ಚಿಕ್ಕಬಳ್ಳಾಪುರ :
ಹುತಾತ್ಮ ಯೋಧನ ಶರೀರವನ್ನು ಹೊತ್ತು ಹೋಗುತ್ತಿರುವ ಆಂಬುಲೆನ್ಸ್ ಅನ್ನು ಸುತ್ತುವರಿದು, ಪಾರ್ಥಿವ ಶರೀರಕ್ಕೆ ಹೂಮಾಲೆ ಅರ್ಪಿಸಿ ಅಂತಿಮ ನಮನ ಸಲ್ಲಿಸುತ್ತಿರುವ ಜನರು ಈ ಎಲ್ಲಾ ದೃಶ್ಯಗಳು ಕಂಡುಬಂದಿದ್ದು ಬಯಲು ಸೀಮೆ ಚಿಕ್ಕಬಳ್ಳಾಪುರದಲ್ಲಿ ಕಳೆದ ಎರಡು ಮೂರು ದಿನಗಳಿಂದ ಭಾರತ- ಪಾಕ್ ನಡುವೆ ಯುದ್ಧ ನಡೆಯುತ್ತಿದ್ದು, ಪಾಕಿಸ್ತಾನದ ಅಪ್ರಚೋದಿತ ಗುಂಡಿಗೆ ದಾಳಿಗೆ ಆಂಧ್ರ ಮೂಲದ ಯೋಧ ಹುತಾತ್ಮರಾಗಿದ್ದು, ಚಿಕ್ಕಬಳ್ಳಾಪುರದಲ್ಲಿ ವೀರ ಯೋಧನಿಗೆ ಅಂತಿಮ ವಂದನೆ ಸಲ್ಲಿಸಲಾಯಿತು
ಪಾಕ್‌ನ ಅಪ್ರಚೋದಿತ ದಾಳಿಗೆ ಯೋಧ ಮುರಳಿ ನಾಯಕ್ ಹುತಾತ್ಮರಾಗಿದ್ದು, ಇಂದು ಮಧ್ಯಾಹ್ನ 1:30ಕ್ಕೆ ದೆಹಲಿಯಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮೃತದೇಹವನ್ನು ತರಲಾಯಿತು. ಅಲ್ಲಿಂದ ಆಂದ್ರಪ್ರದೇಶದ ಸ್ವಗ್ರಾಮಕ್ಕೆ ತೆರಳುವ ಮಾರ್ಗ ಮದ್ಯೆ ಚಿಕ್ಕಬಳ್ಳಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾವಿರಾರು ಜನ ಜಮಾಯಿಸಿದ್ದರು, ಈ ವೇಳೆ ಪಾರ್ಥಿವ ಶರೀರಕ್ಕೆ ಹೂಗುಚ್ಚ ಅರ್ಪಿಸಿ ಜೈಕಾರ ಕೂಗುವ ಮೂಲಕ ಜನರು ಅಂತಿಮ ನಮನ ಸಲ್ಲಿಸಿದ್ದಾರೆ. ಹುತಾತ್ಮ ಯೋಧನನ್ನು ನೋಡಲು ಸಾವಿರಾರು ಜನ ಜಮಾಯಿಸಿದ್ರಿಂದ ನೂಕು ನುಗ್ಗಲು ಏರ್ಪಟ್ಟಿತ್ತು.
ಏರ್ಪೋರ್ಟ್ ನಿಂದ ದೇವನಹಳ್ಳಿ ಮೂಲಕವಾಗಿ ಚಿಕ್ಕಬಳ್ಳಾಪುರ, ಬಾಗೇಪಲ್ಲಿ ಮಾರ್ಗವಾಗಿ ಆಂದ್ರಪ್ರದೇಶದ ಸತ್ಯಸಾಯು ಜಿಲ್ಲೆಯ ಕಲ್ಲಿತಾಂಡಕ್ಕೆ ಮೃತ ದೇಹವನ್ನು ತೆಗೆದುಕೊಂಡು ಹೋಗಲಾಯಿತು. ಮಳೆಯ ನಡುವೆಯೂ ದೇಶ ಸೇವೆಯಲ್ಲಿ ಹುತಾತ್ಮನಾದ ಯೋಧನಿಗೆ ನೂರಾರು ಜನರು ಕಂಬನಿ ಮಿಡಿದರು. ಒಟ್ಟಾರೆ ಪಾಕ್ ನ ಅಪ್ರಚೋದಿತ ದಾಳಿಗೆ ಹುತಾತ್ಮನಾದ ಯೋಧನಿಗೆ ಚಿಕ್ಕಬಳ್ಳಾಪುರದಲ್ಲಿ ಅಂತಿಮ ನಮನ ಸಲ್ಲಿಸಿ ಸ್ವಗ್ರಾಮಕ್ಕೆ ಕಳಿಸಲಾಯಿತು. ಆಂದ್ರಪ್ರದೇಶದ ಕಲ್ಲಿತಾಂಡದಲ್ಲಿ ಯೋಧನ ಅಂತಿಮ ವಿಧಿ ವಿಧಾನ ನೆರವೇರಲಿದೆ.