ್ಟು ಶವಸಂಸ್ಕಾರ ಮಾಡಿರುವುದು ಇಲ್ಲಿನ ಪ್ರಮುಖ ವೈಶಿಷ್ಟ್ಯವಾಗಿದೆ” ಎಂದು ತಿಳಿಸಿದ್ದಾರೆ.
ಇದನ್ನು ಓದಿ : ಕೈಕೊಟ್ಟ 3 ವರ್ಷ ಪ್ರೀತಿಸಿದ ಪ್ರೇಯಸಿ – ಡೆತ್ ನೋಟ್ ಬರೆದಿಟ್ಟು ಬಾಡಿ ಬಿಲ್ಡರ್ Suicide

ಮಡಿಕೆ ಚೂರುಗಳು, ಆಯುಧ ಬಳಕೆಯ ಸಾಕ್ಷ್ಯ
ಇನ್ನು ಅಸ್ಥಿಪಂಜರಗಳ ಸುತ್ತಮುತ್ತ ಮಡಿಕೆ ಚೂರುಗಳು ಪತ್ತೆಯಾಗಿದ್ದು, ಈ ಭಾಗದಲ್ಲಿ ಪ್ರಾಚೀನ ಮಾನವರು ಆಯುಧಗಳನ್ನು ಬಳಸುತ್ತಿದ್ದರೆಂಬುದಕ್ಕೆ ಪೂರಕ ಸಾಕ್ಷ್ಯಗಳು ಲಭ್ಯವಾಗಿವೆ.
ಇದರಿಂದ ತೆಕ್ಕಲಕೋಟೆ ಪ್ರದೇಶವು ಪ್ರಾಗೈತಿಹಾಸಿಕ ಕಾಲದಲ್ಲಿ ದೊಡ್ಡ ಮಾನವ ನೆಲೆಯಾಗಿರಬಹುದೆಂಬ ಅಭಿಪ್ರಾಯ ವ್ಯಕ್ತವಾಗಿದೆ.
ಕಾರ್ಬನ್ ಡೇಟಿಂಗ್ಗೆ ನಿರ್ಧಾರ
ಘಟನಾ ಸ್ಥಳಕ್ಕೆ ಪರಂಪರೆ ಇಲಾಖೆಯ ಉಪ ನಿರ್ದೇಶಕ ಹಾಗೂ ಉತ್ಖನನ ಕಾರ್ಯದ ನಿರ್ದೇಶಕ ಆರ್. ಶೇಜೇಶ್ವರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪತ್ತೆಯಾದ ಪಳೆಯುಳಿಕೆಗಳ ನಿಖರ ಕಾಲಘಟ್ಟವನ್ನು ತಿಳಿಯಲು ಇವುಗಳನ್ನು ಕಾರ್ಬನ್ ಡೇಟಿಂಗ್ ಪರೀಕ್ಷೆಗೆ ಒಳಪಡಿಸಲು ನಿರ್ಧರಿಸಲಾಗಿದೆ. ಸದ್ಯ ಉತ್ಖನನ ಹಾಗೂ ಸಂಶೋಧನಾ ಕಾರ್ಯ ಮುಂದುವರಿದಿದೆ.

ಇದನ್ನು ನೋಡಿ : PRAJASHAKTHI TVಯ ಒಂದೇ ವರದಿ ಬಳಿಕ ಓಡೋಡಿ ಬಂದ ಅಧಿಕಾರಿಗಳು




