
ನಾಪತ್ತೆಯಾಗಿದ್ದ ಇಬ್ಬರು ಯುವತಿಯರು 8 ತಿಂಗಳ ಬಳಿಕ ಪತ್ತೆ!
ಬೆಂಗಳೂರು ನಗರದ ವಿದ್ಯಾರಣ್ಯಪುರದಿಂದ 8 ತಿಂಗಳ ಹಿಂದೆ ನಾಪತ್ತೆಯಾಗಿದ್ದ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯರಾದ ತನಿಷ್ಕಾ ಮತ್ತು ತೇಜಸ್ವಿನಿಯನ್ನು ಸಿಐಡಿ ಅಧಿಕಾರಿಗಳ ತಂಡ ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದೆ. ಸದ್ಯ ಇಬ್ಬರು ಯುವತಿಯರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲು ಸಿದ್ಧತೆ ನಡೆಯುತ್ತಿದೆ.
ವಿದ್ಯಾರಣ್ಯಪುರದಿಂದ ನಾಪತ್ತೆ!
ತನಿಷ್ಕಾ ಮತ್ತು ತೇಜಸ್ವಿನಿ ಜ.31ರಂದು ವಿದ್ಯಾರಣ್ಯಪುರದಿಂದ ನಾಪತ್ತೆಯಾಗಿದ್ದರು. ಈ ಸಂಬಂಧ ಪೋಷಕರು ನೀಡಿದ ದೂರಿನ ಮೇರೆಗೆ ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಹಲವು ತಿಂಗಳುಗಳ ಕಾಲ ಹುಡುಕಾಟ ನಡೆಸಿದರೂ ಯುವತಿಯರ ಬಗ್ಗೆ ಯಾವುದೇ ಸುಳಿವು ಸಿಗದ ಹಿನ್ನೆಲೆಯಲ್ಲಿ, ಒಬ್ಬ ಯುವತಿಯ ಕುಟುಂಬಸ್ಥರು ಹೈಕೋರ್ಟ್ ಮೆಟ್ಟಿಲೇರಿದ್ದರು.
ಮೂರು ತಿಂಗಳಿಂದ ಯುವತಿಯರಿಗಾಗಿ ಹುಡುಕಾಟ
ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್, ಸುಮಾರು ಐದಾರು ತಿಂಗಳ ಬಳಿಕ ಪ್ರಕರಣವನ್ನು ಸಿಐಡಿಗೆ ವರ್ಗಾಯಿಸುವಂತೆ ನಿರ್ದೇಶನ ನೀಡಿತ್ತು. ಅದರಂತೆ ತನಿಖೆ ಕೈಗೆತ್ತಿಕೊಂಡ ಸಿಐಡಿ ಅಧಿಕಾರಿಗಳ ತಂಡ ಕಳೆದ ಮೂರು ತಿಂಗಳಿಂದ ಇಬ್ಬರು ಯುವತಿಯರಿಗಾಗಿ ಹುಡುಕಾಟ ನಡೆಸಿತ್ತು.
READ THIS : ಸರ್ಕಾರಿ ಜಮೀನಿಗೂ ಬೆಳೆವಿಮೆ ಪರಿಹಾರ – ರೈತರ ಹೆಸರಲ್ಲಿ ಲಕ್ಷ ಲಕ್ಷ ಲೂಟಿ?

ಮಲೆ ಮಹದೇಶ್ವರ ಬೆಟ್ಟದಲ್ಲಿ ಸುಳಿವು
ತನಿಖೆ ವೇಳೆ ಇಬ್ಬರೂ ಯುವತಿಯರು ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳಿದ್ದ ಸುಳಿವು ಅಧಿಕಾರಿಗಳಿಗೆ ದೊರೆತಿತ್ತು. ಅಲ್ಲಿ ಇಬ್ಬರು ಯುವತಿಯರು ಒಂದು ಮಗುವಿನೊಂದಿಗೆ ಆಟವಾಡುತ್ತಿದ್ದಾಗ, ಮಗುವಿನ ತಾಯಿ ಅವರೊಂದಿಗೆ ಸೆಲ್ಫಿ ತೆಗೆದುಕೊಂಡಿದ್ದರು. ಫೋಟೋ ಸೇರಿದಂತೆ ಲಭ್ಯವಾದ ಮಾಹಿತಿಯನ್ನು ಆಧರಿಸಿ ತನಿಖೆ ಮುಂದುವರಿಸಿದರೂ ಯುವತಿಯರ ನಿಖರ ಸ್ಥಳ ಪತ್ತೆಯಾಗಿರಲಿಲ್ಲ.
ಹೊಸ ಸಿಮ್ ಕಾರ್ಡ್ನಿಂದ ಸಿಕ್ಕಿತು ಸುಳಿವು
ಇತ್ತೀಚೆಗೆ ಒಬ್ಬ ಯುವತಿ ಹೊಸ ಸಿಮ್ ಕಾರ್ಡ್ ಖರೀದಿಸಲು ತನ್ನ ಆಧಾರ್ ಕಾರ್ಡ್ ಬಳಸಿದ್ದಳು. ಈ ವೇಳೆ ಆಧಾರ್ ಸಂಖ್ಯೆಯ ಬಳಕೆಯ ಕುರಿತು ಸರ್ವಿಸ್ ಪ್ರೊವೈಡರ್ನಿಂದ ಸಿಐಡಿ ಅಧಿಕಾರಿಗಳಿಗೆ ಮಾಹಿತಿ ಲಭ್ಯವಾಗಿದೆ. ಈ ಮಾಹಿತಿಯನ್ನು ಆಧರಿಸಿ ತನಿಖೆ ನಡೆಸಿದ ಅಧಿಕಾರಿಗಳು ಸಂಬಂಧಪಟ್ಟ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದಾಗ, ಇಬ್ಬರು ಯುವತಿಯರು ಪತ್ತೆಯಾಗಿದ್ದಾರೆ.
ಒಬ್ಬಾಕೆ ಈಗ ಗರ್ಭಿಣಿ!
ಲಭ್ಯವಾದ ಮಾಹಿತಿಯ ಪ್ರಕಾರ, ಮಲೆ ಮಹದೇಶ್ವರ ಬೆಟ್ಟದಲ್ಲಿದ್ದ ಸಂದರ್ಭದಲ್ಲಿ ಒಬ್ಬ ಯುವತಿಗೆ ಕನಕಪುರ ತಾಲೂಕಿನ ಯುವಕನೊಬ್ಬನ ಪರಿಚಯವಾಗಿತ್ತು. ಬಳಿಕ ಇಬ್ಬರೂ ಆ ಯುವಕನೊಂದಿಗೆ ತೆರಳಿದ್ದರು. ಯುವಕನ ಕುಟುಂಬದವರು ವಿಚಾರಿಸಿದಾಗ, ‘ತಾವಿಬ್ಬರೂ ಸಹೋದರಿಯರು, ತಮಗೆ ತಂದೆ-ತಾಯಿ ಸೇರಿದಂತೆ ಯಾರೂ ಇಲ್ಲ’ ಎಂದು ಹೇಳಿದ್ದರು.
ನಂತರ ಒಬ್ಬ ಯುವತಿಯು ಅದೇ ಪರಿಚಯಸ್ಥ ಯುವಕನನ್ನು ವಿವಾಹವಾಗಿದ್ದಾಳೆ. ಮದುವೆಯ ಬಳಿಕ ಇಬ್ಬರೂ ಒಟ್ಟಿಗೆ ವಾಸಿಸುತ್ತಿದ್ದು, ಮತ್ತೋರ್ವ ಯುವತಿಯನ್ನೂ ತಮ್ಮೊಂದಿಗೆ ಇರಿಸಿಕೊಂಡಿದ್ದರು. ವಿವಾಹವಾಗಿರುವ ಯುವತಿ ಸದ್ಯ ಗರ್ಭಿಣಿಯಾಗಿರುವುದು ತನಿಖೆಯಲ್ಲಿ ತಿಳಿದುಬಂದಿದೆ.

MUST WATCH : MLA – MLC ನಡುವೆ ಮಾತಿನ ಚಕಮಕಿ – ಗುದ್ದಲಿ ಪೂಜೆ ವೇಳೆ ನಡೀತು ಹೈಡ್ರಾಮಾ.!




