ಟೈಟಾನ್ಸ್ ಮುಳುಗಿಸಿದ ಕೊಹ್ಲಿ| ಈ ಸಲವೂ ಕಪ್ ನಮ್ದೇ, ಸತತ 2ನೇ ಬಾರಿ RCB ಚಾಂಪಿಯನ್!

ಅಹಮದಾಬಾದ್ನಲ್ಲಿರುವ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ IPL Final ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಅದ್ಭುತ ಪ್ರದರ್ಶನದ ಮೂಲಕ ಗುಜರಾತ್ ಟೈಟನ್ಸ್ ವಿರುದ್ಧ 5 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿ ಸತತ ಎರಡನೇ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದೆ.
155 ರನ್ಗಳ ಸಾಧಾರಣ ಮೊತ್ತ
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟಾನ್ಸ್, ಆರ್ಸಿಬಿ ಬೌಲರ್ಗಳ ಶಿಸ್ತುಬದ್ಧ ದಾಳಿಗೆ ಮಣಿದು 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 155 ರನ್ಗಳ ಸಾಧಾರಣ ಮೊತ್ತ ಕಲೆಹಾಕಿತು. ಪ್ರತಿಯಾಗಿ ಬ್ಯಾಟಿಂಗ್ ನಡೆಸಿದ RCB, ಇನ್ನೂ 12 ಎಸೆತಗಳು ಬಾಕಿ ಇರುವಂತೆಯೇ 5 ವಿಕೆಟ್ ಕಳೆದುಕೊಂಡು 161 ರನ್ಗಳನ್ನು ಗಳಿಸಿ ಗುರಿ ತಲುಪಿತು.

ಟೈಟಾನ್ಸ್ ಮುಳುಗಿಸಿದ ಕೊಹ್ಲಿ
ಗೆಲುವಿನ ರೂವಾರಿ ಆಗಿ ಹೊರಹೊಮ್ಮಿದ ವಿರಾಟ್ ಕೊಹ್ಲಿ ಆರಂಭಿಕ ಆಟಗಾರನಾಗಿ ಕಣಕ್ಕಿಳಿದು ಅಜೇಯ 75 ರನ್ಗಳ ಅಮೋಘ ಇನ್ನಿಂಗ್ಸ್ ಆಡಿದರು. ಕೇವಲ 42 ಎಸೆತಗಳಲ್ಲಿ 9 ಬೌಂಡರಿ ಹಾಗೂ 3 ಸಿಕ್ಸರ್ಗಳ ನೆರವಿನಿಂದ ಅವರು ತಂಡವನ್ನು ವಿಜಯದ ದಡ ಸೇರಿಸಿದರು.
ಕೊಹ್ಲಿ ಮತ್ತು ಟೀಮ್ ಡೇವಿಡ್ ಜೊತೆಯಾಟ ಆರ್ಸಿಬಿಗೆ ನೆರವು
ಆರ್ಸಿಬಿಗೆ ಆರಂಭದಲ್ಲೇ ವೇಗದ ಚಾಲನೆ ನೀಡಿದ ವೆಂಕಟೇಶ್ ಐಯ್ಯರ್ 16 ಎಸೆತಗಳಲ್ಲಿ 32 ರನ್ಗಳ ಕೊಡುಗೆ ನೀಡಿದರು. ಕೊಹ್ಲಿ ಮತ್ತು ಅಯ್ಯರ್ ಮೊದಲ ವಿಕೆಟ್ಗೆ 62 ರನ್ಗಳ ಜೊತೆಯಾಟವಾಡಿ ತಂಡಕ್ಕೆ ಭದ್ರ ಅಡಿಪಾಯ ಹಾಕಿದರು. ಬಳಿಕ ರಶೀದ್ ಖಾನ್ ಒಂದೇ ಓವರ್ನಲ್ಲಿ ರಜತ್ ಪಾಟೀದಾರ್ ಹಾಗೂ ಕೃನಾಲ್ ಪಾಂಡ್ಯ ವಿಕೆಟ್ಗಳನ್ನು ಕಬಳಿಸಿ ಪಂದ್ಯದಲ್ಲಿ ರೋಚಕತೆ ಮೂಡಿಸಿದರು. ಆದರೆ ಕೊಹ್ಲಿ ಮತ್ತು ಟೀಮ್ ಡೇವಿಡ್ ಅವರ ಜವಾಬ್ದಾರಿಯುತ ಜೊತೆಯಾಟ ಆರ್ಸಿಬಿಗೆ ನೆರವಾಯಿತು.

ಇದನ್ನು ಓದಿ : IPL Final |ಚಾಂಪಿಯನ್, ರನ್ನರ್ಅಪ್ ತಂಡಕ್ಕೆ ಸಿಗುವ ಬಹುಮಾನದ ಮೊತ್ತ ಎಷ್ಟು?
ಆರಂಭದಲ್ಲೇ ಆಘಾತ
ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟಾನ್ಸ್ ಪರ ನಾಯಕ ಶುಭ್ಮನ್ ಗಿಲ್ (10) ಹಾಗೂ ಸಾಯಿ ಸುದರ್ಶನ್ (12) ಬೇಗನೆ ಔಟಾಗಿ ತಂಡಕ್ಕೆ ಆಘಾತ ನೀಡಿದರು. ಬಟ್ಲರ್ 19 ರನ್ಗಳಿಗೆ ವಿಕೆಟ್ ಒಪ್ಪಿಸಿದರು. ಮಧ್ಯಮ ಕ್ರಮಾಂಕದಲ್ಲಿ ನಿಶಾಂತ್ ಸಿಂಧೂ 20 ರನ್ ಗಳಿಸಿದರೂ ತಂಡಕ್ಕೆ ದೊಡ್ಡ ಮೊತ್ತ ತಂದುಕೊಡಲು ಸಾಧ್ಯವಾಗಲಿಲ್ಲ.

ಒಂದೆಡೆ ವಿಕೆಟ್ಗಳು ಉರುಳುತ್ತಿದ್ದರೂ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿದ ವಾಷಿಂಗ್ಟನ್ ಸುಂದರ್, ಆಕರ್ಷಕ ಅರ್ಧಶತಕ ಬಾರಿಸಿ ತಂಡ ಗೌರವಯುತ ಮೊತ್ತ ತಲುಪಲು ಕಾರಣರಾದರು. ಸುಂದರ್ 37 ಎಸೆತಗಳಲ್ಲಿ ಅಜೇಯ 50 ರನ್(37 ಎಸೆತ, 5 ಬೌಂಡರಿ) ಗಳಿಸಿ ತಂಡದ ಪರ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಕೊನೆಯಲ್ಲಿ ಅರ್ಷದ್ ಖಾನ್ ಬಿರುಸಿನ 15 ರನ್ (6 ಎಸೆತ, 2 ಸಿಕ್ಸ್) ರಾಹುಲ್ ತೇವಾಟಿಯಾ, ಜೇಸನ್ ಹೋಲ್ಡರ್, ರಶೀದ್ ಖಾನ್ ತಾಲ 7 ರನ್ ಹೊಡೆದರು ಔಟಾದರು. ಕಗಿಸೊ ರಬಾಡ 3 ರನ್ ಗಳಿಸಿ ಅಜೇಯರಾಗಿ ಉಳಿದರು.

3 ವಿಕೆಟ್ ಕಿತ್ತು ಗುಜರಾತ್ ತಂಡದ ಬ್ಯಾಟಿಂಗ್ ಬೆನ್ನೆಲುಬು ಮುರಿದ ರಸಿಖ್ ಸಲಾಮ್
ಆರ್ಸಿಬಿ ಪರ ಅತ್ಯುತ್ತಮ ಬೌಲಿಂಗ್ ಸಂಘಟಿಸಿದ ಯುವ ವೇಗಿ ರಸಿಖ್ ಸಲಾಮ್ 3 ವಿಕೆಟ್ ಕಿತ್ತು ಗುಜರಾತ್ ತಂಡದ ಬ್ಯಾಟಿಂಗ್ ಬೆನ್ನೆಲುಬು ಮುರಿದರು. ನಿಶಾಂತ್ ಸಿಂಧು, ರಾಹುಲ್ ತೇವಾಟಿಯಾ ಮತ್ತು ಅಪಾಯಕಾರಿ ರಶೀದ್ ಖಾನ್ ವಿಕೆಟ್ ಪಡೆಯುವಲ್ಲಿ ರಸಿಖ್ ಯಶಸ್ವಿಯಾದರು. ಇನ್ನು ಅನುಭವಿ ಬೌಲರ್ಗಳಾದ ಭುವನೇಶ್ವರ್ ಕುಮಾರ್ ಮತ್ತು ಜೋಶ್ ಹೇಜಲ್ವುಡ್ ತಲಾ 2 ವಿಕೆಟ್ ಪಡೆದರೆ ಕೃನಾಲ್ ಪಾಂಡ್ಯ 1 ವಿಕೆಟ್ ಪಡೆದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ





