ತುಮಕೂರು : ಒಂಟಿ ಮಹಿಳೆ ಮೇಲೆ ದೌರ್ಜನ್ಯ | ಟೀ ಅಂಗಡಿ ಕಿತ್ತಾಕಲು ಯತ್ನ

ತುಮಕೂರು :

ಈ ಸಮಾಜವೇ ಹಾಗೆ ಬಲಿಷ್ಠನಾಗಿರೋನು ಇಡೀ ಊರನ್ನೇ ಕೊಳ್ಳೆ ಹೊಡೆದ್ರೂ ಯಾರೂ ಕೇಳೋದಕ್ಕೆ ಹೋಗಲ್ಲ. ಆದರೆ ಶಕ್ತಿ ಇಲ್ಲದವರ ಮೇಲೆ ಎಲ್ಲರೂ ಸವಾರಿ ಮಾಡೋದಕ್ಕೆ ಮುಂದಾಗ್ತಾರೆ. ಇದೀಗ ಕಲ್ಪತರು ನಾಡು ತುಮಕೂರು ತಾಲೂಕಿನ ಎತ್ತೇನಹಳ್ಳಿ ಗ್ರಾಮದಲ್ಲಿಯೂ ಇಂಥದ್ದೇ ಒಂದು ಘಟನೆ ನಡೆದಿದ್ದು, ಒಂಟಿ ಮಹಿಳೆಯ ಮೇಲೆ ದಬ್ಬಾಳಿಕೆ ನಡೆಸಿರುವ ವಿಚಾರ ಬೆಳಕಿಗೆ ಬಂದಿದೆ.

ಗೂಳೂರು ಹೋಬಳಿಯ ಹೇತ್ತೇನಹಳ್ಳಿ ಗ್ರಾಮದ ಮಾಕನಹಳ್ಳಿ ಮುಖ್ಯ ರಸ್ತೆಯ ಪಕ್ಕದಲ್ಲಿ ಸುಮಾರು ಎಂಟತ್ತು ವರ್ಷಗಳಿಂದ ಮಂಜಮ್ಮ ಎಂಬ ಮಹಿಳೆ ಸಣ್ಣದೊಂದು ಟೀ ಅಂಗಡಿಯನ್ನು ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಗಂಡ ಮರಣವಾದಾಗಿನಿಂದ ಇವರ ಇಡೀ ಕುಟುಂಬಕ್ಕೆ ಈ ಟೀ ಅಂಗಡಿಯೇ ಆಧಾರವಾಗಿತ್ತು. ಆದರೆ ಇದೀಗ ವ್ಯಕ್ತಿಯೊಬ್ಬ ದಬ್ಬಾಳಿಕೆ ನಡೆಸಿ ರಸ್ತೆ ಪಕ್ಕದಲ್ಲಿರುವ ಈ ಅಂಗಡಿಯನ್ನು ಕಿತ್ತಾಕೋದಕ್ಕೆ ಮುಂದಾಗಿದ್ದಾನೆ.

ಈ ಅಂಗಡಿ ರಸ್ತೆ ಪಕ್ಕದ ಸರ್ಕಾರಿ ಜಾಗದಲ್ಲಿದೆ. ರಸ್ತೆ ಮಾಡುವಾಗ ತಾನು ಅಂಗಡಿ ತೆರವುಗೊಳಿಸುತ್ತೀನಿ ಅಂತಾ ಮಂಜಮ್ಮ ಹೇಳಿದ್ದಾರಂತೆ. ಇನ್ನು ಗ್ರಾಮ ಪಂಚಾಯ್ತಿಯವರಾಗಲಿ, ಅಥವಾ ಬೇರೆ ಯಾವುದೇ ಇಲಾಖೆಯವರೇ ಆಗಲಿ ಈ ಅಂಗಡಿಯ ಬಗ್ಗೆ ಆಕ್ಷೇಪಣೆ ಮಾಡ್ತಿಲ್ವಂತೆ. ಆದರೆ ಮೂರನೇ ವ್ಯಕ್ತಿ ಬಂದು ಏಕಾಏಕಿ ಅಂಗಡಿಗೆ ಹಾಕಿದ್ದ ತಗಡಿನ ಶೀಟುಗಳನ್ನು ಕಿತ್ತು ಹಾಕುವ ಕೆಲಸ ಮಾಡ್ತಿದ್ದಾನೆ. ಇದನ್ನು ಕೇಳಲು ಹೋದರೆ ಅವಾಚ್ಯ ಶಬ್ಧಗಳಿಂದ ನಿಂದಿಸಿ ಬೆದರಿಕೆ ಹಾಕ್ತಿದ್ದಾನಂತೆ.

ಈ ಬಗ್ಗೆ ಮಂಜಮ್ಮ ಈಗಾಗಲೇ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ತಿಳಿಸಿದರೂ ಯಾವುದೇ ಪ್ರಯೋಜನವಾಗಿಲ್ವಂತೆ. ಜೊತೆಗೆ ಪೊಲೀಸ್ ಠಾಣೆಗೆ ದೂರೂ ನೀಡಿದರೂ ಯಾವುದೇ ಕ್ರಮವಾಗಿಲ್ಲ. ಹೀಗಾಗಿ ತನ್ನ ಕುಟುಂಬಕ್ಕೆ ಆಧಾರವಾಗಿರುವ ಈ ಅಂಗಡಿಯನ್ನು ಉಳಿಸಿಕೊಡಿ. ತನಗೆ ತುಂಬಾ ಕಷ್ಟವಿದೆ. ಸಾಲ ಕೂಡ ಮಾಡಿಕೊಂಡಿದ್ದೇನೆ. ಈ ಅಂಗಡಿಯನ್ನು ನಂಬೇ ಬದುಕುತ್ತಿದ್ದೀನಿ. ಹೀಗಾಗಿ ತನಗೆ ಅಂಗಡಿಯನ್ನು ಉಳಿಸಿಕೊಡಿ ಅಂತಾ ಮಂಜಮ್ಮ ಕಣ್ಣೀರಿಟ್ಟಿದ್ದಾರೆ.

ಅದೇನೇ ಇರಲಿ ಟೀ ಅಂಗಡಿಯನ್ನಿಟ್ಟುಕೊಂಡು ಜೀವನ ನಡೆಸುತ್ತಿದ್ದ ಈ ಒಂಟಿ ಮಹಿಳೆ ಮೇಲೆ ಈ ರೀತಿ ದಬ್ಬಾಳಿಕೆ ನಡೆಸುತ್ತಿರೋದು ಮಾತ್ರ ಬೇಸರದ ಸಂಗತಿ. ಇನ್ನು ಮೇಲಾದ್ರೂ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಿ ಈ ಮಹಿಳೆಗೆ ನ್ಯಾಯ ಒದಗಿಸಿಕೊಡುವ ಕೆಲಸ ಮಾಡಬೇಕಿದೆ.

Author:

...
Sushmitha N

Copy Editor

prajashakthi tv

share
No Reviews