ಭಾಲ್ಕಿಯ ನಿವಾಸದಲ್ಲಿ Bhimanna Khandre ನಿಧನ.

ಮಾಜಿ ಸಚಿವರು, ವೀರಶೈವ ಮಹಾಸಭೆಯ ಗೌರವ ಅಧ್ಯಕ್ಷರಾಗಿದ್ದ ಶತಾಯುಷಿ ಡಾ. ಭೀಮಣ್ಣ ಖಂಡ್ರೆ (102) ಅವರು ವಯೋಸಹಜ ಅನಾರೋಗ್ಯದಿಂದ ಶುಕ್ರವಾರ ರಾತ್ರಿ ಬೀದರ್ನಲ್ಲಿ ನಿಧನರಾಗಿದ್ದಾರೆ.
102ನೇ ವಯಸ್ಸಿನಲ್ಲಿ ಕೊನೆಯುಸಿರು
ಉಸಿರಾಟದ ತೊಂದರೆ ಹಾಗೂ ರಕ್ತದೊತ್ತಡದಿಂದಾಗಿ ಕೆಲ ದಿನಗಳಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರನ್ನು ಇತ್ತೀಚೆಗೆ ಮನೆಗೆ ಕರೆತರಲಾಗಿತ್ತು. ಆದರೆ ಆರೋಗ್ಯದಲ್ಲಿ ಸುಧಾರಣೆ ಕಾಣದೇ ಕೊನೆಯುಸಿರೆಳೆದಿದ್ದಾರೆ. ಇನ್ನು ಭೀಮಣ್ಣ ಅವರ ಅಂತ್ಯಕ್ರಿಯೆ ಇಂದೇ ಭಾಲ್ಕಿಯಲ್ಲಿ ನಡೆಯಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಗಣ್ಯರಿಂದ ಸಂತಾಪ
ಆರು ದಶಕಗಳಿಗೂ ಹೆಚ್ಚು ಕಾಲ ಸಾರ್ವಜನಿಕ ಜೀವನದಲ್ಲಿ ಸಕ್ರಿಯರಾಗಿದ್ದ ಡಾ. ಭೀಮಣ್ಣ ಖಂಡ್ರೆ ಅವರು ಜನಪರ ಕಾರ್ಯಕ್ರಮಗಳು, ರೈತಪರ ಹೋರಾಟಗಳು ಹಾಗೂ ಸಾಮಾಜಿಕ ಸೇವೆಗಳ ಮೂಲಕ ಅಪಾರ ಜನಪ್ರಿಯತೆ ಗಳಿಸಿದ್ದರು. ಅವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ರಾಜಕೀಯ ಗಣ್ಯರು ಸಂತಾಪ ಸೂಚಿಸಿದ್ದಾರೆ.
Bhimanna Khandre ಖಂಡ್ರೆ ಅವರು ಪುತ್ರರಾದ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಹಾಗೂ ಬೀದರ್ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ, ಮೊಮ್ಮಗ ಬೀದರ್ ಸಂಸದ ಸಾಗರ್ ಖಂಡ್ರೆ ಸೇರಿದಂತೆ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ಇದನ್ನು ಓದಿ : ದ್ವಿಚಕ್ರ ವಾಹನಕ್ಕೆ ಸಿಲುಕಿದ ಗಾಳಿಪಟದ ದಾರ – ದಂಪತಿ, ಪುತ್ರಿ ಸಾವು..!!

ರಾಜಕೀಯ ಪಯಣ
1953ರಲ್ಲಿ ಭಾಲ್ಕಿ ಪುರಸಭೆಯ ಪ್ರಥಮ ಚುನಾಯಿತ ಅಧ್ಯಕ್ಷರಾಗುವ ಮೂಲಕ ರಾಜಕೀಯ ಜೀವನ ಆರಂಭಿಸಿದ ಭೀಮಣ್ಣ ಖಂಡ್ರೆ ಅವರು, 1962ರಲ್ಲಿ ಮೊದಲ ಬಾರಿಗೆ ವಿಧಾನಸಭೆಗೆ ಆಯ್ಕೆಯಾದರು.
ನಾಲ್ಕು ಬಾರಿ ಶಾಸಕರಾಗಿ, ಎರಡು ಬಾರಿ ವಿಧಾನ ಪರಿಷತ್ ಸದಸ್ಯರಾಗಿ ಸೇವೆ ಸಲ್ಲಿಸಿದ ಅವರು, ಎಂ. ವೀರಪ್ಪ ಮೊಯ್ಲಿ ಅವರ ಸಚಿವ ಸಂಪುಟದಲ್ಲಿ ಸಾರಿಗೆ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.
ಸಹಕಾರಿ ಮತ್ತು ಅಭಿವೃದ್ಧಿ ಕಾರ್ಯಗಳು
ಸಹಕಾರಿ ಕ್ಷೇತ್ರದಲ್ಲಿ ಮಹತ್ವದ ಪಾತ್ರವಹಿಸಿದ್ದ ಅವರು, ಹಳ್ಳಿಖೇಡ್ನ ಬೀದರ್ ಸಹಕಾರಿ ಸಕ್ಕರೆ ಕಾರ್ಖಾನೆ ಹಾಗೂ ಹುಣಜಿಯ ಮಹಾತ್ಮಾ ಗಾಂಧೀ ಸಕ್ಕರೆ ಕಾರ್ಖಾನೆಯ ಸ್ಥಾಪಕ ಅಧ್ಯಕ್ಷರಾಗಿದ್ದರು. ನಾರಂಜಾ ಮತ್ತು ಕಾರಂಜಾ ನೀರಾವರಿ ಯೋಜನೆಗಳ ಅನುಷ್ಠಾನದಲ್ಲೂ ಅವರ ಕೊಡುಗೆ ಮಹತ್ವದ್ದಾಗಿದೆ.

ಸ್ವಾತಂತ್ರ್ಯ ಹೋರಾಟ ಮತ್ತು ಏಕೀಕರಣ ಸೇವೆ
ಸ್ವಾತಂತ್ರ್ಯ ಸೇನಾನಿಯಾಗಿದ್ದ ಡಾ. ಭೀಮಣ್ಣ ಖಂಡ್ರೆ ಅವರು ಹೈದ್ರಾಬಾದ್ ವಿಮೋಚನಾ ಹೋರಾಟದಲ್ಲಿ ರಜಾಕಾರರ ದೌರ್ಜನ್ಯಕ್ಕೆ ವಿರುದ್ಧವಾಗಿ ಹೋರಾಡಿದರು.
ರಾಜ್ಯ ಏಕೀಕರಣದ ಸಮಯದಲ್ಲಿ ಬೀದರ್ ಜಿಲ್ಲೆಯನ್ನು ಕರ್ನಾಟಕದಲ್ಲೇ ಉಳಿಸಲು ಶ್ರಮಿಸಿದ ಅವರು, ಈ ಸೇವೆಗೆ ಸುವರ್ಣ ಏಕೀಕರಣ ರಾಜ್ಯ ಪ್ರಶಸ್ತಿಗೆ ಭಾಜನರಾಗಿದ್ದರು.
ಶಿಕ್ಷಣ ಮತ್ತು ಸಮಾಜಸೇವೆ
ಶಾಂತಿವರ್ಧಕ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾಗಿ ಜಿಲ್ಲೆಯ ಹೆಣ್ಣುಮಕ್ಕಳ ಉನ್ನತ ಶಿಕ್ಷಣಕ್ಕೆ ವಿಶೇಷ ಒತ್ತು ನೀಡಿದ ಅವರು, ಬೀದರ್ನಲ್ಲಿ ಅಕ್ಕಮಹಾದೇವಿ ಕಾಲೇಜು ಹಾಗೂ ಭಾಲ್ಕಿಯಲ್ಲಿ ಎಂಜಿನಿಯರಿಂಗ್ ಕಾಲೇಜು ಸ್ಥಾಪಿಸಿದರು.
ತಮ್ಮ ಸ್ವಕ್ಷೇತ್ರದಲ್ಲಿ ಎಂಜಿನಿಯರಿಂಗ್ ಕಾಲೇಜು ಸ್ಥಾಪಿಸುವ ಉದ್ದೇಶಕ್ಕಾಗಿ ಸಚಿವ ಸ್ಥಾನವನ್ನೇ ತ್ಯಾಗ ಮಾಡಿದ ಘಟನೆ ಅವರ ತ್ಯಾಗಮಯ ಬದುಕಿಗೆ ಸಾಕ್ಷಿಯಾಗಿದೆ.

ಸಂಘಟನಾ ನಾಯಕತ್ವ
ವೀರಶೈವ ಲಿಂಗಾಯತ ಮಹಾಸಭೆಯ ರಾಷ್ಟ್ರೀಯ ಅಧ್ಯಕ್ಷರಾಗಿ ಸಮುದಾಯವನ್ನು ಒಗ್ಗೂಡಿಸುವಲ್ಲಿ ಶ್ರಮಿಸಿದ ಡಾ. ಭೀಮಣ್ಣ ಖಂಡ್ರೆ ಅವರು, ಕೆಲವೇ ಸಾವಿರ ಸದಸ್ಯರಿದ್ದ ಮಹಾಸಭೆಯನ್ನು ಲಕ್ಷಾಂತರ ಸದಸ್ಯರ ಸಂಘಟನೆಯಾಗಿ ಬೆಳೆಸುವ ಮೂಲಕ ತಮ್ಮ ಸಂಘಟನಾ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದರು.
ಇದನ್ನು ನೋಡಿ : ಯಪ್ಪಾ..ಇವರು ಅಂತಿಥಾ ಕಳ್ಳರಲ್ಲ..! – ಕೇಬಲ್ ವೈರ್ ಕದಿಯುತ್ತಿದ್ದ ಗ್ಯಾಂಗ್




