Sagara ತಾಲೂಕಿನ ಹಾಳಸಸಿ ಗ್ರಾಮದಲ್ಲಿ 6 ವರ್ಷದ ಬಾಲಕ ತ್ರಿಲೋಕ್ ಜೈನ್ ಹೃದಯಾಘಾತದಿಂದ ಮೃತಪಟ್ಟಿರುವ ದುರ್ಘಟನೆ ನಡೆದಿದೆ.

ಶಿವಮೊಗ್ಗ ಜಿಲ್ಲೆಯ Sagara ತಾಲೂಕಿನ ಹಾಳಸಸಿ ಗ್ರಾಮದಲ್ಲಿ ಹೃದಯವಿದ್ರಾವಕ ಘಟನೆ ನಡೆದಿದ್ದು, ಹೃದಯಾಘಾತದಿಂದ 6 ವರ್ಷದ ಬಾಲಕ ಮೃತಪಟ್ಟಿದ್ದಾನೆ. ಈ ದುರ್ಘಟನೆಯು ಕುಟುಂಬಸ್ಥರು ಹಾಗೂ ಗ್ರಾಮಸ್ಥರನ್ನು ತೀವ್ರ ದುಃಖಕ್ಕೆ ದೂಡಿದೆ.
ಮೃತ ಬಾಲಕನನ್ನು ತ್ರಿಲೋಕ್ ಜೈನ್ (6) ಎಂದು ಗುರುತಿಸಲಾಗಿದೆ. ಕೊಡನವಳ್ಳಿ ಗ್ರಾಮದ ಗೌತಮ್ ಜೈನ್ ಮತ್ತು ಶಿಲ್ಪಾ ದಂಪತಿಯ ಪುತ್ರನಾಗಿರುವ ತ್ರಿಲೋಕ್, ಹಾಳಸಸಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಒಂದನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ.
MUST READ : ರಾಮನಗರ ಶಾಸಕ ಇಕ್ಬಾಲ್ ಹುಸೇನ್ಗೆ ಹೃದಯಾಘಾತ

ಶನಿವಾರ ಮಧ್ಯಾಹ್ನ ಶಾಲೆ ಮುಗಿಯುವ ವೇಳೆಯಲ್ಲಿ ತ್ರಿಲೋಕ್ ಏಕಾಏಕಿ ಶಾಲಾ ಆವರಣದಲ್ಲಿ ಕುಸಿದು ಬಿದ್ದಿದ್ದಾನೆ. ತಕ್ಷಣವೇ ಶಿಕ್ಷಕರು ಹಾಗೂ ಸ್ಥಳೀಯರು ಬಾಲಕನನ್ನು ಆಸ್ಪತ್ರೆಗೆ ಕರೆದೊಯ್ಯಲು ಮುಂದಾಗಿದ್ದರು. ಆದರೆ, ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆಯೇ ಬಾಲಕ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಹೃದಯಾಘಾತವೇ ಸಾವಿಗೆ ಕಾರಣ ಎನ್ನಲಾಗಿದೆ.

ಈ ಘಟನೆ ತಿಳಿಯುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಪುಟ್ಟ ಮಗನನ್ನು ಕಳೆದುಕೊಂಡ ಪೋಷಕರ ದುಃಖ ಕಂಡು ಗ್ರಾಮಸ್ಥರ ಕಣ್ಣಲ್ಲೂ ನೀರು ತುಂಬಿದೆ. ಶಾಲಾಭಿವೃದ್ಧಿ ಸಮಿತಿ ಸದಸ್ಯರು, ಮುಖ್ಯ ಶಿಕ್ಷಕರು, ಶಿಕ್ಷಕ ವೃಂದ ಹಾಗೂ ಗ್ರಾಮಸ್ಥರು ಬಾಲಕನ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.
ಹಾಳಸಸಿ ಗ್ರಾಮದಲ್ಲಿ ಈ ಘಟನೆ ಶೋಕದ ವಾತಾವರಣ ಸೃಷ್ಟಿಸಿದ್ದು, ಬಾಲಕನ ಅಕಾಲಿಕ ಸಾವಿಗೆ ಎಲ್ಲರೂ ಸಂತಾಪ ಸೂಚಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿ ಹೃದಯ ಸಂಬಂಧಿ ಸಮಸ್ಯೆಗಳ ಬಗ್ಗೆ ಆತಂಕ ಹೆಚ್ಚುತ್ತಿರುವ ಬೆನ್ನಲ್ಲೇ ಈ ದುರ್ಘಟನೆ ನಡೆದಿರುವುದು ಸಾರ್ವಜನಿಕರಲ್ಲಿ ಕಳವಳ ಮೂಡಿಸಿದೆ.
MUST WATCH : ಕಾಂಗ್ರೆಸ್ ಶಾಸಕನಿಗೆ ದಿಢೀರ್ ಹೃದಯಾಘಾತ… ಖಾಸಗಿ ಆಸ್ಪತ್ರೆಗೆ ದಾಖಲು..




