Rain : ದಕ್ಷಿಣಕನ್ನಡದಲ್ಲಿ ದಾಖಲೆಯ 348.5 ಮಿ.ಮೀ ಮಳೆ : ರಾಜ್ಯದಲ್ಲಿ ಎಲ್ಲೆಲ್ಲಿ ಎಷ್ಟೇಷ್ಟು ಮಳೆ? ಇಲ್ಲಿದೆ ಸಂಪೂರ್ಣ ಮಾಹಿತಿ

Rain : ರಾಜ್ಯದಲ್ಲಿ ಮುಂಗಾರು ಮತ್ತೆ ಚುರುಕುಗೊಂಡಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯ ಅಬ್ಬರ ಮುಂದುವರಿದಿದೆ. ಬೆಳ್ತಂಗಡಿ ತಾಲೂಕಿನ ಮುಂಡಾಜೆಯಲ್ಲಿ ಶನಿವಾರ ಬೆಳಗ್ಗೆಯಿಂದ ಸುರಿದ ಮಳೆಗೆ 348.5 ಮಿ.ಮೀ ದಾಖಲೆ ಪ್ರಮಾಣದ ಮಳೆ ದಾಖಲಾಗಿದೆ. ಅದೇ ತಾಲೂಕಿನ ಕಲ್ಮಂಜದಲ್ಲಿ 283.5 ಮಿ.ಮೀ ಮಳೆ ಸುರಿದಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ಮಾಹಿತಿ ನೀಡಿದೆ.
ಪ್ರವಾಹದ ಪರಿಸ್ಥಿತಿ
ಬಿಡುವಿಲ್ಲದೆ ಸುರಿದ ಧಾರಾಕಾರ ಮಳೆಯಿಂದ ಮುಂಡಾಜೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಪ್ರಮುಖ ನದಿಗಳು, ತೋಡುಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ತಗ್ಗು ಪ್ರದೇಶಗಳಲ್ಲಿ ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿದೆ.

ಕೃಷಿ ಭೂಮಿ, ಮನೆಗಳಿಗೆ ನುಗ್ಗಿದ ನೀರು
ಭಾರೀ ಮಳೆಯಿಂದ ನದಿ-ತೋಡುಗಳ ನೀರು ಸನಿಹದ ಪ್ರದೇಶಗಳಿಗೆ ನುಗ್ಗಿದ್ದು, ನೂರಾರು ಎಕರೆ ಭತ್ತದ ಗದ್ದೆಗಳು ಹಾಗೂ ಅಡಿಕೆ-ತೆಂಗಿನ ತೋಟಗಳು ಜಲಾವೃತಗೊಂಡಿವೆ. ಇದರಿಂದ ರೈತರು ಕೃಷಿ ಹಾನಿಯ ಆತಂಕದಲ್ಲಿದ್ದಾರೆ. ಇನ್ನು ತಗ್ಗು ಪ್ರದೇಶಗಳಲ್ಲಿರುವ ಹಲವು ಮನೆಗಳಿಗೂ ಪ್ರವಾಹದ ನೀರು ನುಗ್ಗಿದ್ದು, ನಿವಾಸಿಗಳು ತಮ್ಮ ವಸ್ತುಗಳನ್ನು ರಕ್ಷಿಸಿಕೊಳ್ಳಲು ಪರದಾಡುವಂತಾಗಿದೆ.
ಇದನ್ನು ಓದಿ : ಕರಾವಳಿಯಲ್ಲಿ ಮುಂದುವರಿದ ಮಳೆ – ಬೆಂಗಳೂರಲ್ಲಿ ತಂಪಾದ ವಾತಾವರಣ

ಉಜಿರೆ-ಧರ್ಮಸ್ಥಳ ಹೆದ್ದಾರಿಯಲ್ಲಿ ಪ್ರವಾಹ
ಧಾರಾಕಾರ ಮಳೆಯ ಪರಿಣಾಮ ರಸ್ತೆ ಸಂಚಾರಕ್ಕೂ ತೀವ್ರ ಅಟಚಣೆ ಉಂಟಾಗಿದೆ. ಧರ್ಮಸ್ಥಳಕ್ಕೆ ಸಂಪರ್ಕ ಕಲ್ಪಿಸುವ ಉಜಿರೆ-ಧರ್ಮಸ್ಥಳ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರವಾಹದ ನೀರು ರಸ್ತೆಯ ಮೇಲೆಯೇ ಹರಿದಿದ್ದು, ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದೆ.
ಮುಂಡಾಜೆ-ಧರ್ಮಸ್ಥಳ ರಸ್ತೆಯಲ್ಲಿ ಭೂಕುಸಿತ
ಅಷ್ಟೇ ಅಲ್ಲದೆ, ಮುಂಡಾಜೆ-ಧರ್ಮಸ್ಥಳ ರಸ್ತೆಯಲ್ಲಿ ಭಾರಿ ಪ್ರಮಾಣದ ಮಣ್ಣು ಮತ್ತು ಬಂಡೆಗಳು ರಸ್ತೆಗೆ ಉರುಳಿ ಭೂಕುಸಿತ ಸಂಭವಿಸಿದ್ದು, ಈ ಮಾರ್ಗದಲ್ಲಿ ವಾಹನ ಸಂಚಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ.

ಇದನ್ನು ನೋಡಿ : ಮದುವೆ ಆಗಿ 3 ತಿಂಗಳಿಗೆ ವಿವಾಹಿತೆ ಸಾ* – ಗಂಡನ ಎದುರೇ ಪ್ರಾಣ ಬಿಟ್ಟ ಪತ್ನಿ




