ತುಮಕೂರು : ತುಮಕೂರಿನ 33ನೇ ವಾರ್ಡ್ಗೆ ಸೇರುವ ಚಂದ್ರಮೌಳೇಶ್ವರ ಬಡಾವಣೆಯ ನಿವಾಸಿಗಳು ಕಳೆದ ಆರು ತಿಂಗಳಿನಿಂದ ಭಾರೀ ಪರದಾಟ ಅನುಭವಿಸುತ್ತಿದ್ದಾರೆ. ಈ ಏರಿಯಾದಲ್ಲಿ ಹರಿದು ಹೋಗುವ ರಾಜಕಾಲುವೆ ಸಂಪೂರ್ಣವಾಗಿ ಕೊಳಚೆ ನೀರಿನಿಂದ ತುಂಬಿ ಕೊಂಡಿದ್ದು, ಫುಲ್ ಬ್ಲಾಕ್ ಆಗಿದೆ. ಹೀಗಾಗಿ ಮಳೆ ಬಂದಾಗ ಮನೆಗಳೊಳಗೆ ಕೊಳಚೆ ನೀರು ನುಗ್ಗುತ್ತಿದೆ. ಇನ್ನೊಂದೆಡೆ ಇಲ್ಲಿಯ ಜನರು ಗಬ್ಬು ವಾಸನೆಯಲ್ಲಿಯೇ ಬದುಕುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಇನ್ನು ಈ ಸಮಸ್ಯೆಗೆ ಪರಿಹಾರ ನೀಡುವಂತೆ ಸಾರ್ವಜನಿಕರು ಅನೇಕ ಬಾರಿ ಮಹಾನಗರ ಪಾಲಿಕೆಗೆ ದೂರು ನೀಡಿದರೂ ಯಾವುದೇ ಸ್ಪಂದನೆ ಸಿಗುತ್ತಿಲ್ಲ ಎನ್ನುತ್ತಿದ್ದಾರೆ. ದಿನೇದಿನೇ ಸಮಸ್ಯೆ ಹೆಚ್ಚಾಗುತ್ತಿದ್ದರೂ ಅಧಿಕಾರಿಗಳು ಮಾತ್ರ ಈ ಕಡೆ ತಲೆಹಾಕಿಯೂ ನೋಡ್ತಿಲ್ಲ. ಪಾಲಿಕೆ ಅಧಿಕಾರಿಗಳ ನಿರ್ಲಕ್ಷ್ಯ ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಇದು ಹೆಸರಿಗಷ್ಟೇ ಸ್ಮಾರ್ಟ್ ಸಿಟಿ. ಆದರೆ ಇದು ಕೊಳಚೆ ಸಿಟಿಯಾಗಿ ಬದಲಾಗ್ತಿದೆ. ರಾಜಕಾಲುವೆ ಬ್ಲಾಕ್ ಆಗಿ ಕೊಳಚೆ ನೀರು ನಿಂತು ಕೊಂಡಿರೋದರಿಂದ ಆರೋಗ್ಯದ ಸಮಸ್ಯೆ ಕೂಡ ಹೆಚ್ಚಾಗ್ತಿದೆ. ಮಕ್ಕಳು, ವಯಸ್ಸಾದವರಲ್ಲಿ ಆರೋಗ್ಯದ ಸಮಸ್ಯೆಗಳು ಹೆಚ್ಚಾಗುತ್ತಿವೆ. ಇದಕ್ಕೆಲ್ಲಾ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಸ್ಥಳೀಯರು ಸಿಟ್ಟು ಹೊರ ಹಾಕಿದ್ದಾರೆ.
ಇನ್ನು ಈ ರಾಜಕಾಲುವೆ ಪಕ್ಕದಲ್ಲಿಯೇ ಹೊಸದಾಗಿ ಲೇಔಟ್ ಕೂಡ ನಿರ್ಮಾಣವಾಗಿದ್ದು, ಕೆಲವರು ಜಲ್ಲಿ, ಮಣ್ಣುಗಳನ್ನು ತಂದು ಇಲ್ಲಿ ಸುರಿದು ರಾಜಕಾಲುವೆಯನ್ನೇ ಮುಚ್ಚಿ ಬಿಟ್ಟಿದ್ದಾರೆ. ಇದು ಕೂಡ ರಾಜಕಾಲುವೆ ಬ್ಲಾಕ್ ಆಗೋದಕ್ಕೆ ಮುಖ್ಯ ಕಾರಣವಾಗಿದೆ. ಇಲ್ಲಿನ ಸ್ಥಳೀಯರು ಶಾಶ್ವತ ಪರಿಹಾರಕ್ಕಾಗಿ ಒತ್ತಾಯಿಸುತ್ತಿದ್ದು, ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿ ಇಲ್ಲಿನ ಜನರ ಸಮಸ್ಯೆಗೆ ಪರಿಹಾರ ಕಲ್ಪಿಸಿಕೊಡ್ತಾರಾ ಅನ್ನೋದನ್ನು ಕಾದು ನೋಡಬೇಕಿದೆ.