Rain Alert : ಮಹಾಮಳೆ ಆರ್ಭಟ, ಹೈ ಅಲರ್ಟ್ನಲ್ಲಿ ಕರಾವಳಿ ಭಾಗ; 5 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್!

ರಾಜ್ಯದಲ್ಲಿ ಮುಂಗಾರು ಮಳೆ ಮತ್ತೆ ತೀವ್ರಗೊಂಡಿದ್ದು, ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ಭಾರೀ ಮಳೆಯ ಅಬ್ಬರ ಮುಂದುವರಿದಿದೆ. ಭಾರತೀಯ ಹವಾಮಾನ ಇಲಾಖೆ (IMD) ಹಲವು ಜಿಲ್ಲೆಗಳಿಗೆ ರೆಡ್, ಆರೆಂಜ್ ಹಾಗೂ ಯೆಲ್ಲೋ ಅಲರ್ಟ್ ಘೋಷಿಸಿದ್ದು, ಸಾರ್ವಜನಿಕರು ಮತ್ತು ಪ್ರವಾಸಿಗರು ಹೆಚ್ಚಿನ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.
ಜಿಲ್ಲಾವಾರು ಅಲರ್ಟ್
ರೆಡ್ ಅಲರ್ಟ್ ಘೋಷಿತ ಜಿಲ್ಲೆಗಳು
- ದಕ್ಷಿಣ ಕನ್ನಡ
- ಶಿವಮೊಗ್ಗ
- ಚಿಕ್ಕಮಗಳೂರು

ಆರೆಂಜ್ ಅಲರ್ಟ್ ಘೋಷಿತ ಜಿಲ್ಲೆಗಳು
- ಉಡುಪಿ
- ಕೊಡಗು
- ಹಾಸನ
ಯೆಲ್ಲೋ ಅಲರ್ಟ್ ಘೋಷಿತ ಜಿಲ್ಲೆಗಳು
- ಬೆಳಗಾವಿ
- ಧಾರವಾಡ
- ಹಾವೇರಿ
- ಉತ್ತರ ಕನ್ನಡ

ಉಡುಪಿಯಲ್ಲಿ ಸಮುದ್ರ ಪ್ರಕ್ಷುಬ್ಧ
ಉಡುಪಿ ಜಿಲ್ಲೆಯಲ್ಲಿ ಗಂಟೆಗೆ 40ರಿಂದ 55 ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ. ಸಮುದ್ರದಲ್ಲಿ ಅಲೆಗಳ ಅಬ್ಬರ ಹೆಚ್ಚಿರುವ ಹಿನ್ನೆಲೆಯಲ್ಲಿ ಮುಂದಿನ ಐದು ದಿನಗಳ ಕಾಲ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಹವಾಮಾನ ಇಲಾಖೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ತಗ್ಗು ಪ್ರದೇಶದ ನಿವಾಸಿಗಳು ಕೂಡ ಎಚ್ಚರಿಕೆಯಿಂದ ಇರಲು ಸೂಚಿಸಲಾಗಿದೆ.
ಬೆಳ್ತಂಗಡಿಯಲ್ಲಿ ಪ್ರವಾಹದ ಆತಂಕ
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಪಲ್ಗುಣಿ ಮತ್ತು ನೇತ್ರಾವತಿ ನದಿಗಳು ಅಪಾಯದ ಮಟ್ಟದಲ್ಲಿ ಹರಿಯುತ್ತಿವೆ. ನೀರಿನ ರಭಸಕ್ಕೆ ಸವಣಾಲು–ಮಲ್ಲರೋಡಿ ಸಂಪರ್ಕಿಸುವ ಪ್ರಮುಖ ಸೇತುವೆ ಸಂಪೂರ್ಣ ಮುಳುಗಡೆಯಾಗಿದ್ದು, ಸಂಚಾರ ಕಡಿತಗೊಂಡಿದೆ. ನದಿ ಪಾತ್ರದ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಜಿಲ್ಲಾಡಳಿತ ಮನವಿ ಮಾಡಿದೆ.
ಇದನ್ನು ಓದಿ : ರಾಜ್ಯದಲ್ಲಿ ಎಲ್ಲೆಲ್ಲಿ ಎಷ್ಟೆಷ್ಟು ಮಳೆ? ಇಲ್ಲಿದೆ ಸಂಪೂರ್ಣ ಮಾಹಿತಿ

ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲೂ ಮಳೆಯ ಮುನ್ಸೂಚನೆ
ದಾವಣಗೆರೆ, ವಿಜಯನಗರ, ಮೈಸೂರು, ಚಾಮರಾಜನಗರ, ಮಂಡ್ಯ, ರಾಮನಗರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ ಹಾಗೂ ತುಮಕೂರು ಜಿಲ್ಲೆಗಳ ಅಲ್ಲಲ್ಲಿ ಮಳೆಯಾಗುವ ಸಾಧ್ಯತೆ ಇದೆ.
ಚಿತ್ರದುರ್ಗ ಜಿಲ್ಲೆಯಲ್ಲಿ ಮೋಡ ಕವಿದ ವಾತಾವರಣದೊಂದಿಗೆ ಒಂದೆರಡು ಕಡೆ ತುಂತುರು ಮಳೆಯಾಗುವ ನಿರೀಕ್ಷೆಯಿದೆ. ಮುಂದಿನ ಎರಡು ದಿನ ದಕ್ಷಿಣ ಒಳನಾಡಿನಲ್ಲಿ ಮಳೆಯ ತೀವ್ರತೆ ಸ್ವಲ್ಪ ಕಡಿಮೆಯಾಗಲಿದ್ದರೂ, ಆಗಸ್ಟ್ 4ರಿಂದ ಮತ್ತೆ ಮಳೆ ಚುರುಕುಗೊಳ್ಳುವ ಸಾಧ್ಯತೆ ಇದೆ.

ಇದನ್ನು ನೋಡಿ : ಶಾಸಕ B.P.HARISH ಮೇಲೆ ಮೊಟ್ಟೆ ಎಸೆದ್ರು – KPCC ಕಚೇರಿ ಮುಂದೆ ಭಾರೀ ಹೈಡ್ರಾಮಾ




