ತುಮಕೂರು : ಸರ್ವಾಧಿಕಾರಿ ಆಡಳಿತ ನಡೆಸಲು ಮುಂದಾಯ್ತಾ ತುಮಕೂರು ಜಿಲ್ಲಾಡಳಿತ?

ತುಮಕೂರು :

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತಮ್ಮ ಹಕ್ಕುಗಳನ್ನು ಕೇಳೋದಕ್ಕೆ ಪ್ರತಿಯೊಬ್ಬ ಪ್ರಜೆಗೂ ಅವಕಾಶವಿದೆ. ನಮ್ಮ ದೇಶದ ಸಂವಿಧಾನವೇ ದೇಶದ ಪ್ರಜೆಗಳಿಗೆ ಪ್ರತಿಭಟನೆಯ ಹಕ್ಕನ್ನು ನೀಡಿದೆ. ಆದರೆ ತುಮಕೂರು ಜಿಲ್ಲೆಯಲ್ಲಿ ಪ್ರತಿಭಟನೆ ನಡೆಸೋದಕ್ಕೂ ಅವಕಾಶ ಇಲ್ವಾ ಅನ್ನೋ ಪ್ರಶ್ನೆ ಮೂಡ್ತಾ ಇದೆ. ಜಿಲ್ಲಾಡಳಿತದ ಈ ಹೊಸ ಆದೇಶಕ್ಕೆ ಹೋರಾಟಗಾರರಿಂದ ತೀವ್ರ ವಿರೋಧ ವ್ಯಕ್ತವಾಗ್ತಿದೆ.

ತುಮಕೂರು ಜಿಲ್ಲಾಧಿಕಾರಿ ಶುಭಕಲ್ಯಾಣ್‌ ಅವರು ಶಾಂತಿಯುತ ಪ್ರತಿಭಟನೆ, ಸಭೆ, ಧರಣಿಗಳನ್ನು ನಡೆಸುವುದರ ಬಗ್ಗೆ ಹೊರಡಿಸಿರುವ ಹೊಸ ಆದೇಶ ಇದೀಗ ತೀವ್ರ ವಿವಾದಕ್ಕೆ ಕಾರಣವಾಗಿದೆ. ಈ ಆದೇಶದನ್ವಯ ಯಾವುದೇ ರೀತಿಯ ಸಾರ್ವಜನಿಕ ಸಭೆ, ಧರಣಿ ಅಥವಾ ಪ್ರತಿಭಟನೆ ನಡೆಸುವುದಾದರೆ ಅದರ ಮೊದಲು ಸಂಬಂಧಪಟ್ಟ ಹಲವಾರು ಇಲಾಖೆಯಿಂದ, ಮುಖ್ಯವಾಗಿ ಪೊಲೀಸ್ ಇಲಾಖೆಯಿಂದ ಅನುಮತಿ ಪಡೆಯಬೇಕೆಂದು ತಿಳಿಸಲಾಗಿದೆ. ಆದೇಶದಲ್ಲಿ ವಿದ್ಯುತ್ ಬಳಕೆ, ಧ್ವನಿವರ್ಧಕ ಉಪಕರಣಗಳ ಬಳಕೆಗೂ ಸಕ್ಷಮ ಪ್ರಾಧಿಕಾರಗಳ ಅನುಮತಿ ಅಗತ್ಯವಿದೆ ಎಂಬ ಅಂಶವಿದೆ.

ಈ ಆದೇಶದ ವಿರುದ್ಧ ಸಿಪಿಐಎಂ ಉಗ್ರವಾಗಿ ಖಂಡಿಸಲು ಮುಂದಾಗಿದೆ, ಪಕ್ಷದ ಜಿಲ್ಲಾ ಕಾರ್ಯದರ್ಶಿ ಎನ್.ಕೆ. ಸುಬ್ರಮಣ್ಯ ಮಾತನಾಡಿ, ಈ ಆದೇಶವನ್ನು ಸರ್ವಾಧಿಕಾರಿ ಧೋರಣೆ ಅಂತಾ ವ್ಯಾಖ್ಯಾನಿಸಿದ್ದಾರೆ. ಪ್ರತಿಭಟನೆ, ಧರಣಿ ನಡೆಸುವುದು ನಮ್ಮ ಸಂವಿಧಾನಾತ್ಮಕ ಹಕ್ಕು ಇದನ್ನು ನಿರ್ಬಂಧಿಸುವುದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲೇ ನಂಬಿಕೆ ಇಲ್ಲದಂತೆ ಆಗುತ್ತದೆ. ಜಿಲ್ಲಾಡಳಿತ ಕೂಡಲೇ ಈ ಆದೇಶವನ್ನು ಹಿಂಪಡೆಯಬೇಕು. ಇದನ್ನು ಮುಂದುವರಿಸಿದರೆ, ಪ್ರಗತಿಪರ ಸಂಘಟನೆಗಳೊಂದಿಗೆ ಚರ್ಚಿಸಿ ಜಿಲ್ಲಾಧಿಕಾರಿ ಕಚೇರಿಯ ಮುಂದೆ ತೀವ್ರ ಹೋರಾಟ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಇನ್ನು ಈ ಬೆಳವಣಿಗೆ ಮುಂದಿನ ದಿನಗಳಲ್ಲಿ ಜಿಲ್ಲಾಡಳಿತ ಮತ್ತು ಹೋರಾಟಗಾರರ ನಡುವೆ ಗಂಭೀರ ಸಂಘರ್ಷಕ್ಕೆ ಕಾರಣವಾಗುವ ಸಾಧ್ಯತೆಯಿದೆ. ಇದು ಧರ್ಮನಿರತರ ಧ್ವನಿಯನ್ನು ಹತ್ತಿಕ್ಕುವ ಪ್ರಯತ್ನ ಅಂತಾ ಜಿಲ್ಲಾಡಳಿತದ ವಿರುದ್ಧ ಹೋರಾಟಗಾರರು ಆರೋಪಿಸುತ್ತಿದ್ದಾರೆ. ಹೀಗಾಗಿ ಜಿಲ್ಲಾಧಿಕಾರಿಗಳ ಮುಂದಿನ ನಡೆ ಕುತೂಹಲ ಕೆರಳಿಸಿದೆ.

Author:

...
Sushmitha N

Copy Editor

prajashakthi tv

share
No Reviews