ಹಬ್ಬದ ಸಂಭ್ರಮದ ನಡುವೆಯೇ ಮತ್ತೊಂದು ಹೃದಯವಿದ್ರಾವಕ ದುರಂತ Kite String Accident ನಡೆದಿದೆ.

Kite String Accident : ದ್ವಿಚಕ್ರ ವಾಹನಕ್ಕೆ ಗಾಳಿಪಟದ ದಾರ ಸಿಲುಕಿಕೊಂಡ ಪರಿಣಾಮ, ಫ್ಲೈಓವರ್ನ ಸುಮಾರು 70 ಅಡಿ ಎತ್ತರದಿಂದ ದಂಪತಿ ಹಾಗೂ ಅವರ ಪುಟ್ಟ ಪುತ್ರಿ ಕೆಳಗೆ ಬಿದ್ದು ಸಾವನ್ನಪ್ಪಿರುವ ಘಟನೆ ಗುಜರಾತ್ನ ಸೂರತ್ ಜಿಲ್ಲೆಯಲ್ಲಿ ಸಂಭವಿಸಿದೆ.
ಈ ಘಟನೆ ಸಾರ್ವಜನಿಕರಲ್ಲಿ ತೀವ್ರ ಆಘಾತ ಮೂಡಿಸಿದೆ.
ಬುಧವಾರ (ಜನವರಿ 14) ಸೂರತ್ನ ಚಂದ್ರಶೇಖರ್ ಆಜಾದ್ ಫ್ಲೈಓವರ್ ಮೇಲೆ ಈ ದುರ್ಘಟನೆ ನಡೆದಿದೆ. ಮಕರ ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ ಬೈಕ್ನಲ್ಲಿ ಸವಾರಿ ಮಾಡುತ್ತಿದ್ದ ವೇಳೆ, ಅಚಾನಕ್ ಗಾಳಿಪಟದ ದಾರವು ಬೈಕ್ ಸವಾರನ ಕುತ್ತಿಗೆ ಹಾಗೂ ದೇಹದ ಸುತ್ತ ಸಿಲುಕಿಕೊಂಡಿದೆ.
ಇದರಿಂದ ಬೈಕ್ ನಿಯಂತ್ರಣ ತಪ್ಪಿ ಸೇತುವೆಯ ತಡೆಗೋಡೆಗೆ ಡಿಕ್ಕಿ ಹೊಡೆದು, ಮೂವರೂ ಫ್ಲೈಓವರ್ನಿಂದ ಕೆಳಗೆ ಬಿದ್ದರು.

ಮೃತರ ವಿವರ
ಈ ದುರಂತದಲ್ಲಿ ರೆಹಾನ್ ಶೇಖ್ (35) ಪತ್ನಿ ರೆಹಾನಾ 7 ವರ್ಷದ ಪುತ್ರಿ ಆಯಿಷಾ ಮೃತಪಟ್ಟಿದ್ದಾರೆ.
ತಂದೆ ಹಾಗೂ ಮಗಳು ಸ್ಥಳದಲ್ಲೇ ಸಾವನ್ನಪ್ಪಿದ್ದು, ತಾಯಿ ರೆಹಾನಾ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಜನವರಿ 16ರಂದು ರೆಹಾನಾ ಕೂಡ ಮೃತಪಟ್ಟಿದ್ದಾರೆ.
ಮೃತ ಮಹಿಳೆ ರೆಹಾನಾ ಸಾವಿಗೆ ಮುನ್ನ ನೀಡಿದ ಹೇಳಿಕೆಯಲ್ಲಿ, “ಫ್ಲೈಓವರ್ ಮೇಲೆ ಸವಾರಿ ಮಾಡುತ್ತಿದ್ದಾಗ ಗಾಳಿಪಟದ ದಾರವು ನನ್ನ ಪತಿಯ ಕುತ್ತಿಗೆಗೆ ಸುತ್ತಿಕೊಂಡಿತು. ಅದನ್ನು ತೆಗೆದುಹಾಕಲು ಪ್ರಯತ್ನಿಸುವಾಗ ಬೈಕ್ ನಿಯಂತ್ರಣ ತಪ್ಪಿತು”
ಎಂದು ತಿಳಿಸಿದ್ದಾರೆ.
ಬೈಕ್ ಡಿಕ್ಕಿ ಹೊಡೆದ ಬಳಿಕ ಮೂವರೂ 70 ಅಡಿ ಆಳಕ್ಕೆ ಬಿದ್ದರು. ಕೆಳಗೆ ನಿಂತಿದ್ದ ಆಟೋರಿಕ್ಷಾದ ಮೇಲೆ ಬಿದ್ದ ಪರಿಣಾಮ ತಾಯಿ ಕೆಲಕಾಲ ಬದುಕುಳಿದರು, ಆದರೆ ತೀವ್ರ ಗಾಯಗಳಿಂದಾಗಿ ನಂತರ ಮೃತಪಟ್ಟರು.
ಬೈಕ್ ಬಿದ್ದ ಪರಿಣಾಮ ಆಟೋರಿಕ್ಷಾ ಸಂಪೂರ್ಣ ನಜ್ಜುಗುಜ್ಜಾಗಿದೆ. ಆಟೋ ಚಾಲಕ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾನೆ.

ಗಾಳಿಪಟದಿಂದ ಗುಜರಾತ್ನಲ್ಲಿ ಸರಣಿ ಅಪಘಾತಗಳು
ಮಕರ ಸಂಕ್ರಾಂತಿ ಹಬ್ಬದ ಸಂಭ್ರಮದ ನಡುವೆ ಗುಜರಾತ್ನಲ್ಲಿ ಗಾಳಿಪಟದ ದಾರದಿಂದ ಸರಣಿ ಅಪಘಾತಗಳು ವರದಿಯಾಗಿವೆ.
- ಸೂರತ್ ಜಿಲ್ಲೆಯ ಆನಂದ್ ವಿಲ್ಲಾದಲ್ಲಿ ಸೈಕಲ್ ಸವಾರಿ ಮಾಡುತ್ತಿದ್ದ 8 ವರ್ಷದ ಬಾಲಕ ಗಾಳಿಪಟದ ದಾರ ಕುತ್ತಿಗೆಗೆ ಸಿಲುಕಿ ಮೃತಪಟ್ಟಿದ್ದಾನೆ
- ಭರೂಚ್ ಜಿಲ್ಲೆಯ ಪಿಲುಂದ್ರ ಗ್ರಾಮದಲ್ಲಿ ರಾಹುಲ್ ಪರ್ಮಾರ್ (35) ಮೋಟಾರ್ಸೈಕಲ್ ಸವಾರಿ ವೇಳೆ ಗಾಳಿಪಟದ ದಾರದಿಂದ ಗಂಟಲು ಸೀಳಿ ಸಾವನ್ನಪ್ಪಿದ್ದಾರೆ
- ಆನಂದ್ ಜಿಲ್ಲೆಯಲ್ಲಿ ಮತ್ತೊಬ್ಬ 7 ವರ್ಷದ ಬಾಲಕ ಗಂಭೀರ ಗಾಯಗಳಿಂದ ಮೃತಪಟ್ಟಿದ್ದಾನೆ
- ವಾಘೋಡಿಯಾ ಪ್ರದೇಶದಲ್ಲಿ ವಿದ್ಯುತ್ ಕಂಬದಿಂದ ಗಾಳಿಪಟ ತೆಗೆಯಲು ಯತ್ನಿಸಿದ 33 ವರ್ಷದ ವ್ಯಕ್ತಿ ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿದ್ದಾರೆ




