Rain Alert : ಕರಾವಳಿಯಲ್ಲಿ ಇಂದು ಮಳೆ ಸುರಿಯುವ ಸಾಧ್ಯತೆ

ಕೆಲವು ದಿನಗಳ ವಿರಾಮದ ಬಳಿಕ ರಾಜ್ಯದಲ್ಲಿ ಮುಂಗಾರು ಮಳೆ ಮತ್ತೆ ಚುರುಕುಗೊಂಡಿದೆ. ಗುರುವಾರ ಬೆಂಗಳೂರು, ಕರಾವಳಿ ಹಾಗೂ ಹಲವು ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಿದ್ದು, ಇಂದು (ಶುಕ್ರವಾರ) ಕೂಡ ರಾಜ್ಯದ ವಿವಿಧ ಭಾಗಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಬೆಂಗಳೂರಿನಲ್ಲಿ ಹೇಗಿರಲಿದೆ ಹವಾಮಾನ?
ಬೆಂಗಳೂರಿನಲ್ಲಿ ದಿನವಿಡೀ ಮೋಡ ಕವಿದ ವಾತಾವರಣ ಇರಲಿದ್ದು, ನಗರದ ಹಲವು ಪ್ರದೇಶಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಗಂಟೆಗೆ 30-40 ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದ್ದು, ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ಹಾಗೂ ಗರಿಷ್ಠ ತಾಪಮಾನ 30 ಡಿಗ್ರಿ ಸೆಲ್ಸಿಯಸ್ ದಾಖಲಾಗುವ ನಿರೀಕ್ಷೆಯಿದೆ.
ಇದನ್ನು ಓದಿ : ರಾಜ್ಯದ ಬಹುತೇಕ ಭಾಗಗಳಿಗೆ ನಾಳೆ ಯೆಲ್ಲೋ ಅಲರ್ಟ್ ಘೋಷಣೆ

ಈ ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಹಲವೆಡೆ ಮಳೆಯಾಗಲಿದೆ. ದಕ್ಷಿಣ ಒಳನಾಡಿನ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳ ಕೆಲವೆಡೆ ಗಾಳಿಯೊಂದಿಗೆ ಮಳೆಯಾಗುವ ಸಾಧ್ಯತೆ ಇದೆ.
ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ ಹಾಗೂ ಯಾದಗಿರಿ ಜಿಲ್ಲೆಗಳಲ್ಲೂ ಮಳೆಯ ಮುನ್ಸೂಚನೆ ನೀಡಲಾಗಿದೆ.

ಕರಾವಳಿ ಭಾಗದಲ್ಲಿ ಎಚ್ಚರಿಕೆ
ಕರಾವಳಿ ಜಿಲ್ಲೆಗಳಲ್ಲಿ ಗಂಟೆಗೆ 40-50 ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇರುವುದರಿಂದ ಮೀನುಗಾರರು ಸಮುದ್ರಕ್ಕೆ ತೆರಳುವಾಗ ಎಚ್ಚರಿಕೆ ವಹಿಸುವಂತೆ ಹವಾಮಾನ ಇಲಾಖೆ ಸೂಚಿಸಿದೆ.
ಜುಲೈ 25ಕ್ಕೂ ಮಳೆ ಮುಂದುವರಿಕೆ
ಜುಲೈ 25ರಂದು ಕೂಡ ಕರಾವಳಿ, ದಕ್ಷಿಣ ಹಾಗೂ ಉತ್ತರ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಗಾಳಿಯೊಂದಿಗೆ ಮಳೆಯಾಗುವ ಸಾಧ್ಯತೆ ಇದೆ ಎಂದು ಇಲಾಖೆ ತಿಳಿಸಿದೆ.

ಮುಂಗಾರು ಕೊರತೆಯ ಆತಂಕ ಮುಂದುವರಿಕೆ
ರಾಜ್ಯದಲ್ಲಿ ಈ ಬಾರಿ ಮುಂಗಾರು ನಿರೀಕ್ಷಿತ ಪ್ರಮಾಣದಲ್ಲಿ ಸುರಿಯದ ಕಾರಣ ಸುಮಾರು ಶೇಕಡಾ 60ರಷ್ಟು ಮಳೆ ಕೊರತೆ ದಾಖಲಾಗಿದೆ. ಒಟ್ಟು 178 ತಾಲೂಕುಗಳಲ್ಲಿ ತೀವ್ರ ಮಳೆ ಕೊರತೆ ಕಂಡುಬಂದಿದ್ದು, 158 ತಾಲೂಕುಗಳಲ್ಲಿ ಮಾತ್ರ ಸಾಧಾರಣ ಮಳೆಯಾಗಿದೆ. ಪ್ರಮುಖ ಜಲಾಶಯಗಳಲ್ಲಿ ಕೇವಲ ಶೇಕಡಾ 40ರಷ್ಟು ನೀರು ಸಂಗ್ರಹ ಇರುವುದರಿಂದ ರೈತರು ಹಾಗೂ ಸಾರ್ವಜನಿಕರಲ್ಲಿ ಆತಂಕ ಮುಂದುವರಿದಿದೆ.
ಇದನ್ನು ನೋಡಿ : ಒಂದೇ ವರ್ಷಕ್ಕೆ ಬಿತ್ತು 10 ಕೋಟಿ TRAFFIC FINE..! – ರೂಲ್ಸ್ ಬ್ರೇಕ್ ಮಾಡಿದ್ರೇ ಹುಷಾರ್..!





