ತುಮಕೂರು:
ತುಮಕೂರು ಗ್ರಾಮಾಂತರ ಕ್ಷೇತ್ರಕ್ಕೆ ಒಳಪಡುವ ಹರಳೂರು ಹಾಲು ಉತ್ಪಾದಕರ ಸಂಘಕ್ಕೆ ನಡೆದ ಚುನಾವಣೆ ಭಾರೀ ಕುತೂಹಲವನ್ನು ಹುಟ್ಟುಹಾಕಿತ್ತು. ಯಾವ ಎಂಎಲ್ಎ ಚುನಾವಣೆಗೂ ಕಮ್ಮಿಯಿಲ್ಲ ಅನ್ನೋ ರೀತಿ ಹೈಪ್ ಪಡೆದಿತ್ತು. ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ಜಟಾಪಟಿಯಲ್ಲಿ ಕೊನೆಗೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಮೇಲುಗೈ ಸಾಧಿಸಿದ್ದಾರೆ. ೪೭ ವರ್ಷದ ಏಕಚಕ್ರಾಧಿಪತ್ಯಕ್ಕೆ ಅಂತ್ಯ ಹಾಡಿದ ಮಹಿಳೆ, ಹರಳೂರು ಹಾಲು ಉತ್ಪಾದಕರ ಸಂಘದ ಅಧ್ಯಕ್ಷೆಯ ಪಟ್ಟಕ್ಕೇರಿದ್ದಾರೆ.
ಹರಳೂರು ಹಾಲು ಉತ್ಪಾದಕರ ಸಂಘ ಪ್ರಾರಂಭವಾದಾಗಿನಿಂದಲೂ ಇಲ್ಲಿಯವರೆಗೆ ಒಬ್ಬರೇ ಅಧ್ಯಕ್ಷರಾಗಿದ್ದರು. ಹಾಲು ಉತ್ಪಾದಕರ ಸಂಘದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದ್ದ ಎಚ್.ಕೆ.ಕುಮಾರ್ ಸತತ ೪೭ ವರ್ಷಗಳ ಕಾಲ ಅಧ್ಯಕ್ಷರಾಗಿ ಅಧಿಕಾರ ನಡೆಸಿದ್ದರು. ಆದರೆ ಈ ಬಾರಿ ಈ ಏಕಚಕ್ರಾಧಿಪತ್ಯಕ್ಕೆ ಅಂತ್ಯ ಹಾಡುವಲ್ಲಿ ಟಿ.ಎನ್.ವಿಶಾಲಾಕ್ಷ್ಮಮ್ಮ ಯಶಸ್ವಿಯಾಗಿದ್ದಾರೆ.
ಹರಳೂರು ಡೈರಿಯ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಎಚ್.ಕೆ.ಕುಮಾರಯ್ಯ ಮತ್ತು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಟಿ.ಎನ್.ವಿಶಾಲಾಕ್ಷ್ಮಮ್ಮ ಸ್ಪರ್ಧಿಸಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ಕಾತ್ಯಾಲಮ್ಮ ಮತ್ತು ರಾಜಣ್ಣ ಸ್ಪರ್ಧಿಸಿದ್ದರು. ಎರಡೂ ಪಕ್ಷಗಳ ಬೆಂಬಲಿತ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಅಭ್ಯರ್ಥಿಗಳು ೧೨ ಮತಗಳ ಪೈಕಿ ತಲಾ ಆರು ಮತಗಳನ್ನು ಪಡೆದು ಸಮಬಲ ಸಾಧಿಸಿದ್ದಾರೆ. ಈ ಹಿನ್ನೆಲೆ ಚೀಟಿ ಎತ್ತುವ ಮೂಲಕ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನ ಆಯ್ಕೆ ಮಾಡಲಾಯಿತು, ಅಂಗನವಾಡಿ ಮಗುವಿನಿಂದ ಚೀಟಿ ಎತ್ತಿಸುವ ಮೂಲಕ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಆಯ್ಕೆ ಮಾಡಲಾಯಿತು. ಈ ಪ್ರಕ್ರಿಯೆಯಲ್ಲಿ ಅಧ್ಯಕ್ಷೆಯಾಗಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ವಿಶಾಲಾಕ್ಷ್ಮಮ್ಮ ಅಧ್ಯಕ್ಷೆಯಾಗಿ ಆಯ್ಕೆಯಾಗುವ ಮೂಲಕ ಇತಿಹಾಸ ಬರೆದಿದ್ದಾರೆ.
ಸಂಘದ ಉಪಾಧ್ಯಕ್ಷರಾಗಿ ರಾಜಣ್ಣ ಆಯ್ಕೆಯಾದರು. ಡೈರಿಯ ಅಧ್ಯಕ್ಷರಾಗಿ ವಿಶಾಲಾಕ್ಷ್ಮಮ್ಮ ಆಯ್ಕೆಯಾಗುತ್ತಿದ್ದಂತೆ ಅವರನ್ನು ಬೆಂಬಲಿಸಿದ ಸದಸ್ಯರು, ಗ್ರಾಮಸ್ಥರು ಹಾರಹಾಕಿ, ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಗೆದ್ದ ಅಭ್ಯರ್ಥಿಗಳು ಗ್ರಾಮದ ದೇವಸ್ಥಾನಗಳಿಗೆ ಭೇಟಿ ನೀಡಿ ದೇವರ ಆಶೀರ್ವಾದ ಪಡೆದರು.
ಒಟ್ಟಿನಲ್ಲಿ ೪೭ ವರ್ಷಗಳ ಕಾಲ ಒಂದೇ ವ್ಯಕ್ತಿಯ ಕೈಯಲ್ಲಿದ್ದ ಹರಳೂರು ಹಾಲು ಉತ್ಪಾದಕರ ಸಂಘದ ಆಡಳಿತ ಕೊನೆಗೂ ಈಗ ಮಹಿಳೆಯೊಬ್ಬರ ಕೈಸೇರಿದ್ದು, ಅಧಿಕಾರದ ಚುಕ್ಕಾಣಿ ಹಿಡಿದ ವಿಶಾಲಾಕ್ಷ್ಮಮ್ಮ ಗ್ರಾಮದಲ್ಲಿ ಹೊಸ ಇತಿಹಾಸ ಬರೆದಿದ್ದಂತೂ ಸತ್ಯ.